ಕೊನೆಗೂ ಮತಭಾಗ್ಯ ಪಡೆದ ಅಮೆರಿಕದ ಮತದಾರ

ಕೊನೆಗೂ ಮತಭಾಗ್ಯ ಪಡೆದ ಅಮೆರಿಕದ ಮತದಾರ

ದಾವಣಗೆರೆ, ಮೇ 7 –  ಅಮೆರಿಕದ ಡೆಲ್ಲಾಸ್‌ನಲ್ಲಿರುವ ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್ ಅವರು ಈ ಬಾರಿ ಮತದಾನ ಮಾಡುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಶೇಟ್ ಅವರು ಮತದಾನ ಮಾಡಲಿಕ್ಕಾಗಿಯೇ ಅಮೆರಿಕದಿಂದ ಬಂದಿದ್ದರು. ಆದರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರಿಲ್ಲದೇ ನಿರಾಸೆಗೆ ಗುರಿಯಾಗಿದ್ದರು.

ಈ ಬಾರಿ ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಹೈಸ್ಕೂಲ್‌ನಲ್ಲಿ ಮತದಾನ ಮಾಡಿ ಸಂಭ್ರಮಿಸಿದ್ದಾರೆ.

ನಂತರ ಮಾತನಾಡಿರುವ ಅವರು, ಅಮೆರಿಕದಿಂದ ಇಲ್ಲಿಗೆ ಬಂದು ಮತದಾನ ಮಾಡಲು 1.5 ಲಕ್ಷ ರೂ. ಖರ್ಚಾಗಿದೆ. ವಿದೇಶಗಳಿಂದಲೇ ಮತದಾನ ಮಾಡಲು ಅನಿವಾಸಿ ಭಾರತೀಯರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಮತದಾನ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಅನಿವಾಸಿ ಭಾರತೀಯರಿಗೆ ಮತದಾನ ಮಾಡುವುದು ಸುಲಭವಲ್ಲ. ಲಕ್ಷಗಟ್ಟಲೆ ಖರ್ಚಾಗುತ್ತದೆ. ವಾರಗಟ್ಟಲೆ ರಜೆ ಹಾಕಬೇಕು. ವೀಸಾ ಸಮಸ್ಯೆ ಎದುರಾಗುತ್ತದೆ ಎಂದವರು ಹೇಳಿದರು.

ಕಳೆದ ಬಾರಿ ಮತದಾನ ಮಾಡಲು ಅಮೆರಿಕದಿಂದ ಇಲ್ಲಿಗೆ ಬಂದಿದ್ದರೂ ನಿರಾಸೆ ಎದುರಾಗಿತ್ತು. ಆದರೂ, ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಚಾರವಾಗಿ ಹೆಚ್ಚಿನ ಜನರಲ್ಲಿ ಅರಿವು ಮೂಡಿತ್ತು. ಅಮೆರಿಕದವರೇ ಇಲ್ಲಿ ಬಂದು ಮತದಾನ ಮಾಡುವಾಗ, ಇಲ್ಲಿನವರಿಗೆ ಏನು ದಾಡಿ? ಎಂಬ ಪ್ರಶ್ನೆಯನ್ನೂ ಕೇಳಲಾಗಿತ್ತು ಎಂದರು.

2014ರ ನಂತರ ವಿದೇಶಗಳ ಜೊತೆ ಭಾರತದ ರಾಯಭಾರಿ ಸಂಬಂಧ ವೃದ್ಧಿಸಿದೆ. ಭಾರತದ ಪ್ರಗತಿಪರ ದೇಶ ಎಂದು ಅಮೆರಿಕದಲ್ಲಿ ನಾವು ಹೆಮ್ಮೆಯಿಂದ ಹೇಳುವ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರೆಯಬೇಕು ಎಂಬುದೇ ನನ್ನ ಆಶಯ ಎಂದು ಹೇಳಿದರು.

ಎಂ.ಸಿ.ಸಿ. ಎ ಬ್ಲಾಕ್‌ನ ಎ.ಎನ್.ಪಿ. ಕಾನ್ವೆಂಟ್‌ನಲ್ಲಿ ಅಮೆರಿಕದಲ್ಲಿರುವ ಜಿ.ವಿ. ರಿತು  ಗುಜ್ಜರ್‌ ಅವರು ಮತದಾನ ಮಾಡಿದರು.

ನಂತರ ಮಾತನಾಡಿದ ಅವರು, ಮತ ಹಾಕುವುದು ನಮ್ಮ ಹಕ್ಕು. ಇದರಿಂದ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದರು. ಅವರ ಅಕ್ಕ ಜಿ.ವಿ. ರಕ್ಷಾ ಗುಜ್ಜರ್‌ ಅವರು ಪೂನಾದಿಂದ ಬಂದು ಮತ ಚಲಾಯಿಸಿದ್ದಾರೆ.

ಎಂ.ಸಿ.ಸಿ. ಬಿ ಬ್ಲಾಕ್‌ನಲ್ಲಿರುವ ಐ.ಎಂ.ಎ. ಹಾಲ್‌ ಮತಗಟ್ಟೆಯಲ್ಲಿ ಜರ್ಮನಿಯಲ್ಲಿರುವ ದೀಪಿಕಾ ಅವರು ಮತದಾನ ಮಾಡಿದರು.

error: Content is protected !!