ಜಿಎಸ್‌ಟಿ ವಿಷಯದಲ್ಲಿ ನೋಟಿಸ್ ಸಾಮಾನ್ಯ

ಜಿಎಸ್‌ಟಿ ವಿಷಯದಲ್ಲಿ ನೋಟಿಸ್ ಸಾಮಾನ್ಯ

ನೋಟಿಸ್ ಬಂದರೆ ಭಯ ಪಡುವ ಅಗತ್ಯವಿಲ್ಲ: ಲೆಕ್ಕ ಪರಿಶೋಧಕ ಜತಿನ್ ಕ್ರಿಸ್ಟೋಫರ್

ದಾವಣಗೆರೆ, ಮಾ. 6- ಜಿಎಸ್‌ಟಿ ವಿಷಯದಲ್ಲಿ ಇಲಾಖೆಯಿಂದ ನೋಟಿಸ್ ಬಂದಾಕ್ಷಣವೇ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಲೆಕ್ಕ ಪರಿಶೋಧಕ ಜತಿನ್ ಕ್ರಿಸ್ಟೋಫರ್ ಹೇಳಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿ ಯಿಂದ ನಗರದ ರೋಟರಿ ಬಾಲಭವನದ ಸಿ.ಕೇಶವ ಮೂರ್ತಿ ಸಭಾಂಗಣದಲ್ಲಿ ಸೋಮವಾರ ತೆರಿಗೆ ಸಲಹೆಗಾರರು, ವ್ಯಾಪಾರಸ್ಥರು, ಕೈಗಾರಿಕೋದ್ಯ ಮಿಗಳಿಗಾಗಿ ಜಿಎಸ್‌ಟಿ ಶೋಕಾಸ್ ನೋಟಿಸ್ ಮತ್ತು 2023-24ರ ಹೊಸ ತಿದ್ದುಪಡಿಗಳು ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಎಸ್‌ಟಿ ಕಟ್ಟುವ ಎಲ್ಲಾ ವ್ಯಾಪಾರಸ್ಥರಿಗೆ ನೋಟಿಸ್ ಸಾಮಾನ್ಯ. ತೆರಿಗೆ ಇಲಾಖೆಯಿಂದ ನೋಟಿಸ್ ಬಂದಾಕ್ಷಣ ಭಯ ಪಡುವ ಅಥವಾ ಗಾಬರಿ ಪಡುವ ಅಗತ್ಯವಿಲ್ಲ. ಯಾವ ಸೆಕ್ಷನ್ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ನೋಟಿಸ್ ಯಾರು ನೀಡಿದ್ದಾರೆ ಎಂದು ತಿಳಿದು ಸಮರ್ಪಕ ಉತ್ತರ ನೀಡಬೇಕು ಎಂದು  ಹೇಳಿದರು.

ತಪ್ಪು ಮಾಡಿದರೂ, ತಪ್ಪು ಮಾಡದಿದ್ದರೂ ನೋಟಿಸ್‌ಗಳು ಬರುತ್ತವೆ. ನೋಟಿಸ್ ನೀಡುವ ಕುರಿತು ಅಧಿಕಾರಿ ವರ್ಗದಲ್ಲೂ ಸಾಕಷ್ಟು ಗೊಂದಲವಿದೆ. ಅನೇಕ ನೋಟಿಸ್‌ ಗಳು ತಪ್ಪಾಗಿರುತ್ತವೆ.  ಇದೂ ಸಹ ಸಹಜವೇ. ಜಿಎಸ್‌ಟಿ ನೋಟಿಸ್ ಕಳಿಸುವ ಕುರಿತು ಅಧಿ ಕಾರಿಗಳೂ ಕಲಿಯುತ್ತಿದ್ದಾರೆ. ನಾವೂ ಕಲಿಯು ತ್ತಿದ್ದೇವೆ ಎಂದು ಹೇಳಿದ ಅವರು, ಕಾನೂನು ಕ್ರಮ ಮೀರಿ ನೋಟಿಸ್ ಕಳುಹಿಸಿದರೆ ಆಕ್ಷೇ ಪಣೆ  ಸಲ್ಲಿಸುವುದು ಅನಿವಾರ್ಯ ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿರುವ ಅಥಣಿ ಎಸ್. ವೀರಣ್ಣ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತೆರಿಗೆ ಸಲಹೆಗಾರರ ಸಂಘಕ್ಕೆ ಜಮೀನು ಮಂಜೂರಾಗಿದೆ. ಶೀಘ್ರವೇ ಕಟ್ಟಡ ನಿರ್ಮಾಣವಾಗಲಿ. ಅದಕ್ಕೆ ಬೇಕಾದ ಸಹಕಾರ ನೀಡುವುದಾಗಿ ಹೇಳಿದರು.

1965-70ರ ದಶಕದಲ್ಲಿ ಆಡಿಟ್ ಪ್ರಕ್ರಿಯೆ ತುಂಬಾ ಕಠಿಣವಾಗಿತ್ತು. ಆದರೆ ತಂತ್ರ ಜ್ಞಾನ ಮುಂದುವರೆದಂತೆ ಲೆಕ್ಕ ಮಾಡುವ ಪ್ರಕ್ರಿಯೆಗಳು ಸರಳ ಹಾಗೂ ಸುಲಭವಾಗುತ್ತಿವೆ ಎಂದರು.

ಪ್ರಸ್ತುತ ದಿನಗಳಲ್ಲಿ ಪ್ರತಿ ದಿನವೂ ಹೊಸ ನೀತಿಗಳು, ಕಾಯ್ದೆಗಳು ಬದಲಾಗುತ್ತಿವೆ. ಈ ನಿಟ್ಟಿನಲ್ಲಿ ತೆರಿಗೆ ಸಲಹೆಗಾರರು ನಿಮ್ಮ ನಿತ್ಯದ ಕೆಲಸಗಳ ಜೊತೆಗೆ ಅಪ್‌ಡೇಟ್ ಆಗುವುದು ಮುಖ್ಯ ಎಂದು ಹೇಳಿದರು.

ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಉಪಾಧ್ಯಕ್ಷ ಹೆಚ್.ಎಸ್. ಮಂಜುನಾಥ್, ಕಾರ್ಯದರ್ಶಿ ಡಿ.ಎಂ. ರೇವಣಸಿದ್ದಯ್ಯ, ಸಿ. ವಿಜಯ್ ಉಪಸ್ಥಿ ತರಿದ್ದರು.  ಹೆಚ್.ಎಸ್. ಮಂಜುನಾಥ್ ಸ್ವಾಗತಿಸಿ ದರು. ಬಿ.ವಿನಯ್ ಕುಮಾರ್ ವಂದಿಸಿದರು.

error: Content is protected !!