ಮೈಲಾರ ಕಾರಣಿಕ `ಮಳೆ-ಬೆಳೆ ಸಂಪಾದೀತಲೇ ಪರಾಕ್’

ಮೈಲಾರ ಕಾರಣಿಕ `ಮಳೆ-ಬೆಳೆ ಸಂಪಾದೀತಲೇ ಪರಾಕ್' - Janathavaniಹೂವಿನಹಡಗಲಿ, ಫೆ.18- ಇಲ್ಲಿನ ಸುಪ್ರಸಿದ್ಧ  ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ `ಮಳೆ ಬೆಳೆ ಸಂಪಾದೀತಲೇ ಪರಾಕ್’ ಎಂದು ಗೊರವಯ್ಯ ರಾಮಣ್ಣ ಕಾರಣಿಕ ನುಡಿದರು.

ಕೋವಿಡ್-19 ರ ಹಿನ್ನೆಲೆಯಲ್ಲಿ ಮೈಲಾರಕ್ಕೆ ಹೊರಗಿನಿಂದ ಆಗಮಿಸುವ ಭಕ್ತರಿಗೆ ವಿಜಯನಗರ ಜಿಲ್ಲಾಡಳಿತ ನಿರ್ಬಂಧ ಹೇರಿತ್ತಾದರೂ, ಅದನ್ನು ಲೆಕ್ಕಿಸದೆ ಗುರುವಾರದಂದೇ ಅಪಾರ ಪ್ರಮಾಣದಲ್ಲಿ ಭಕ್ತರು ಧಾವಿಸಿ ಬರುತ್ತಿರುವುದನ್ನು ಪರಿಗಣಿಸಿ, ಶುಕ್ರವಾರ ಬೆಳಿಗ್ಗೆಯಿಂದ ಭಕ್ತರಿಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ್ದರಿಂದ ಲಕ್ಷಾಂತರ ಭಕ್ತರು ನೆರೆದಿದ್ದರು.

ಈ ಸಂದರ್ಭದಲ್ಲಿ ಧರ್ಮಕರ್ತ ರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್, ಕಾಗಿನೆಲೆ ಪೀಠಾಧಿಪತಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶಾಸಕ ಪಿ.ಟಿ. ಪರಮೇಶ್ವರನಾಯ್ಕ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್, ಸಹಾಯಕ ಆಯುಕ್ತ ಚಂದ್ರಶೇಖರಯ್ಯ, ಎಂ.ಎಚ್. ಪ್ರಕಾಶ್ ರಾವ್ ಮೊದಲಾದವರು ಭಾಗಿಯಾಗಿದ್ದರು.

ಕಾರ್ಣಿಕದ ವಿಶ್ಲೇಷಣೆ : `ಮಳೆ ಬೆಳೆ ಸಂಪಾದೀತಲೇ ಪರಾಕ್’   2022 ರಲ್ಲಿ ನುಡಿದ ಕಾರಣಿಕ ವಾಣಿ ಪುನರಾವರ್ತನೆಯಾಗಿದೆ. ಹಾಗಾಗಿ ಎಲ್ಲರಿಗೂ ಅರ್ಥವಾಗಿದೆ. ಆದರೆ ಸರಿಯಾದ ಮಳೆಯಾಗಿ ಅತಿವೃಷ್ಟಿ ಯಾಗಬಾರದು. ಸರಿಯಾದ ಬೆಳೆ ಬೆಳೆದರೂ ಅದಕ್ಕೆ ತಕ್ಕ ನ್ಯಾಯ ಸಮ್ಮತ ಬೆಲೆ ಸಿಕ್ಕಾಗ ಮಾತ್ರ ಕಾರಣಿಕಕ್ಕೆ ಅರ್ಥ ಬರುತ್ತದೆ ಎಂದು ನೆರೆದ ಭಕ್ತರು ಚರ್ಚಿಸುತ್ತಿದ್ದುದು ಕೇಳಿ ಬಂತು.

ಜಿಲ್ಲಾಡಳಿತದ ನಿರ್ಬಂಧದ ನಡುವೆ ಕಾರಣಿಕೋತ್ಸವ ನಡೆದ ಡೆಂಕನಮರಡಿಯಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದು ವಿಶೇಷವಾಗಿತ್ತು.

ಜಿಲ್ಲೆ, ಹೊರ ಜಿಲ್ಲೆಗಳಿಂದ ಪಾದಯಾತ್ರೆಗಳ ಸಂಖ್ಯೆಯೂ ಹೆಚ್ಚಾಗಿತ್ತು.  ಅಂಗಡಿ ಮುಂಗಟ್ಟುಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಯಾವುದೇ ರೀತಿಯ ವ್ಯಾಪಾರ ವಹಿವಾಟು ಕಂಡು ಬರಲಿಲ್ಲ. .ಶುಕ್ರವಾರದಂದು ನಿರ್ಬಂಧವನ್ನು ಸಡಿಲಿಸುವ ಬದಲು ನಾಲ್ಕಾರು ದಿನಗಳ ಮೊದಲೇ ನಿರ್ಬಂಧ ಸಡಿಲಿಸಿದರೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

error: Content is protected !!