23 ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

23 ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ದಾವಣಗೆರೆ,  ಮೇ 19- ಜಿಲ್ಲೆಯಲ್ಲಿ ಇದೇ ದಿನಾಂಕ 23 ರಿಂದ ಬರುವ ಜೂನ್ 3 ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್  ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ ಭವನದ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಯುಸಿ ಪೂರಕ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪೂರಕ ಪರೀಕ್ಷೆಯ ದಿನಾಂಕವನ್ನು ಬಿಡುಗಡೆ ಮಾಡಿದ್ದು, ದಾವಣಗೆರೆಯ 4 ಕೇಂದ್ರಗಳಲ್ಲಿ 2224 ವಿದ್ಯಾರ್ಥಿಗಳು, ಹರಿಹರ-597. ಚನ್ನಗಿರಿ-609, ಜಗಳೂರು-603, ಹೊನ್ನಾಳಿ-468 ತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ಒಟ್ಟು  4501 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ. 

ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಸಂಬಂಧಿ ಅಕ್ರಮ ಚಟುವಟಿಕೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಪರೀಕ್ಷಾ ಸಮಯದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಲು  ಕ್ರಮ ವಹಿಸಬೇಕು. 

ಜಿಲ್ಲಾ ಮಟ್ಟದಲ್ಲಿ ಒಂದು ಜಾಗೃತ ದಳವನ್ನು ನೇಮಿಸಲಾಗಿದ್ದು, ಪರೀಕ್ಷಾ ಕಾರ್ಯನಿರತ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಮೊಬೈಲ್, ಲ್ಯಾಪ್‌ಟಾಪ್, ಇ-ಕ್ಯಾಮರಾ ಇತ್ಯಾದಿ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಪರೀಕ್ಷಾರ್ಥಿಗಳನ್ನು ನೆಲದ ಮೇಲೆ ಕೂರಿಸಿ ಪರೀಕ್ಷೆ ಬರೆಸದೇ ಪೀಠೋಪಕರಣಗಳನ್ನು ಅಳವಡಿಸಬೇಕು. 

ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳು ಎಂದಿನಂತೆ ಪರೀಕ್ಷೆ ಹಾಲ್ ಟಿಕೆಟ್ ಅನ್ನು ತಮ್ಮ ಕಾಲೇಜುಗಳಿಂದ ಪಡೆದು, ಕಡ್ಡಾಯವಾಗಿ ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು. ಪ್ರವೇಶ ಪತ್ರವಿಲ್ಲದೆ ಪರೀಕ್ಷೆಗೆ ಕೂರಲು ಅವಕಾಶವಿರುವುದಿಲ್ಲ. ಹಾಗೆಯೇ ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.

ಜಿಲ್ಲೆಯ  8 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಮುಗಿಯುವವರೆಗೆ ಪ್ರತಿದಿನ ಪೊಲೀಸ್ ಬಂದೋಬಸ್ತ್‌ ಮಾಡುವ ಬಗ್ಗೆ ಹಾಗೂ ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಹಾಗೂ ಪರೀಕ್ಷಾ ಕೇಂದ್ರಗಳ  ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಕ್ರಮ ಕೈಗೊಳ್ಳಲು ಕ್ರಮ ತಿಳಿಸಿದರು.

ಸಭೆಯಲ್ಲಿ ಡಿ.ಡಿ.ಪಿ.ಐ. ತಿಪ್ಪೇಶಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!