ಚುನಾವಣಾ ರಜೆ ಮತದಾನಕ್ಕೆ ಬಳಸಿ : ರಾಜೇಶ್ವರಿ ಎನ್‌. ಹೆಗಡೆ

ಚುನಾವಣಾ ರಜೆ ಮತದಾನಕ್ಕೆ ಬಳಸಿ : ರಾಜೇಶ್ವರಿ ಎನ್‌. ಹೆಗಡೆ

ದಾವಣಗೆರೆ, ಏ.25- ಮತದಾನಕ್ಕೆ ಮೀಸಲಾದ ರಜೆ ಮೋಜು ಮಸ್ತಿಗೆ ಬಳಸಿಕೊಳ್ಳದೇ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್‌. ಹೆಗಡೆ ತಿಳಿಸಿದರು.

ನಗರದ ಎಸ್‌.ಬಿ.ಸಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ವರ್ಷಗಳ ಹಿಂದೆ ಮಹಿಳೆಯರಿಗೆ ಮತದಾನ ಮಾಡಲು ಹಕ್ಕೇ ಇರಲಿಲ್ಲ. ಇಂದು ಎಲ್ಲರಿಗೂ ಸ್ವಾತಂತ್ರ್ಯವಿದೆ, ಮತದಾನದ ಹಕ್ಕೂ ಇದೆ. ಆದ್ದರಿಂದ ನಿಮ್ಮ ಅಮೂಲ್ಯವಾದ ಮತ ಸದೃಢ ದೇಶ ಕಟ್ಟಲು ಅಡಿಗಲ್ಲು ಆಗಬೇಕು ಎಂದು ಹೇಳಿದರು.

ನಮ್ಮದು ಪ್ರಜಾಪ್ರಭುತ್ವ ದೇಶ, ನಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಸಂಪೂರ್ಣ ಅಧಿಕಾರವಿದೆ ಆದ್ದರಿಂದ ನಿರ್ಭೀತಿಯಿಂದ ಮೇ 7ಕ್ಕೆ ಮತದಾನ ಮಾಡುವಂತೆ ಹೇಳಿದರು.

ನಾನೊಬ್ಬ ಮತ ಚಲಾಯಿಸ ದಿದ್ದರೆ ಏನಾಗುತ್ತೆ ಎನ್ನುವ ಮನಸ್ಥಿತಿ ಬದಲಿಸಿ ಆಸೆ, ಆಮಿಷಕ್ಕೆ ತುತ್ತಾಗದೇ ಮತದಾನ ಮಾಡುವ ಮೂಲಕ ಇತರರನ್ನೂ  ಜಾಗೃತಗೊಳಿಸಿ ಎಂದು ಹೇಳಿದರು.

ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಮೂಲಕ ದೇಶಕ್ಕೆ ಉತ್ತಮ ನಾಗರಿಕರಾಗಿ. ಯಾರಿಗಾದರೂ ತೊಂದರೆ, ಅನ್ಯಾಯವಾಗಿದ್ದರೆ ಕಾನೂನಿನ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖ, ಹಿರಿಯ ವಕೀಲರಾದ ಎಲ್‌. ದಯಾನಂದ, ಬಿ.ಜಿ. ಗೀತಾ ಪಾಟೀಲ್‌, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.

error: Content is protected !!