ವಾಲ್ಮೀಕಿ-ನಾಯಕ ಸಮಾಜಕ್ಕೆ ಜಿಲ್ಲಾಧಿಕಾರಿ ಭರವಸೆ
ದಾವಣಗೆರೆ, ಮಾ.15- ಭಾನುವಳ್ಳಿಯಲ್ಲಿ ತೆರವುಗೊಳಿಸಿರುವ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತ ಸೇರಿದಂತೆ ಇತರೆ ವೃತ್ತಗಳನ್ನು ಕಾನೂನು ಪ್ರಕಾರ ಅಧಿಕೃತವಾಗಿ ನಿರ್ಮಿಸಿಕೊಡುತ್ತೇವೆ. ಅಲ್ಲಿಯವರೆಗೆ ತಾಳ್ಮೆ ಮತ್ತು ಶಾಂತಿಯಿಂದಿರಿ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಭಾನುವಳ್ಳಿಯಲ್ಲಿ ತೆರವುಗೊಳಿಸಿರುವ ಮದಕರಿ ನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತವನ್ನು ಕೂಡಲೇ ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಜಿಲ್ಲಾ ವಾಲ್ಮೀಕಿ-ನಾಯಕ ಸಮಾಜದವರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಭಾನುವಳ್ಳಿ ಗ್ರಾಮದಲ್ಲಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ಉಂಟಾದ ಗೊಂದಲಗಳ ಹಿನ್ನೆಲೆೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ವರದಿ ನೀಡುವಂತೆ ತಿಳಿಸಿದ್ದೆವು. ವರದಿ ಪ್ರಕಾರ ಗ್ರಾಮದಲ್ಲಿರುವ ಮಹಾದ್ವಾರ, ವೃತ್ತಗಳು, ಪ್ರತಿಮೆಗಳು ಅಧಿಕೃತವಾಗಿವೆ ಎಂದು ಹೇಳಿದ್ದರ ಹಿನ್ನೆಲೆಯಲ್ಲಿ ನಾವು ಮಹಾದ್ವಾರ ಹಾಗೂ ವೃತ್ತಗಳ ನಾಮಫಲಕಗಳನ್ನು ತೆರವುಗೊಳಿಸಿದ್ದೇವೆ ಎಂದು ಹೇಳಿದರು.
ನಾವು ತೆರವು ಮಾಡಿರುವ ಮಹಾದ್ವಾರ ಅಲ್ಲಿ 25 ವರ್ಷಗಳಿಂದ ಇತ್ತು ಎಂಬ ಕಾರಣಕ್ಕಾಗಿ ನಿಮಗೆ ನೋವಾಗಿರುವುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ, ಅದನ್ನು ಕಾನೂನು ಪ್ರಕಾರ ಅಧಿಕೃತವಾಗಿ ಯಾರೂ ಪ್ರಶ್ನೆ ಮಾಡದ ರೀತಿಯಲ್ಲಿ ಸರ್ಕಾರದ ಅನುದಾನದಲ್ಲೇ ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮದು. ಈ ಬಗ್ಗೆ ಈಗಾಗಲೇ ಹರಿಹರ ತಹಶೀಲ್ದಾರ್ ಮತ್ತು ತಾ.ಪಂ. ಇಓ ಜೊತೆ ಮತನಾಡಿದ್ದೇನೆ. ರಾಜನಹಳ್ಳಿ ಶ್ರೀಗಳೂ ಸಹ ಈ ವಿಚಾರವಾಗಿ ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿ, ಪ್ರತಿಭಟನೆ ಕೈ ಬಿಟ್ಟು ನಮಗೆ ಸಮಯಾವಕಾಶ ಕೊಡಿ ಎಂದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ವಕೀಲ ಗುಮ್ಮನೂರು ಮಲ್ಲಿಕಾರ್ಜುನ್, ಯುವ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ, ವಾಲ್ಮೀಕಿ ಯುವ ಸೇನೆಯ ರಾಜ್ಯಾಧ್ಯಕ್ಷ ಬೆಂಗ ಳೂರಿನ ತುಳಸೀರಾಮ್ ಅವರುಗಳು ಮಾತನಾಡಿ, ವೃತ್ತವನ್ನು ವಾರದೊಳಗೆ ಪುನರ್ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ವಕೀಲ ಎನ್.ಎಂ. ಆಂಜನೇಯ ಗುರೂಜಿ, ದಾವಣಗೆರೆ ತಾ. ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ, ಮಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್, ಹರಿಹರ ತಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮುಖಂಡರಾದ ದೇವರಬೆಳಕೆರೆಯ ರುದ್ರಪ್ಪ, ಮಹೇಶ್ವರಪ್ಪ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್, ಬೇವಿನಹಳ್ಳಿ ಮಹೇಶ್, ವಕೀಲರಾದ ಚನ್ನಬಸಪ್ಪ ಬಿಳಿಚೋಡು, ಹರಪನಹಳ್ಳಿ ಉಚ್ಚಂಗೆಪ್ಪ, ಹೊಳೆಸಿರಿಗೆರೆಯ ಪರಶುರಾಮ್, ಗುಮ್ಮನೂರು ಶಂಭಣ್ಣ, ಶ್ಯಾಗಲೆ ಮಂಜುನಾಥ್, ಗೋಶಾಲೆ ಸುರೇಶ್, ಪ್ರವೀಣ್, ಶಶಿ, ಫಣಿಯಾಪುರ ಲಿಂಗರಾಜ್, ಶ್ರೀಮತಿ ವಿಜಯಶ್ರೀ ಮಹೇಂದ್ರಕುಮಾರ್, ಶಾಮನೂರು ಪ್ರವೀಣ್, ಹರಿಹರದ ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ಮಕರಿ ಪಾಲಾಕ್ಷಪ್ಪ, ಕೆ. ಬೇವಿನಹಳ್ಳಿ ಹಾಲೇಶ್, ಸಾಲಕಟ್ಟಿ ಸಿದ್ದಪ್ಪ, ಬಸವರಾಜ್ ದೊಡ್ಮನವಿ, ಭರತ್ ಮುದೇನೂರು, ಹರಳಹಳ್ಳಿ ಮಂಜು, ಭಾನುವಳ್ಳಿಯ ಪುಟ್ಟಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.