ಹರಿಹರ ಕ್ಷೇತ್ರದಲ್ಲಿ ಶ್ರೀನಿವಾಸ್‌ ನೇತೃತ್ವದಲ್ಲೇ ಪಕ್ಷದ ಸಂಘಟನೆ

ಹರಿಹರ ಕ್ಷೇತ್ರದಲ್ಲಿ ಶ್ರೀನಿವಾಸ್‌ ನೇತೃತ್ವದಲ್ಲೇ ಪಕ್ಷದ ಸಂಘಟನೆ

ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಬಿ. ಮಂಜಪ್ಪ ಘೋಷಣೆ

ಹರಿಹರ ಮೇ 16- ನಂದಿಗಾವಿ ಶ್ರೀನಿವಾಸ್‌ ಚುನಾವಣೆಯಲ್ಲಿ ಸೋತಿರಬಹುದು. ಆದರೆ 60 ಸಾವಿರ ಜನರ ಮನಸ್ಸು ಗೆದ್ದಿದ್ದಾರೆ. ಅವರ ನೇತೃತ್ವದಲ್ಲೇ ಹರಿಹರ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಸಂಘಟನೆ ಸೇರಿದಂತೆ, ಸರ್ಕಾರದ ಮಟ್ಟದಲ್ಲಿ ಕೆಲಸಗಳು ನಡೆಯಲಿವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಬಿ.ಮಂಜಪ್ಪ ತಿಳಿಸಿದ್ದಾರೆ.

ಅವರು ಮಂಗಳವಾರ ಸಂಜೆ ಹರಿಹರದ ಹೆಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಮಲೇಬೆನ್ನೂರು ಮತ್ತು ಹರಿಹರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಹಮ್ಮಿಕೊಂಡಿದ್ದ ಹರಿಹರ ತಾಲ್ಲೂಕು ಕಾಂಗ್ರೆಸ್‌ ಮುಖಂಡರ, ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಮತ್ತು ಪಕ್ಷದ ವಿರುದ್ಧವಾಗಿ ಯಾರಾರು ಕೆಲಸ ಮಾಡಿದ್ದಾರೆಂಬ ಬಗ್ಗೆ ಕೆಪಿಸಿಸಿಗೆ ಮಾಹಿತಿ ಇದೆ. ಅಂತಹವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಮಂಜಪ್ಪ ಹೇಳಿದರು.

ನಾನು ಸಹ ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಪಕ್ಷ ನನಗೆ ಟಿಕೆಟ್‌ ನೀಡಲಿಲ್ಲ. ಪಕ್ಷದ ಟಿಕೆಟ್‌ ಪಡೆದ ಶಾಂತನಗೌಡ ಪರ ಕೆಲಸ ಮಾಡಿ, ಅವರ ಗೆಲುವಿಗೆ ಶ್ರಮಿಸಿದ್ದೇನೆ. ಇಲ್ಲಿಯೂ ಸಹ ಟಿಕೆಟ್‌ ಸಿಗದ ಕೆಲವರು ಏನು ಮಾಡಿದ್ದಾರೆ ಎಂಬ ಬಗ್ಗೆ ನಮಗೂ ಮಾಹಿತಿ ಇದೆ. ಜಿಲ್ಲೆಯಲ್ಲಿ 6 ಕಡೆ ಕಾಂಗ್ರೆಸ್‌ ಗೆದ್ದು, ಹರಿಹರದಲ್ಲಿ ಮಾತ್ರ ಸೋತಿರುವುದಕ್ಕೆ ಎಲ್ಲರಿಗೂ ತುಂಬಾ ಬೇಸರವಿದೆ.

ಮುಖ್ಯಮಂತ್ರಿ ಯಾರೇ ಆಗಲಿ ಅವರ ಬಳಿ ಶ್ರೀನಿವಾಸ್‌ ನೇರವಾಗಿ ಹೋಗಿ ಬರಲು ಅವಕಾಶ ಮಾಡಿಕೊಡುತ್ತೇವೆ. ಅಷ್ಟೇ ಅಲ್ಲ, ಅವರಿಗೆ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವ ಬಗ್ಗೆಯೂ ಪ್ರಯತ್ನ ಮಾಡುತ್ತೇವೆ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಜಿಲ್ಲಾ ಮಂತ್ರಿಗಳಾಗಲಿದ್ದು, ನಿಮ್ಮ ಎಲ್ಲಾ ಕೆಲಸಗಳನ್ನು ಅವರಿಂದ ಮಾಡಿಸುತ್ತೇವೆ ಎಂದು ಮಂಜಪ್ಪ ಭರವಸೆ ನೀಡಿದರು. 

ಮುಂಬರುವ ಜಿ.ಪಂ., ತಾ.ಪಂ. ಸೇರಿದಂತೆ ಲೋಕಸಭಾ ಚುನಾವಣೆಯನ್ನು ಹರಿಹರ ಕ್ಷೇತ್ರದಲ್ಲಿ ಶ್ರೀನಿವಾಸ್‌ ಅವರ ನೇತೃತ್ವದಲ್ಲೇ ನಡೆಸಲಾಗುವುದು. ಮುಂದೊಂದು ದಿನ ಶ್ರೀನಿವಾಸ್‌ ಶಾಸಕರಾಗುವುದು ನಿಶ್ಚಿತ ಎಂದು ಕಾಂಗ್ರೆಸ್‌ ಕಾರ್ಯಕರ್ತರನ್ನು ಮಂಜಪ್ಪ ಹುರಿದುಂಬಿಸಿದರು.

