ಬಡವರ ಜೀವನಕ್ಕೆ ಗೃಹಲಕ್ಷ್ಮಿ ಸಹಕಾರಿ

ಬಡವರ ಜೀವನಕ್ಕೆ ಗೃಹಲಕ್ಷ್ಮಿ ಸಹಕಾರಿ

ಜಗಳೂರು ಕ್ಷೇತ್ರದಲ್ಲಿ ಮತ ಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್

ಜಗಳೂರು, ಏ.25- ಬಡತನ ಜೀವನಾಧಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದ್ದು, ಈ ಯೋಜನೆಯಿಂದ ಲಕ್ಷಾಂತರ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಗುರುವಾರ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಹನುಮಂತಾಪುರ, ತರಳಬಾಳು ಕೇಂದ್ರ, ಹಿರೇಮಲ್ಲನಹೊಳೆ, ಮುಸ್ಟೂರು, ಕಲ್ಲೇದೇವರಪುರ, ದೊಣ್ಣೆಹಳ್ಳಿ, ತೋರಣಗಟ್ಟೆ, ಬಿದರಕೆರೆ, ಬಿಸ್ತುವಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಇತ್ತೀಚೆಗೆ ಯುಗಾದಿ ಹಬ್ಬಕ್ಕೆ ಮನೆಗಳಿಗೆ ಹೊಸ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದರಿಂದ ಸಾವಿರಾರು ಹೆಣ್ಣು ಮಕ್ಕಳು ತಮ್ಮ ಮನೆಗಳಿಗೆ ಟಿ.ವಿ., ಪ್ರಿಜ್, ವಾಷಿಂಗ್ ಮೆಷಿನ್, ಬಂಗಾರ ಖರೀದಿಸಿದ್ದಾರೆ. ಇತ್ತೀಚೆಗೆ ಪಿ.ಯು.ಸಿ ಪರೀಕ್ಷೆ ಫಲಿತಾಂಶದಲ್ಲಿ ಕರ್ನಾಟಕಕ್ಕೆ ನಂಬರ್ 1 ಸ್ಥಾನ ಪಡೆದ ವಿದ್ಯಾರ್ಥಿಯೂ ಸಹ ನನ್ನ ವಿದ್ಯಾಭ್ಯಾಸಕ್ಕೆ ಗೃಹಲಕ್ಷ್ಮೀ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿರುವುದನ್ನು ಸ್ಮರಿಸಿದರು.

ಕಾಂಗ್ರೆಸ್ ಪಕ್ಷ ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿಗೆ ಭಾಜನವಾಗಿದ್ದು, ಜಗಳೂರು ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.98 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.

ಜಗಳೂರು ಮತ್ತು ಹರಪನಹಳ್ಳಿ ತಾಲ್ಲೂಕುಗಳು ಜೋಡಿ ತಾಲ್ಲೂಕುಗಳಾಗಿದ್ದು, ಈ ಎರಡೂ ತಾಲ್ಲೂಕುಗಳ ಅಭಿವೃದ್ಧಿಯನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಲಾಗುವುದು ಎಂದ ಅವರು ತಾಲ್ಲೂಕಿನಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಜಗಳೂರು ತಾಲ್ಲೂಕು ಬರ ಪ್ರದೇಶ ಇತ್ತೇ ಎಂಬಂತೆ ನೀರಾವರಿ ಪ್ರದೇಶ ಮಾಡಲು ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು 22 ಕೆರೆ ಮತ್ತು 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಕೆಲಸ ಮಾಡಿದ್ದು, ಇನ್ನು ಹೆಚ್ಚಿನ ಕೆಲಸ ಮಾಡುವ ಬಗ್ಗೆ ಈಗಾಗಲೇ ರೂಪುರೇಷೆ ತಯಾರಿಸಲಾಗಿದ್ದು, ಇದರಲ್ಲಿ ನಾನೂ ಸಹ ಭಾಗಿಯಾಗುತ್ತಿರುವುದು ಹರುಷ ತಂದಿದೆ ಎಂದರು.

ಜಗಳೂರು ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕುಡಿವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ಈ ಭಾಗದ ಶಾಸಕರಾದ ದೇವೇಂದ್ರಪ್ಪನವರ ಸಹಕಾರದಿಂದ ಪ್ರತಿ ಮನೆ-ಮನೆಗೂ ನೀರು ಸರಬರಾಜು ಮಾಡಲಾಗುವುದು ಎಂದರು.

ಜಗಳೂರು ತಾಲ್ಲೂಕು ಹಿಂದುಳಿದ ಪ್ರದೇಶ ಎಂದು ನಂಜುಂಡಪ್ಪ ವರದಿಯಲ್ಲಿದ್ದು, ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ವರದಿಯಲ್ಲಿರುವಂತೆ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಬಿ. ದೇವೇಂದ್ರಪ್ಪ, ಮಾಜಿ ಶಾಸಕರಾದ ಗುರುಸಿದ್ದನ ಗೌಡ್ರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಶೀರ್ ಅಹಮದ್, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕೆ.ಪಿ. ಪಾಲಯ್ಯ, ಮುಖಂಡರಾದ ಡಾ.ಟಿ.ಜಿ. ರವಿಕುಮಾರ್, ಕಲ್ಲೇಶ್ ರಾಜ್ ಪಾಟೀಲ್, ಸುರೇಶ್ ಗೌಡ್ರು, ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!