ಹರಿಹರ, ನ.26- ಕಳೆದ ವಾರ ನಡೆದ ತಾಲ್ಲೂಕಿನ ಸಾರಥಿ ಮತ್ತು ಉಕ್ಕಡಗಾತ್ರಿ ಗ್ರಾಮ ಪಂಚಾಯತಿ ಉಪ ಚುನಾವಣೆಯ ಮತಗಳ ಎಣಿಕೆ ಇಂದು ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.
ಸಾರಥಿ ಗ್ರಾಮದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ರವೀಂದ್ರ ಪಾಟೀಲ್ 400 ಮತಗಳನ್ನು ಪಡೆದು ವಿಜೇತರಾದರು. ಪ್ರತಿಸ್ಪರ್ಧಿ ಬಸವಂತಪ್ಪ ಬಿ.ಹೆಚ್. 319 ಮತಗಳನ್ನು ಪಡೆದು ಪರಾಭವಗೊಂಡರು.
ಉಕ್ಕಡಗಾತ್ರಿ ಗ್ರಾಮದಲ್ಲಿ ನಡೆದ ಇನ್ನೊಂದು ಉಪ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಂದ್ರಗೌಡ ಜಿಗಳೇರ 342 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕವಿತಾ ಭರಮಗೌಡ ಶಿವಪೂಜೆ (269) ಅವರನ್ನು ಪರಾಭವಗೊಳಿಸಿದರು.
ತಾಲ್ಲೂಕಿನ ವಾಸನ ಗ್ರಾಮ ಪಂಚಾಯತಿಯ ಹಿಂಡಸಗಟ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿ.ಸಿ.ಎಂ. `ಎ’ ಮಹಿಳಾ ಸ್ಥಾನದಿಂದ ಶ್ರೀಮತಿ ಮಂಜುಳಾ ರವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆ ಶಿರಸ್ತೇದಾರ್ ಜಿ.ಪಿ. ಅಶೋಕ ಕುಮಾರ್, ಚುನಾವಣೆ ಶಾಖೆ ಸಹಾಯಕರಾದ ಎಂ. ಸೋಮಶೇಖರ್, ಪಿ.ಬಿ. ಉಮೇಶ್, ಮಲೇಬೆನ್ನೂರು ರವಿಕುಮಾರ್, ಚುನಾವಣಾ ಅಧಿಕಾರಿಗಳಾದ ಸುರೇಶ್, ಮಂಜುನಾಥಯ್ಯ ಇತರರು ಹಾಜರಿದ್ದರು.