ಮೋದಿಜೀ ಅಂತಹ ನಾಯಕ ಮತ್ತೆ ಸಿಗೋಲ್ಲ

ಮೋದಿಜೀ ಅಂತಹ ನಾಯಕ ಮತ್ತೆ ಸಿಗೋಲ್ಲ

ಹೊನ್ನಾಳಿ ತಾಲ್ಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚನೆ

ಹೊನ್ನಾಳಿ, ಏ.25- ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅಂತಹ ಇನ್ನೊಬ್ಬ ನಾಯಕ 100 ವರ್ಷ ಕಳೆದರೂ ಈ ದೇಶಕ್ಕೆ ಸಿಗುವುದಿಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಅರಕೆರೆ, ಹಿರೇಗೋಣಿಗೆರೆ, ಬೇಲಿಮಲ್ಲೂರು ಗ್ರಾಮಗಳಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವ ದಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಮೋದಿ  ಅಂತಹ ನಾಯಕ ಬೇರೆ ದೇಶದಲ್ಲಿ ಜನಿಸಿದ್ದರೆ, ದೇಶದ ಜನರೆಲ್ಲರೂ ಅವರನ್ನು ಪೂಜಿಸುತ್ತಿದ್ದರು. ಇಂತಹ ಮೇರು ವ್ಯಕ್ತಿತ್ವದ ಮೋದಿ ಜೀ ಅವರನ್ನು ವಿರೋಧಿಸುವಂತಹ ಮಾನಸಿಕ ಸ್ಥಿತಿ ಕೆಲವರಲ್ಲಿದೆ. ಇಂತಹ ಮನಸ್ಥಿತಿ ಇರುವ ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಯಾವ ಲಾಭವಿದೆ ? ಎಂದು ಪ್ರಶ್ನಿಸಿದರು.

ಮೋದಿ ಕೇವಲ ವ್ಯಕ್ತಿಯಲ್ಲ. ಅವರೊಂದು ಶಕ್ತಿ. 23 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಅವರ ರಾಜಕೀಯ ಜೀವನದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ 16 ರಿಂದ 18 ತಾಸು ಈ ದೇಶದ ಸರ್ವರ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನೀವು ಕಮಲದ ಗುರುತಿಗೆ ಮತ ಹಾಕಿ, ನನ್ನು ಇಲ್ಲಿ ಗೆಲ್ಲಿಸಿದರೆ ಅಲ್ಲಿ ಮೋದಿ ಅವರು ಗೆದ್ದು ಪ್ರಧಾನಿ ಆಗುತ್ತಾರೆ. ಇಂತಹ ಅವಕಾಶವನ್ನು ನೀವ್ಯಾರೂ ಬಿಡಬಾರದು ಎಂದು ಮನವಿ ಮಾಡಿದರು.

60 ವರ್ಷಗಳ ಕಾಲ ಈ ದೇಶದ ಜನರ ಹಣ ಲೂಟಿ ಮಾಡಿದ ಕಾಂಗ್ರೆಸ್ ಈಗ ನಿಮ್ಮ ಮರಣದ ನಂತರ ನಿಮ್ಮ ಆಸ್ತಿಯಲ್ಲಿ ಶೇ.55 ರಷ್ಟ ಪಾಲು ಸರ್ಕಾರಕ್ಕೆ, 45 ರಷ್ಟ ಪಾಲು ಆಸ್ತಿಯ ಒಡೆಯರ ವಾರಸುದಾರರಿಗೆ ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದು ಈ ದೇಶದ ಜನರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅವರ ಬ್ರದರ್ಸ್‌ಗಳ ಗೂಂಡಾ ವರ್ತನೆ, ಭಯೋತ್ಪಾದನೆ ಹೆಚ್ಚಾಗುತ್ತದೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ ಎಂದರು.

ಮೋದಿ ಜೀ ಪ್ರಧಾನಿಯಾದ ಮೇಲೆ ದೇಶದಲ್ಲಿ ಭಯೋತ್ಪಾದನೆ ಮಟ್ಟಹಾಕಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮತ್ತೆ ಜಿಹಾದಿಗಳು ತಲೆ ಎತ್ತುತ್ತಿದ್ದಾರೆ. ಅಂತಹವರು ತಲೆ ಎತ್ತ ಬಾರದು ಎಂದರೆ, ನಾವು-ನೀವು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು. ಅವರು ಪ್ರಧಾನಿ ಆಗಬೇಕು ಎಂದರೆ, ಇಲ್ಲಿ ಗಾಯತ್ರಿ ಅಕ್ಕ ಹೆಚ್ಚು ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಮನೆ ಮನೆಗೂ ತೆರಳಿ ಗಾಯಿತ್ರಿ ಅಕ್ಕನ ಪರ ಮತಯಾಚಿಸಬೇಕು ಎಂದು ಕರೆ ನೀಡಿದರು.

ಮಂಡಲ ಅಧ್ಯಕ್ಷ ಸುರೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಬಿಜೆಪಿ ಮುಖಂಡ ಮಹೇಶ್, ಕುಬೇರಪ್ಪ, ಸಂತೋಷ್‌ ಕುಮಾರ್, ಎಲ್.ಕೆ ಮಂಜಪ್ಪ, ಪ್ರಭು, ರವಿ, ಹೊನ್ನಪ್ಪ, ರಾಮಣ್ಣ, ಶಾಂತರಾಜ್ ಪಾಟೀಲ್, ಹನುಮಂತಪ್ಪ, ಅರಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಯೋಗೇಶ್, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.

error: Content is protected !!