ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನಕುಮಾರ್ ಟೀಕೆ
ದಾವಣಗೆರೆ,ನ.26- ವಕ್ಫ್ ವಿಚಾರದಲ್ಲಿ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಮುಖಂಡರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರಸನ್ನಕುಮಾರ್ ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನ್ವರ್ ಮಾನಪ್ಪಾಡಿ ಸಲ್ಲಿಸಿದ ವರದಿಯಲ್ಲಿ ಏಳು ಸಾವಿರ ಪುಟಗಳಿದ್ದು, ಕರ್ನಾಟಕದಲ್ಲಿ ವಕ್ಫ್ ಖಾತೆಯಲ್ಲಿ 54,000 ಎಕರೆ ಭೂಮಿ ಇದ್ದು, ಇದರಲ್ಲಿ ಸುಮಾರು 27,000 ಎಕರೆ ಪರಭಾರೆಯಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಅದರಲ್ಲಿ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ, ವರದಿಯಲ್ಲಿ ಹಳೇಬಾತಿಯಲ್ಲಿರುವ ‘ಹಜರತ್ ಶಾವಲಿ ದರ್ಗಾ’ ಇದಕ್ಕೆ ಸಂಬಂಧಿಸಿದ 58 ಎಕರೆ ಭೂಮಿಯಲ್ಲಿ 8 ಎಕರೆ ಮಾತ್ರ ಉಳಿದಿದ್ದು ಬಾಕಿ ಒತ್ತುವರಿ ಆಗಿರುತ್ತದೆ ಎಂದು ತಿಳಿಸಿರುತ್ತಾರೆ.
ಆದರೆ, ಆ ವರದಿಯಲ್ಲಿ ಪಿ.ಜೆ. ಬಡಾವಣೆಗೆ ಸಂಬಂಧಿಸಿದಂತೆ ಪ್ರಸ್ತಾಪವೇ ಇರುವುದಿಲ್ಲ ಎಂದಾಗ, 2012 ರಲ್ಲಿ ಅನ್ವರ್ ಮಾನಪ್ಪಾಡಿ ವರದಿ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರು ಪಿ.ಜೆ ಬಡಾವಣೆಗೆ ಸಂಬಂಧಪಟ್ಟಂತೆ ಸೂಚನೆ ನೀಡಿದ್ದರು ಎಂಬುದು ಹಸಿ ಸುಳ್ಳು.
2015 ರಲ್ಲಿ ಪಹಣಿಯಲ್ಲಿ ಮ್ಯುಟೇಷನ್ ಆಗಿದೆ, ಕೋರ್ಟ್ ಆದೇಶದ ಆಧಾರದಲ್ಲಿ ತಹಶೀಲ್ದಾರ್ ಮ್ಯುಟೇಷನ್ ಮಾಡಿದ್ದಾರೆ ಎಂಬ ಉಲ್ಲೇಖವಿದೆ ಹೀಗಿದ್ದೂ, ಪತ್ರಿಕಾ ಹೇಳಿಕೆಯಲ್ಲಿ ಸುಳ್ಳು ಆರೋಪ ಮಾಡುವುದು ಶೋಭೆಯಲ್ಲ.ವರದಿ ಕುರಿತು ಮಾಹಿತಿ ಇದ್ದಲ್ಲಿ ದಾಖಲಾತಿ ಪ್ರಕಟಿಸಿ ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.
27 ಸಾವಿರ ಎಕರೆ ಪರಭಾರೆ ಮಾಡಿಕೊಂಡಿರುವ ಆಸ್ತಿಯನ್ನು ಅನೇಕ ಮುಖಂಡರು ಅಕ್ರಮವಾಗಿ ಅನುಭವಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಬದಲು ಪ್ರಚಾರಕ್ಕಾಗಿ ಹೇಳಿಕೆ ನೀಡಬಾರದು.
ಅವರ ಮೇಲೆ ಕ್ರಮ ಕೈಗೊಂಡು ವಕ್ಫ್ ಆಸ್ತಿ ವಾಪಸ್ ಪಡೆಯುವುದಾಗಿ ಅಂದಿನ ಮುಖ್ಯಮಂತ್ರಿಗಳು ಹಾಗೂ ನಂತರ ಬಸವರಾಜ ಬೊಮ್ಮಾಯಿ ತಿಳಿಸಿರುತ್ತಾರೆ. ಇದನ್ನು ಕಾಂಗ್ರೆಸ್ ಪಕ್ಷ ತಿರುಚಿ ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.