ಮಾದಿಗ ಸಮಾಜಕ್ಕೆ ಅವಹೇಳನ

ಮಾದಿಗ ಸಮಾಜಕ್ಕೆ ಅವಹೇಳನ

ಹರಿಹರ, ಮೇ 16 – ಶಾಸಕ ಬಿ.ಪಿ. ಹರೀಶ್ ಮಾದಿಗ ಸಮಾಜದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು  ಆರೋಪಿಸಿ ಮಾದಿಗ ಸಮಾಜ ದವರು ಪ್ರತಿಭಟನೆ ಮಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದ ಪೌರಕಾರ್ಮಿಕರಾದ ಹುಲುಗಪ್ಪ, ಸದಾಶಿವ, ಪ್ರಭಾಕರ್, ಗುರು ಸೇರಿದಂತೆ ಸುಮಾರು 35 ಕ್ಕೂ ಹೆಚ್ಚು ಪೌರ ಕಾರ್ಮಿಕರು ದಾವಣಗೆರೆ ನಗರದ ಕಾಫಿ ಡೇ ಹತ್ತಿರ ಶಾಸಕ ಬಿ.ಪಿ. ಹರೀಶ್ ಅವರಿಗೆ, ಶಾಲು ಹಾರವನ್ನು ಹಾಕಿ ಸನ್ಮಾನ ಮಾಡುವುದಕ್ಕೆ ಹೋಗಿದ್ದಾರೆ. ಆಗ ಹರೀಶ್ ಅವಹೇಳನ ಮಾಡಿದ್ದಾರೆ ಎಂದು ದೂರಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗದ ವರದಿಯಂತೆ ಮೀಸಲಾತಿ ಹೆಚ್ಚಿಸಲಾಗಿದೆ. ಆದರೂ ನೀವು ನನಗೆ ಮತ ಹಾಕಿಲ್ಲ ಎಂದಿದ್ದಾರೆ. ಮುಂದುವರೆದು ಅವರು ಅವಹೇಳನಕಾರಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಮಾಯಕೊಂಡ ಮಾಜಿ ಶಾಸಕ ಪ್ರೊ. ಲಿಂಗಣ್ಣ ಮತ್ತು ಹರಿಹರ ತಾಲ್ಲೂಕು ಬಿಜೆಪಿ ಉಸ್ತುವಾರಿ ಜೀವನಮೂರ್ತಿ ಆಗಮಿಸಿ ನಗರಸಭೆ ಸದಸ್ಯರಾದ ಪಿ.ಎನ್. ವಿರುಪಾಕ್ಷಪ್ಪ, ರಜನಿಕಾಂತ್, ಹನುಮಂತಪ್ಪ, ಸಮುದಾಯದ ಮುಖಂಡರಾದ ಹೆಚ್. ನಿಜಗುಣ, ಎಂ.ಬಿ. ಅಣ್ಣಪ್ಪ, ಜಿ.ವಿ. ವೀರೇಶ್, ಕೊಟ್ರೇಶ್, ಬಿ.ಎನ್. ರಮೇಶ್, ಎಂ.ಎಸ್. ಆನಂದ್, ನಾಗಭೂಷಣ, ಪೌರ ಕಾರ್ಮಿಕರ ಸಂಘದ ಮುಖಂಡರಾದ ಗುರು, ಸದಾಶಿವ, ಹುಲುಗಪ್ಪ, ಪ್ರಭಾಕರ್ ಸೇರಿದಂತೆ ಹಲವು ಪ್ರಮುಖರ ಜೊತೆಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಲಿಂಗಣ್ಣ ನನಗೆ ಶಾಸಕ ಹರೀಶ್ ಅವರು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಬೆಳಿಗ್ಗೆ ನನಗೆ ಬಿ.ಪಿ. ಹೆಚ್ಚಾಗಿ ಸ್ವಲ್ಪ ಸಮಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಪೌರಕಾರ್ಮಿಕರ ಸನ್ಮಾನದ ವೇಳೆ ಅರಿಯದೇ ಕೆಲವು ಮಾತನಾಡಿರಬಹುದು. ತಪ್ಪಾಗಿದ್ದರ ಬಗ್ಗೆ ಕ್ಷಮೆ ಕೋರುವೆ ಎಂದಿದ್ದಾರೆ ಎಂದರು.

ಈ ವೇಳೆ ಹುಲುಗಪ್ಪ, ಸದಾಶಿವ, ಪ್ರಭಾಕರ್, ಗುರು, ಹೆಚ್. ನಿಜಗುಣ, ಎಂ.ಬಿ. ಅಣ್ಣಪ್ಪ, ನಾಗಭೂಷಣ ಮಾತನಾಡಿ, ನಮ್ಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಬಾರದು. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದರು.

ಅವರು ಎಲ್ಲೋ ಇದ್ದು ಕ್ಷಮೆ ಯಾಚಿಸುವುದಾಗಿ ಹೇಳಿದಾಗ ನಾವು ಅದನ್ನು ಕೇಳಿಕೊಂಡು ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ. ಸಮುದಾಯದ ಮುಂದೆ ಬಂದು ಅವರು ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಸಮುದಾಯದ ಮುಖಂಡರಾದ ನಗರಸಭೆಯ ಸದಸ್ಯರಾದ ಪಿ.ಎನ್. ವಿರುಪಾಕ್ಷಪ್ಪ, ರಜನಿಕಾಂತ್ ಹನುಮಂತಪ್ಪ ಮುಖಂಡರಾದ ಹೆಚ್. ನಿಜಗುಣ, ಎಂ.ಬಿ. ಅಣ್ಣಪ್ಪ, ಜಿ.ವಿ. ವೀರೇಶ್, ನಾಗಭೂಷಣ, ಎಂ.ಎಸ್.‌ಆನಂದ್, ಮೈಲಾರಪ್ಪ, ಬಿ.ಎನ್. ರಮೇಶ್, ಪಿ.ಜೆ. ಮಹಾಂತೇಶ್, ಹೆಚ್. ಶಿವಪ್ಪ, ಭಾನುವಳ್ಳಿ ಮಂಜುನಾಥ್, ಎ.ಕೆ. ಶಿವರಾಮ್‌, ಕೊಟ್ರೇಶ್, ಕೊತ್ವಾಲ ಹನುಮಂತಪ್ಪ, ಡಿ. ಹನುಮಂತಪ್ಪ, ಸಂತೋಷ ನೋಟದರ್, ರಘುಪತಿ, ಸುಧಾಕರ್, ದೇವೇಂದ್ರಪ್ಪ, ಹುಲುಗಪ್ಪ, ಗುರು, ಚೆನ್ನಕೇಶವ, ಕೇಶವ ಮತ್ತಿತರರು ಹಾಜರಿದ್ದರು.

error: Content is protected !!