ಕಳಪೆ ಗುಣಮಟ್ಟದ ಪಡಿತರ ವಿತರಣೆ : ಕ್ರಮಕ್ಕೆ ಆಗ್ರಹ

ಹರಿಹರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕಿಡಿ ಕಾರಿದ ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ 

ಹರಿಹರ, ನ.24- ತಾಲ್ಲೂಕಿನ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡುವ ಅಕ್ಕಿ, ಗೋಧಿ, ಬೇಳೆ, ರಾಗಿ ದನಕರುಗಳೂ ಸಹ ತಿನ್ನುವುದಕ್ಕೆ ಯೋಗ್ಯವಾಗಿರುವುದಿಲ್ಲ, ಅಂತಹ ದಾಸ್ತಾನು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದು, ಇವುಗಳನ್ನು ಮನುಷ್ಯರು ಹೇಗೆ ತಿನ್ನಬೇಕು? ಹಾಗಾಗಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡುವುದಕ್ಕೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ತಾ.ಪಂ. ಉಪಾಧ್ಯಕ್ಷರಾದ ಜಯಮ್ಮ ಬಸವಲಿಂಗಪ್ಪ ಗೌಡ್ರು ಹೇಳಿದರು.

ನಗರದ ತಾಲ್ಲೂಕು ಪಂಚಾಯ್ತಿ ಕಚೇರಿಯ ಸಭಾಂಗಣದಲ್ಲಿ ತಾ.ಪಂ ಅಧ್ಯಕ್ಷರಾದ ಶ್ರೀದೇವಿ ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. 

ತಾಲ್ಲೂಕಿನ ಹಲವಾರು ನ್ಯಾಯಬೆಲೆ ಅಂಗಡಿ ಯಲ್ಲಿ ಕಳಪೆ ಗುಣಮಟ್ಟದ ದಾಸ್ತಾನು ವಿತರಣೆ ಮಾಡುತ್ತಿದ್ದು, ಅಧಿಕಾರಿ ಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಸರಿಯಾದ ಬೆಳವಣಿಗೆ ಯಲ್ಲ, ಈಗ ವಿತರಣೆ ಮಾಡುತ್ತಿರುವ ಪಡಿತರ ದಾಸ್ತಾನು ನೋಡಿದರೆ, ದನ-ಕರುಗಳು ತಿನ್ನುವುದಕ್ಕೆ ಯೋಗ್ಯವಾಗಿರುವುದಿಲ್ಲ. ಅಂತಹ ಕಳಪೆ ಗುಣಮಟ್ಟದ ದಾಸ್ತಾನು ವಿತರಣೆ ಮಾಡಲಾಗುತ್ತಿದೆ. ಅತಿಯಾಗಿ ಬಡವರು ಇವುಗಳನ್ನೇ ಬಳಸುವುದರಿಂದ ಇವುಗಳನ್ನು ತಿಂದು ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅವರಿಗೆ ಆಸ್ಪತ್ರೆಗೆ ಹಣ ಖರ್ಚು ಮಾಡುವುದಕ್ಕೆ ಶಕ್ತಿಯೂ ಇರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳೂ ಸಹ ಇದರ ಬಗ್ಗೆ ಗಮನವನ್ನು ಹರಿಸಿ, ಅವುಗಳನ್ನು ಬದಲಾವಣೆ ಮಾಡಬೇಕು ಎಂದು ಹೇಳಿದರು.

ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆದಾ ಪುರ ವೀರಭದ್ರಪ್ಪ ಮಾತನಾಡಿ, ತಾಲ್ಲೂಕಿನ ಹಲವಾರು ಶಾಲೆಗಳ ಜಮೀನುಗಳನ್ನು ಅಕ್ರಮವಾಗಿ ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.

