ದಾವಣಗೆರೆ ಕ್ಷೇತ್ರದಲ್ಲಿ ಶೇ.77ರಷ್ಟು ಮತದಾನ

ದಾವಣಗೆರೆ ಕ್ಷೇತ್ರದಲ್ಲಿ ಶೇ.77ರಷ್ಟು ಮತದಾನ

ಫಲಿತಾಂಶಕ್ಕಾಗಿ ಕಾಯಬೇಕು ಇನ್ನೊಂದು ತಿಂಗಳು 

ದಾವಣಗೆರೆ, ಮೇ 7 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಶಾಂತಿಯುತ ಶೇ.77ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ಹರಪನಹಳ್ಳಿ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಪೂರ್ಣ ಗೊಂಡಿದೆ. ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಆರಂಭ ವಾದರೂ ನಂತರ ಚುರುಕಾಗಿದೆ.

ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ. 76.97, ದಾವಣಗೆರೆ ಉತ್ತರದಲ್ಲಿ ಶೇ. 69.60, ದಾವಣಗೆರೆ ದಕ್ಷಿಣದಲ್ಲಿ ಶೇ. 70.01, ಹರಿಹರದಲ್ಲಿ  ಶೇ.79.45, ಮಾಯಕೊಂಡದಲ್ಲಿ ಶೇ. 82.96, ಚನ್ನಗಿರಿಯಲ್ಲಿ ಶೇ. 79.05 ಹಾಗೂ ಹೊನ್ನಾಳಿಯಲ್ಲಿ ಶೇ.81.90 ರಷ್ಟು ಮತದಾನವಾಗಿದೆ.

2019 ರ ಚುನಾವಣೆಯಲ್ಲಿ ಶೇ 72.96 ರಷ್ಟು ಮತದಾನವಾಗಿತ್ತು. ಈ ಬಾರಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮತದಾನವಾಗಿದೆ. ಸಂಜೆ 6 ಗಂಟೆಯ ನಂತರವೂ ಕೆಲವು ಮತಗಟ್ಟೆಗಳಲ್ಲಿ ಜನರು ಮತದಾನಕ್ಕಾಗಿ ಕಾದು ನಿಂತಿದ್ದರು. ಹೀಗಾಗಿ ಅಂತಿಮ ಮತದಾನದ ಪ್ರಮಾಣ ಕಳೆದ ಬಾರಿಗಿಂತಲೂ ಸಾಕಷ್ಟು ಹೆಚ್ಚಾಗಿರಲಿದೆ. 

ಮತದಾನ ದಿನ ಅಂದಾಜು 8996 ಮತದಾನ ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಚುನಾವಣೆಯನ್ನು ಯಶಸ್ವಿಯಾಗುವಂತೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರುವ ಜೂನ್ 4ರ ಬೆಳಿಗ್ಗೆ 8 ಗಂಟೆಯಿಂದ ತೋಳಹುಣಸೆ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಮತಗಳ ಎಣಿಕೆ ನಡೆಯಲಿದೆ. ಅಲ್ಲಿಯವರೆಗೆ ಲೋಕಸಭಾ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಲಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುತ್ತದೆ. ಇಲ್ಲಿ ಒಟ್ಟು 1,946 ಮತಗಟ್ಟೆಗಳಿಂದ 8,51,990 ಪುರುಷ, 8,57,117 ಮಹಿಳಾ ಹಾಗೂ 137 ಇತರೆ ಮತದಾರರು ಸೇರಿ 17,09,244 ಮತದಾರರಿದ್ದರು.

ಹೊನ್ನಾಳಿಯಲ್ಲಿ ವಿಶೇಷಚೇತನರಿಂದ ಹೆಚ್ಚಿನ ಮತದಾನ :

ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿನ ವಿಶೇಷ ಚೇತನರು ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ 4,236 ವಿಶೇಷ ಚೇತನ ಮತದಾರರಿದ್ದಾರೆ.

2496 ಪುರುಷರಲ್ಲಿ 2495 ಮತದಾನ ಮಾಡಿದ್ದಾರೆ. 1749 ಮಹಿಳೆಯರಲ್ಲಿ 1739 ಜನರು ಮತದಾನ ಮಾಡಿದ್ದಾರೆ. ಬಹುತೇಕ ಶೇ.100ರಷ್ಟು ಮತದಾನವಾಗಿದೆ ಎಂದು ಜಿ.ಪಂ. ಸಿಇಓ ಹಾಗೂ ಸ್ವೀಪ್ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ಅವರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

error: Content is protected !!