ನಗರ ಪಾಲಿಕೆಯಿಂದ ಇಂದಿನಿಂದ ಕರ್ನಾಟಕ ರಾಜ್ಯೋತ್ಸವ

ನಗರ ಪಾಲಿಕೆಯಿಂದ ಇಂದಿನಿಂದ ಕರ್ನಾಟಕ ರಾಜ್ಯೋತ್ಸವ

ದಾವಣಗೆರೆ, ನ.26- ಇಲ್ಲಿನ ಮಹಾ ನಗರಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ನಾಳೆ ದಿನಾಂಕ 27ರ ಬುಧವಾರದಿಂದ ಇದೇ ದಿನಾಂಕ 30ರ ವರೆಗೆ `69ನೇ ಕನ್ನಡ ರಾಜ್ಯೋತ್ಸವ’ ಪ್ರಯುಕ್ತ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆಯ ಮೇಯರ್‌ ಕೆ. ಚಮನ್‌ಸಾಬ್‌ ತಿಳಿಸಿದರು.

ಪಾಲಿಕೆಯ ಮೇಯರ್‌ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯು ಕ್ತಾಶ್ರಯದಲ್ಲಿ ಈ ಬಾರಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.

ನಾಳೆ ಬುಧವಾರ ಸಂಜೆ 5ಕ್ಕೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ 125ಕ್ಕೆ 125 ಹಾಗೂ 100ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಜಿಲ್ಲೆಯ 300 ವಿದ್ಯಾರ್ಥಿಗಳನ್ನು ಅಭಿನಂದಿಸಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನೂ ನೀಡಲಿದ್ದೇವೆ ಎಂದರು.

ಈ ದಿನವೇ ದಿ. ಕಂಚಿಕೇರಿ ಶಿವಣ್ಣನವರ ಶ್ರೀ ಜಯಲಕ್ಷ್ಮಿ ನಾಟಕ ಸಂಘದಿಂದ `ಕನ್ನಡ ನಾಟಕೋತ್ಸವ’ ಜರುಗಲಿದ್ದು, ಮಧ್ಯಾಹ್ನ 3ರಿಂದ `ಮುದುಕನ ಮದುವೆ, ಕಳ್ಳ ಗುರು ಸುಳ್ಳ ಶಿಷ್ಯ ಹಾಗೂ ಕಿವುಡ ಮಾಡಿದ ಕಿತಾಪತಿ ಎಂಬ ಮೂರು ನಾಟಕಗಳ ಪ್ರದರ್ಶನ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ನವೆಂಬರ್‌ 28 : ಅಂದು ಬೆಳಗ್ಗೆ 9.30ಕ್ಕೆ ಪಾಲಿಕೆ ಆವರಣದಲ್ಲಿ ಮೇಯರ್‌ ಚಮನ್‌ ಸಾಬ್‌ ಕನ್ನಡ ಧ್ವಜಾರೋಹಣ ನೆರವೇರಿಸು ವರು. ತದನಂತರ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ಹಾಗೂ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಪಾಲಿಕೆ ಆಯುಕ್ತರಾದ ರೇಣುಕಾ, ಉಪಮೇಯರ್‌ ಸೋಗಿ ಶಾಂತಕುಮಾರ್‌, ಸಮರ್ಥ ಶಾಮನೂರು, ವಿಶ್ವಪರ್ಯಟನಾಗಾರ ಮಹಮ್ಮಸ್‌ ಸಿನಾನ್‌ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಅಂದು ಸಂಜೆ 5.30ಕ್ಕೆ ರಾಜ್ಯೋತ್ಸವ ಸಮಾರಂಭ ನಡೆಯಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಶ್ರೀಗಳು, ಇಸ್ಲಾಂ ಗುರುಗಳಾದ ಜೈನೀ ಕಾಮೀಲ್‌ ಸಖಾಫಿ ಮತ್ತು ಕ್ರೈಸ್ತ ಧರ್ಮದ ಗುರುಗಳಾದ ಆಂಟೋನಿ ನಜರತ್‌ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಉಪನ್ಯಾಸ ನೀಡಲಿದ್ದು, ಶಾಸಕ ಕೆ.ಎಸ್‌. ಬಸವಂತಪ್ಪ, ಸೋಗಿ ಶಾಂತಕುಮಾರ್‌, ಸುರೇಶ್‌ ಬಿ. ಇಟ್ನಾಳ್‌ ಸೇರಿದಂತೆ ಗಣ್ಯರು ಭಾಗವಹಿಸುವರು.