ನಂದಿಗಾವಿ ಶ್ರೀನಿವಾಸ್‌ ಮಾತನಾಡಿ ನಾನು ಸೋಲಿನಿಂದ ಧೃತಿಗೆಟ್ಟಿಲ್ಲ. ನೀವು ಧೃತಿಗೆಡಬೇಡಿ. ಕೇವಲ 15 ದಿನಗಳಲ್ಲಿ ಸುಮಾರು 60 ಸಾವಿರ ಜನ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಇನ್ನೆರಡೇ ದಿನ ಸಮಯ ಸಿಕ್ಕಿದ್ದರೆ 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೆವು ಎಂದು ಅಭಿಪ್ರಾಯ ಪಟ್ಟರು.

ಕೆಪಿಸಿಸಿ ಸದಸ್ಯ ಕೆ. ರೇವಣಸಿದ್ದಪ್ಪ, ಹರಿಹರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಲ್‌.ಬಿ. ಹನುಮಂತಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಎಸ್‌.ಜಿ. ಪರಮೇಶ್ವರಪ್ಪ, ಜಿ. ಮಂಜುನಾಥ್‌ ಪಟೇಲ್‌, ಸಿರಿಗೆರೆ ರಾಜಣ್ಣ, ಜಿಗಳಿ ಆನಂದಪ್ಪ, ಭಾನುವಳ್ಳಿ ಪುಟ್ಟಪ್ಪ, ಬೆಳ್ಳೂಡಿ ದುಂಡಿ ಸಿದ್ದೇಶ್‌, ಹನಗವಾಡಿ ಕುಮಾರ್‌, ಗೋವಿನಹಾಳ್‌ ರಾಜಣ್ಣ, ಆದಾಪುರದ ವೀರಭದ್ರಪ್ಪ, ಸಿಗ್ಬತ್ತುಲ್ಲಾ, ಎಂ.ಎಸ್‌. ಬಾಬುಲಾಲ್‌, ಬಿ.ಕೆ. ಸೈಯದ್‌ ಎಜಾಜ್, ಸೈಯದ್‌ ಜಾಕೀರ್‌, ಬಿ. ಮುಗ್ಧಂ, ಕಿರಣ್‌ ಭೂತೆ, ಹರಳಹಳ್ಳಿ ಮಂಜು, ಬೆಳ್ಳೂಡಿ ಕೃಷ್ಣಮೂರ್ತಿ, ಎಳೆಹೊಳೆ ಕರಿಬಸಪ್ಪ, ಕಮಲಾಪುರದ ಮಲ್ಲೇಶ್‌, ಮೀರ್‌ ಆಜಾಂ, ಸವಿತಾ ನಾಯ್ಕ, ಇನ್ನೂ ಅನೇಕರು ಮಾತಾನಾಡಿ, ಶ್ರೀನಿವಾಸ್‌ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿದರು. ಅಧಿಕಾರದಲ್ಲಿದ್ದ ಪಕ್ಷಕ್ಕೆ ಮೋಸ ಮಾಡಿದವರ ನಡೆಯನ್ನು ಖಂಡಿಸಿದರು.

ಹಿರಿಯರಾದ ಎಂ. ಬಸಪ್ಪ, ಕೃಷ್ಣಾ ಸಾ ಭೂತೆ, ಕೆ. ಜಡಿಯಪ್ಪ, ಹಂಚಿನ ನಾಗಣ್ಣ, ಮಲೇಬೆನ್ನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಗುಬ್ಬಿ ರಂಗನಾಥ್‌, ವಾಸನ ಮಂಜಣ್ಣ, ಕುಣೆಬೆಳಕೆರೆ ರುದ್ರಪ್ಪ, ಪೂಜಾರ್‌ ಹಾಲೇಶಪ್ಪ, ಕೆ.ಪಿ. ಗಂಗಾಧರ್‌, ಕೆ.ಜಿ. ಲೋಕೇಶ್‌, ಚಿಟ್ಟಕ್ಕಿ ನಾಗರಾಜ್‌, ಸಾಬೀರ್‌ ಅಲಿ, ಎಂ.ಬಿ. ಫೈಜು, ಎ. ಆರೀಫ್‌ ಅಲಿ, ಷಾ ಅಬ್ರಾರ್‌, ನಯಾಜ್‌, ಭೋವಿ ಶಿವು, ಭೋವಿ ಕುಮಾರ್, ಪಿ.ಹೆಚ್‌. ಶಿವಕುಮಾರ್‌, ಕುಂಬಳೂರು ವಾಸು, ಕೊಕ್ಕನೂರು ಸೋಮಶೇಖರ್‌, ಬನ್ನಿಕೋಡು ರೇವಣಸಿದ್ದಪ್ಪ, ಕೊಮಾರನಹಳ್ಳಿಯ ಎಸ್‌.ಎಂ. ಮಂಜುನಾಥ್‌ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು. 

error: Content is protected !!