ತಾ.ಪಂ ಸದಸ್ಯ ಸಿರಿಗೆರೆ ಕೊಟ್ರೇಶಪ್ಪ ಮಾತನಾಡಿ, ಕಳೆದ ಸಾಲಿನಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದು ರೈತರ ಬೆಳೆಗಳಿಗೆ ಹಾನಿಯಾದ ಪರಿಣಾಮವಾಗಿ ಸರ್ವೇ ಮಾಡಿ, ವರದಿಯನ್ನು ಕಳಿಸಿದ್ದರು. ಇದುವರೆಗೂ ಒಬ್ಬ ರೈತರಿಗೂ ಬೆಳೆ ವಿಮೆ ಪರಿಹಾರ ಮೊತ್ತವನ್ನು ನೀಡಿರುವುದಿಲ್ಲ. ಲೆಕ್ಕ ಪುಸ್ತಕದಲ್ಲಿ ಮಾತ್ರ ಸಾವಿರಾರು ರೈತರಿಗೆ ವಿತರಣೆ ಮಾಡಲಾಯಿತು ಎಂದು ನಮೂದಿಸಲಾಗಿದೆ. ಇದಕ್ಕೆ ಯಾರು ಹೊಣೆಗಾರರು? ಬೆಳೆ ಹಾನಿಯಾದ ಅನೇಕ ರೈತರು, ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದ್ದಾರೆ. ಆದ್ದರಿಂದ ಆದಷ್ಟು ಬೇಗನೇ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ನೀಡುವಂತೆ ಮತ್ತು ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡುವವರ ವಿರುದ್ಧ ಜಾಗೃತ ದಳವನ್ನು ಸರ್ಕಾರ ನಿಯೋಜಿಸಬೇಕು. ಇದರಿಂದಾಗಿ ಅನೇಕ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ಸರ್ಕಾರ ರೈತರಿಗೆ ಉಪಯುಕ್ತವಾದ ಗೊಬ್ಬರ ಮತ್ತು ಬೀಜಗಳನ್ನು ವಿತರಣೆ ಮಾಡಬೇಕು. ಅದನ್ನು ಬಿಟ್ಟು ಉಪಯುಕ್ತವಲ್ಲದ ಮತ್ತು ಯೋಗ್ಯವಲ್ಲದ ಬೀಜ ಮತ್ತು ಗೊಬ್ಬರವನ್ನು ವಿತರಣೆ ಮಾಡುವ ಮೂಲಕ ರೈತರು ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕುವ ರೀತಿ ಮಾಡುವುದಕ್ಕೆ ಹೊರಟಿದೆ. ಆದ್ದರಿಂದ ರೈತರಿಗೆ ಅವಶ್ಯವಾಗಿ ಬೇಕಾಗುವ ಮತ್ತು ಗುಣಮಟ್ಟದ ಗೊಬ್ಬರ ಹಾಗೂ ಬೀಜಗಳನ್ನು ವಿತರಣೆ ಮಾಡಬೇಕು ಎಂದು ಹೇಳಿದರು.

ತಾ.ಪಂ ಸದಸ್ಯ ಮಾಲತೇಶ್ ಗುಡದಳ್ಳಿ ಮಾತನಾಡಿ, ಕೊರೊನಾ ರೋಗ ಬಂದಾಗಿನಿಂದ ಅನೇಕ ಶಾಲೆಗಳ ಆವರಣ ಮತ್ತು ಅಂಗನವಾಡಿ ಕೇಂದ್ರಗಳು ಅಕ್ರಮ ಚಟುವಟಿಕೆಗಳ ಕೇಂದ್ರ ಗಳಾಗುವ ಹಂತಕ್ಕೆ ತಲುಪಿವೆ. ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಇಲ್ಲದೇ, ಗಬ್ಬು ವಾಸನೆ ಹರಡುತ್ತಿದೆ ಮತ್ತು ರಾತ್ರಿ ವೇಳೆಯಲ್ಲಿ ಮೋಜು, ಮಸ್ತಿ ಕೇಂದ್ರಗಳಾಗಿವೆ. ಇದರಿಂದ ಗ್ರಾಮಗಳ ವಾತಾವರಣ ಕಲುಷಿತವಾಗು ತ್ತದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜಾಗೃತಿ ವಹಿಸುವಂತೆ ಒತ್ತಾಯಿಸಿದರು.

ಶಿಕ್ಷಣ ಇಲಾಖೆಯ ವಿಶ್ವನಾಥ ಮಾತನಾಡಿ,  ಸರ್ಕಾರ ತಾತ್ಕಾಲಿಕವಾಗಿ ವಿದ್ಯಾಗಮವನ್ನು ತಡೆಯಲಾಗಿದೆ. ವಿದ್ಯಾರ್ಥಿಗಳಿಗೆ ಸೈಕಲ್, ಶೂ ಬಿಟ್ಟು, ಉಳಿದ ಪಠ್ಯ ಪುಸ್ತಕ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಕೃಷಿ ಇಲಾಖೆಯ ಮಲ್ಲಿಕಾರ್ಜುನ್,  ಆಹಾರ ಇಲಾಖೆಯ ನಸ್ರುಲ್ ಅವರುಗಳು ತಮ್ಮ ಇಲಾಖೆಗಳ ಕುರಿತಂತೆ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಇಒ ಗಂಗಾಧರನ್, ಸದಸ್ಯರಾದ ಬಸವಲಿಂಗಪ್ಪ, ಬಸವನಗೌಡ್ರು, ಲಕ್ಷ್ಮೀ ರಾಜನಹಳ್ಳಿ, ಸಿಬ್ಬಂದಿ ಲಿಂಗರಾಜ್ ಹಾಗೂ ಮತ್ತಿತರರು ಹಾಜರಿದ್ದರು.

error: Content is protected !!