ರಾತ್ರಿ 8ಕ್ಕೆ ಹಾಸ್ಯ ನಟ ಸಾಧು ಕೋಕಿಲ ಮತ್ತು ಗಿಚ್ಚಿಗಿಲಿಗಿಲಿ ತಂಡದ ಗೊಬ್ರಗಾಲ ಮಂಜು ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ.

ನವೆಂಬರ್‌ 29 : ಅಂದು ಸಂಜೆ 5.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಉದ್ಘಾಟಿಸಲಿದ್ದು, ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಬಾರ್‌ ಸಾಬ್‌ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ಹಿರಿಯ ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಉಪನ್ಯಾಸ ನೀಡುವರು. ಅತಿಥಿಗಳಾಗಿ ಎಸ್ಪಿ ಉಮಾಪ್ರಶಾಂತ್‌, ಪತ್ರಕರ್ತರಾದ ಬಸವರಾಜ ದೊಡ್ಮನಿ, ತೇಜಸ್ವಿನಿ, ಕನ್ನಡ ಪರ ಸಂಘಟನೆಯ ಎಂ.ಎಸ್. ರಾಮೇಗೌಡ, ಜಮ್ಮಳ್ಳಿ ನಾಗರಾಜ, ಶಾಂತಮ್ಮ ಇತರರು ಭಾಗವಹಿಸುವರು.

ಇದಕ್ಕೂ ಮುನ್ನ ಸಂಜೆ 4.30ರಿಂದ ಜಾಂಬೆ ಬಾಲು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಾಂಬೆ ಜಲಕ್‌ ಜಾನಪದ ಕಾರ್ಯಕ್ರಮ ಜರುಗುವುದು. ರಾತ್ರಿ 8.30ರಿಂದ ಸಂಗೀತ ಕಟ್ಟಿ ಅವರ ತಂಡದಿಂದ ಕರ್ನಾಟಕ ಗೀತ ವೈಭವ ಮತ್ತು ಜ್ಯೂನಿಯರ್‌ ವಿಷ್ಣುವರ್ಧನ್‌ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ.

ನವೆಂಬರ್‌ 30 : ಅಂದು ಸಂಜೆ 5.30ರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ಉದ್ಘಾಟಿಸುವರು.  ಶಾಸಕ ಶಾಮನೂರು ಶಿವಶಂಕರಪ್ಪ, ದಾನಿಗಳಾದ ಚನ್ನಗಿರಿ ವಿರುಪಾಕ್ಷಪ್ಪ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಡಾ.ಎಂ.ಎಸ್. ಎಲಿ, ರೈತ ಹೋರಾಟಗಾರ ನರಸಿಂಹಪ್ಪ, ನಿವೃತ್ತ ಮುಖ್ಯ ಶಿಕ್ಷಕ ಕೆ.ಇಮಾಂ ಅವರುಗಳಿಗೆ `ನಾಗರಿಕ ಪೌರ ಸನ್ಮಾನ’ ನಡೆಯಲಿದೆ.

ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಿವಗಂಗಾ ಬಸವರಾಜ, ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ನಟ ಡಾಲಿ ಧನಂಜಯ, ಕಾನಿಪ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ, ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕನ್ನಡ ಪರ ಸಂಘಟನೆಗಳ  ಟಿ. ಶಿವಕುಮಾರ್, ಕೆ.ಜಿ. ಶಿವಕುಮಾರ್, ಜಿ. ಮಂಜುಳಾ ಭಾಗವಹಿಸುವರು.

ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಗಣೇಶ ಹುಲ್ಲುಮನೆ, ಡಿ.ಎಸ್. ಆಶಾ, ಸುಧಾ ಮಂಜುನಾಥ ಇಟ್ಟಿಗುಡಿ, ಪಾಲಿಕೆ ಸದಸ್ಯ ಎ. ನಾಗರಾಜ್‌, ಗಡಿಗುಡಾಳ ಮಂಜುನಾಥ ಹಾಗೂ ಇತರರು ಇದ್ದರು.

error: Content is protected !!