ದಾವಣಗೆರೆ ವಿಶ್ವ ಸಮ್ಮೇಳನದ ಬಗ್ಗೆ ಸಿಎಂ ಗಮನಕ್ಕೆ ತರುವೆ: ತಂಗಡಗಿ

ದಾವಣಗೆರೆ, ಆ. 21- ದಾವಣಗೆರೆ ಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕೆಂಬ ಪ್ರಸ್ತಾಪ ಇರುವ ಬಗ್ಗೆ ತಮಗೆ ಮಾಹಿತಿ ಇದೆ. ಅಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ `ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಘೋಷಣೆಯಡಿ ರಾಜ್ಯಾದ್ಯಂತ ವರ್ಷವಿಡೀ ಕನ್ನಡದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಕಾವೇರಿ ನೀರಿನ ವಿಚಾರದಲ್ಲಿ ಪ್ರತಿಭಟನೆ ಮಾಡುವ ಯಾವುದೇ ನೈತಿಕತೆ ಬಿಜೆಪಿಗೆ ಉಳಿದಿಲ್ಲ. ಕಾವೇರಿ ನೀರು ಹಂಚಿಕೆ ಬಗ್ಗೆ ಆ.23ರಂದು ಸಿಎಂ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಂಗಡಗಿ ಹೇಳಿದರು.

ಎಸ್ಸಿ ಪಟ್ಟಿಯಲ್ಲಿರುವ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ಇದೆ. ಸಮಿತಿಯ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚಿಸಿ, ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಈ ವೇಳೆ ಕೆಪಿಸಿಸಿ ವಕ್ತಾರ ಡಿ.ಬಸವರಾಜ ಮತ್ತಿತರರಿದ್ದರು.

error: Content is protected !!