ದಾವಣಗೆರೆ, ಜೂ. 7- ಅಂತರ್ ರಾಷ್ಟ್ರೀಯ ಮಟ್ಟದ ಸ್ಪೆಷಲ್ ಓಲಂಪಿಕ್ಸ್ ಸೈಕ್ಲಿಂಗ್‌ಗೆ ದಾವಣಗೆರೆಯ ಸುಶ್ರುತ್ ಎಂ.ಎಸ್. ಆಯ್ಕೆಯಾಗಿದ್ದು, ಇದೇ ದಿನಾಂಕ 12 ರಿಂದ 26ರವರೆಗೆ ಜರ್ಮನಿಯ ಬರ್ಲಿನ್ ನಲ್ಲಿ ನಡೆಯಲಿರುವ ಅಂತರ್ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಂಜುನಾಥ ಹಾಗೂ ಮಮತ ಇವರ ಪುತ್ರ ಸುಶ್ರುತ್ ಅವರನ್ನು ವಿಶೇಷ ತರಬೇತಿಗಾಗಿ 2013ರಲ್ಲಿ ಸಂವೇದ ವಿಶೇಷ ಶಾಲೆ (ಬೌದ್ಧಿಕ ಸವಾಲನ್ನೆದುರಿಸುತ್ತಿರುವ ಮಕ್ಕಳ ಶಾಲೆ) ಪ್ರವೇಶ ಪಡೆದಿದ್ದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂವೇದ ವಿಶೇಷ ಶಾಲೆಯ ಪ್ರಾಂಶುಪಾಲ ಎಸ್.ನಾಗರಾಜ್, ಶಾಲೆಯ ದೈಹಿಕ ಶಿಕ್ಷಕ ದಾದಾಪೀರ್ ಅವರು, ಈ ಹುಡುಗನಿಗೆ ತರಬೇತಿ ನೀಡುವಾಗ ಇವರಲ್ಲಿನ ಹೆಚ್ಚಿನ ಕ್ಷಮತೆ ಗಮನಿಸಿ ಸೈಕ್ಲಿಂಗ್ ತರಬೇತಿ ಕೊಡಲಾರಂಭಿಸಿದ್ದರು.
ಶ್ರಮದಿಂದ ಸೈಕ್ಲಿಂಗ್ ತರಬೇತಿ ಪಡೆದ ಸುಶ್ರುತ್, 2021ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಓಲಂಪಿಕ್ಸ್ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 5 ಕಿ.ಮೀ.ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು ಎಂದು ವಿವರಿಸಿದರು.
2022 ಜುಲೈ 21 ರಿಂದ 24ರವರೆಗೆ ಜಾರ್ಖಂಡ್‌ನ ಬಕಾರೋದಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ 5 ಕಿ.ಮೀ.ನಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ನಂತರ 3 ನ್ಯಾಷನಲ್ ಕೋಚಿಂಗ್ ಕ್ಯಾಂಪ್‌ಗಳಲ್ಲಿ ಭಾಗಹಿಸಿ, ಇದೀಗ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಏನಿದು ಸ್ಪೆಷಲ್ ಓಲಂಪಿಕ್ಸ್ : ಇದೊಂದು ಅಂತರ್‌ರಾಷ್ಟ್ರೀಯ ಮಟ್ಟದ ವಿಶೇಷ ಮಕ್ಕಳ ಶ್ರೇಯೋ ಭಿಲಾಶೆಗಾಗಿರುವ ಸಂಸ್ಥೆ, ವಿಶೇಷ ಅಗತ್ಯತೆಯುಳ್ಳ ಮಕ್ಕಳಾದ ಬುದ್ಧಿ ಶಕ್ತಿಯಲ್ಲಿ ಕೊರತೆ, ಮೆದುಳಿನ ಪಾರ್ಶ್ವ ವಾಯು, ಆಟಿಸಂ ಮತ್ತು ಬಹು ವಿಧದ ನ್ಯೂನತೆಯುಳ್ಳ ವರಿಗೆ ಆಟೋಟಗಳನ್ನು ನಡೆಸುವ ಸಂಸ್ಥೆ, ಪ್ರತಿಯೊಂದು ದೇಶದಲ್ಲಿಯೂ ಇದರ ಅಂಗ ಸಂಸ್ಥೆಯಿರುತ್ತದೆ. ರಾಷ್ಟ್ರಮಟ್ಟದಲ್ಲಿ ಸ್ಪೆಷಲ್ ಒಲಂಪಿಕ್ಸ್ -ಭಾರತ್ ಈ ಆಟೋಟಗಳನ್ನು ನಡೆಸುತ್ತದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪೆಷಲ್ ಓಲಂಪಿಕ್ಸ್ ಭಾರತ್-ಕರ್ನಾಟಕ ಈ ಆಟೋಟಗಳನ್ನು ನಡೆಸುತ್ತದೆ. ಸಂವೇದ ವಿಶೇಷ ಶಾಲೆಯು ಬೌದ್ಧಿಕ ಸವಾಲನ್ನೆದುರಿಸುತ್ತಿರುವ ಮಕ್ಕಳಿಗೆ ಸಂಶೋಧನಾಧಾರಿತ ತರಬೇತಿಯನ್ನು ಕಳೆದ 18 ವರ್ಷಗಳಿಂದ ನೀಡುತ್ತಾ ಬರುತ್ತಿದೆ. ಸುಮಾರು 150 ವಿದ್ಯಾರ್ಥಿಗಳು ಇಲ್ಲಿ ತರಬೇತಿ 25 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರ ದಾದಾಪೀರ್, ಎಂ.ಎಸ್. ಸುಶ್ರುತ್, ತಾಯಿ ಮಮತಾ, ತಂದೆ ಮಂಜುನಾಥ್, ಮಧುಸೂದನ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.