ಮಲೇಬೆನ್ನೂರಿನಲ್ಲಿ ಶೇ. 80.13 ಶಾಂತಿಯುತ ಮತದಾನ

ಮಲೇಬೆನ್ನೂರಿನಲ್ಲಿ ಶೇ. 80.13   ಶಾಂತಿಯುತ ಮತದಾನ

ಮಲೇಬೆನ್ನೂರು, ಮೇ 7- ಮಂಗಳವಾರ ನಡೆದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಪೂರ್ಣ ಶಾಂತಿಯುತವಾಗಿತ್ತು.

ಮಲೇಬೆನ್ನೂರು ಪುರಸಭೆ ವ್ಯಾಪ್ತಿಯ 21 ಮತಗಟ್ಟೆಗಳ ಪೈಕಿ ಜಿಬಿಎಂಎಸ್ ಶಾಲೆಯ ಮತಗಟ್ಟೆ ಸಂಖ್ಯೆ 193ರಲ್ಲಿ (ಶೇ.91.40 ರಷ್ಟು) ಅತಿ ಹೆಚ್ಚು ಮತದಾನವಾಗಿದ್ದರೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 204 ರಲ್ಲಿ (ಶೇ.74.80 ರಷ್ಟು) ಅತಿ ಕಡಿಮೆ ಮತದಾನವಾಗಿದೆ. ಪಟ್ಟಣದಲ್ಲಿರುವ ಒಟ್ಟು 18,776 ಮತದಾರರ ಪೈಕಿ 15,048 (ಶೇ.80.13 ರಷ್ಟು) ಮತದಾರರು ಮತದಾನ ಮಾಡಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ತಿಳಿಸಿದ್ದಾರೆ.

ಜಿಬಿಎಂಎಸ್ ಶಾಲೆಯಲ್ಲಿದ್ದ ಮತಗಟ್ಟೆಯನ್ನು ಈ ಬಾರಿ ಸಖಿ ಮತಗಟ್ಟೆಯನ್ನಾಗಿ ಮಾಡಲಾಗಿತ್ತು. ಈ ಮತಗಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಗಮನ ಸೆಳೆದರು.

ಮಲೇಬೆನ್ನೂರು ಪಟ್ಟಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿಯ ಜಿ.ಎಂ.ಲಿಂಗರಾಜ್ ಮತ್ತಿತರರು ಆಗಮಿಸಿ, ಅವರಿವರ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ, ಮತದಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

ಪಟ್ಟಣದ ಮತಗಟ್ಟೆ ಸಂಖ್ಯೆ 200 ರಲ್ಲಿ ಶತಾಯುಷಿ ನಾಗಮ್ಮ ಅವರು ಮೊಮ್ಮಗನ ಸಹಾಯದಿಂದ ಮತಗಟ್ಟೆಗೆ ನಡೆದುಕೊಂಡು ಬಂದು ಮತದಾನ ಮಾಡಿದರೆ, ವೃದ್ಧ ಅಬ್ದುಲ್ ಅಜೀಜ್ ಸಾಬ್ ಅವರು ಗಾಲಿ ಕುರ್ಚಿಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರು.

ಕುಂಬಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯನ್ನು ಈ ಬಾರಿ ಸಖಿ (ಪಿಂಕ್) ಮತಗಟ್ಟೆಯನ್ನಾಗಿ ಸಿಂಗಾರ ಮಾಡಲಾಗಿತ್ತು. ಇಲ್ಲಿಯೂ ಸಹ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ಕಂಡು ಬಂತು.

ಗ್ರಾಮದಲ್ಲಿರುವ ಒಟ್ಟು 3176 ಮತದಾರರ ಪೈಕಿ 2726 ಮತದಾರರು ಮತದಾನ ಮಾಡಿದ್ದಾರೆ. ಎಕೆ ಕಾಲೋನಿಯ ನಿವಾಸಿಗಳು ಒಟ್ಟಾಗಿ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.

ಜಿಗಳಿ ಗ್ರಾಮದಲ್ಲಿ ಒಟ್ಟು 3076 ಮತದಾರರಿದ್ದು, 2539 (ಶೇ. 78.09) ಮತದಾರರು ಮತದಾನ ಮಾಡಿದರು.

ವಾರ್ಡ್ ನಂ.1 ರಲ್ಲಿ ವೃದ್ಧರು ತಮ್ಮ ಮಕ್ಕಳು, ಮೊಮ್ಮಕ್ಕಳು ಜೊತೆಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರೆ, ನವ ವಧು ಸೌಮ್ಯ ಅವರು ತಮ್ಮ ತಂದೆ-ತಾಯಿ, ಅಜ್ಜಿ, ತಮ್ಮ, ತಂಗಿ ಜೊತೆ ಆಗಮಿಸಿ, ಮತದಾನ ಮಾಡಿದ್ದು ವಿಶೇಷವಾಗಿತ್ತು.

ಹೊಳೆಸಿರಿಗೆರೆಯಲ್ಲಿ 4613 ಮತದಾರರ ಪೈಕಿ 3749 ಮತದಾರರು ಮತ್ತು ಭಾನುವಳ್ಳಿಯಲ್ಲಿ 7150 ಮತದಾರರ ಪೈಕಿ 6095 (ಶೇ.85) ಮತದಾರರು ಮತದಾನ ಮಾಡಿದ್ದಾರೆ.

ಯಲವಟ್ಟಿಯಲ್ಲಿ ಶೇ.86, ಕೆ.ಎನ್.ಹಳ್ಳಿಯಲ್ಲಿ ಶೇ.82, ಕೊಕ್ಕನೂರಿನಲ್ಲಿ ಶೇ.84, ಜಿ.ಬೇವಿನಹಳ್ಳಿಯಲ್ಲಿ ಶೇ.82, ಜಿ.ಟಿ.ಕಟ್ಟೆಯಲ್ಲಿ ಶೇ.90, ನಿಟ್ಟೂರಿನಲ್ಲಿ ಶೇ.80.84, ಹಾಲಿವಾಣದಲ್ಲಿ ಶೇ.84, ಸಾಲಕಟ್ಟೆಯಲ್ಲಿ ಶೇ.84, ಧೂಳೆಹೊಳೆಯಲ್ಲಿ ಶೇ.87.28 ರಷ್ಟು ಮತದಾನ ಆಗಿರುವ ಬಗ್ಗೆ ತಿಳಿದು ಬಂದಿದೆ.

ಭಾನುವಳ್ಳಿ, ಹೊಳೆಸಿರಿಗೆರೆ, ಕೆ.ಎನ್.ಹಳ್ಳಿ, ಯಲವಟ್ಟಿ, ಜಿಗಳಿ, ಕುಂಬಳೂರು ಗ್ರಾಮಗಳಿಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿ, ಮತದಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

error: Content is protected !!