ದಾವಣಗೆರೆ, ನ. 26- ತಮಿಳುನಾಡಿನ ಸೇಲಂನಲ್ಲಿ ಕಳೆದ ವಾರ ನಡೆದ ದಕ್ಷಿಣ ಭಾರತ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಕಾರ್ಪೊರೇಷನ್ ವ್ಯಾಯಾಮ ಶಾಲೆಯ ಕ್ರೀಡಾಪಟು ಡಿ. ಸುಜಿಲ್ ಅಹಮದ್ ಅವರು ಸಬ್ ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಡೆಡ್ಲಿಫ್ಟ್ ನಲ್ಲಿ 252.5 ಕೆಜಿ ತೂಕ ಎತ್ತುವುದರ ಮೂಲಕ ನೂತನ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಒಟ್ಟಾರೆ 637.5 ಕೆ.ಜಿ. ಎತ್ತುವ ಮೂಲಕ ಚಿನ್ನದ ಪದಕ ಪಡೆದಿರುತ್ತಾರೆ.
ಸುಜಿಲ್ ಅಹಮದ್, ಅಂತರರಾಷ್ಟ್ರೀಯ ಪವರ್ ಲಿಫ್ಟರ್ ಹೆಚ್.ದಾದಾಪೀರ್ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಮಹಿಳಾ ಪೊಲೀಸ್ ಅಧಿಕಾರಿ ಶ್ರೀಮತಿ ಕೆ.ಎನ್. ಶೈಲಜಾ ದಂಪತಿ ಪುತ್ರ.
ಸುಜಿಲ್ ಅಹಮದ್ ಅವರನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಹಾಗೂ ವ್ಯಾಯಾಮ ಶಾಲೆಯ ತರಬೇತಿದಾರ ಎನ್.ಹನುಮಂತ ಮತ್ತು ಇತರರು ಅಭಿನಂದಿಸಿದ್ದಾರೆ.