ಸರ್ಕಾಡಿಯನ್ ರಿದಂ ಕಾರಣದಿಂದ ಮಾನಸಿಕ ಪರಿಣಾಮ

ಸರ್ಕಾಡಿಯನ್ ರಿದಂ ಕಾರಣದಿಂದ ಮಾನಸಿಕ ಪರಿಣಾಮ

ಸೌತ್‌ಹ್ಯಾಂಪ್ಟನ್, ಮಾ. 5 – ವ್ಯಕ್ತಿಗಳಿಗೆ ದಿನಚರಿ ಇರುವಂತೆಯೇ, ದೇಹದ ಪ್ರತಿಯೊಂದು ಜೀವ ಕಣಕ್ಕೂ ದಿನಚರಿ (ಸರ್ಕಾಡಿಯನ್ ರಿದಂ) ಇರುತ್ತದೆ. ಈ ದಿನಚರಿಯು ತಾಳಬದ್ಧವಾಗಿ ನಡೆಯುವವರೆಗೆ ಮಾತ್ರ ಆರೋಗ್ಯ ಭಾಗ್ಯ ಸಾಧ್ಯ. ದೇಹದ ನಿದ್ರೆಯ ತಾಳ ತಪ್ಪಿದಾಗ ಆರೋಗ್ಯ ಹಾಗೂ ಸ್ವಾಸ್ಥ್ಯದ ಮೇಲೆ ಪರಿಣಾಮವಾಗುತ್ತದೆ.

ಸರ್ಕಾಡಿಯನ್ ರಿದಂ ಮೇಲೆ ಹಲವಾರು ವಿಷಯಗಳಿಂದ ಪರಿಣಾಮವಾಗುತ್ತದೆ. ಸಹಜವಾಗಿ ಹಗಲು ಹಾಗೂ ರಾತ್ರಿಗೆ ಅನುಗುಣವಾಗಿ ನಾವು ವರ್ತಿಸದೇ ಇದ್ದಾಗಲೂ ಪರಿಣಾಮವಾಗುತ್ತದೆ. ಉದಾಹರಣೆಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹಾಗೂ ವಿಮಾನಗಳಲ್ಲಿ ದೂರದ ಪ್ರಯಾಣ ಮಾಡುವವರಿಗೆ ಈ ಅನುಭವ ಹೆಚ್ಚಾಗಿ ಆಗುತ್ತದೆ.

ವೃದ್ಧಾಪ್ಯ, ವಂಶವಾಹಿನಿ ಹಾಗೂ ಅಲ್ಜಮೀರ್ ರೀತಿಯ ಹಲವು ರೋಗಗಳು ದೀರ್ಘಾವಧಿಯಲ್ಲಿ ಸರ್ಕಾಡಿಯನ್ ರಿದಂ ದಿಕ್ಕು ತಪ್ಪಲು ಕಾರಣವಾಗುತ್ತವೆ.

ನಿದ್ರೆ ಹಾಗೂ ಸರ್ಕಾಡಿಯನ್ ರಿದಂ ದಿಕ್ಕು ತಪ್ಪುವುದು ಹಲವಾರು ಮಾನಸಿಕ ರೋಗಗಳ ಮುನ್ಸೂಚನೆಗೆ ಕಾರಣವಾಗಿರುತ್ತದೆ. ಖಿನ್ನತೆ, ಉದ್ವಿಗ್ನತೆ, ಬೈಪೊಲಾರ್ ಡಿಸಾರ್ಡರ್ ಹಾಗೂ ಸ್ಕಿಜೋಫ್ರೇನಿಯಾಗಳಂತಹ ರೋಗಗಳಿಗೆ ನಿದ್ರೆಯ ಸಮಸ್ಯೆ ಮುನ್ಸೂಚನೆಯಾಗಿರ ಬಹುದು ಎಂದು ಬ್ರಿಟನ್‌ನ ಸೌತ್‌ಹ್ಯಾಂಪ್ಟನ್ ವಿಶ್ವ ವಿದ್ಯಾಲಯದ ಸಾರಾ ಚೆಲ್ಲಪ್ಪ ಅಭಿಪ್ರಾಯ ಪಡುತ್ತಾರೆ.

ನಿದ್ರೆ ಹಾಗೂ ಸರ್ಕಾಡಿಯನ್ ಮೇಲೆ ಪರಿಣಾಮ ಹೆಚ್ಚಾದಷ್ಟೂ ವ್ಯಕ್ತಿಗಳ ಮಾನಸಿಕ ಸ್ಥಿತಿ, ಮಾನಸಿಕ ಅಸ್ವಸ್ಥತೆ ಮೇಲೆ ಪರಿಣಾಮ ಹೆಚ್ಚಾಗಿರುತ್ತದೆ. ಈ ಬಗ್ಗೆ ಸಾಕಷ್ಟು ಸಾಕ್ಷಿಗಳಿದ್ದರೂ ಇನ್ನೂ ಹಲವಾರು ವಿಷಯಗಳು ಸ್ಪಷ್ಟವಾಗಬೇಕಿದೆ ಎಂದು ಚೆಲ್ಲಪ್ಪ ಹೇಳುತ್ತಾರೆ.

ನಿದ್ರಾಹೀನತೆ ಹಾಗೂ ಸರ್ಕಾಡಿಯನ್ ರಿದಂಗಳ ದಿಕ್ಕು ಬದಲಾದಂತೆ ಹಲವಾರು ಮಾನಸಿಕ ಸಮಸ್ಯೆಗಳು ಹೆಚ್ಚಾಗುವುದು ನಮ್ಮ ಅಧ್ಯಯನಗಳಿಂದ ಕಂಡು ಬಂದಿದೆ. ಇದರ ಜೊತೆಗೆ, ಕೆಲ ನಿರ್ದಿಷ್ಟ ಜೈವಿಕ ವ್ಯವಸ್ಥೆಗಳೂ ಮಾನಸಿಕ ಅಸ್ವಸ್ಥತೆ ತರುತ್ತವೆ.

ಕಳೆದ ದಶಕಗಳಲ್ಲಿ ಹದಿಹರೆಯದವರು ಹಾಗೂ ಯುವ ವಯಸ್ಸಿನವರನ್ನು ನಿದ್ರೆಯ ಅಧ್ಯಯನಕ್ಕೆ ಒಳಪಡಿಸ ಲಾಗಿದೆ. ಬೈಪೋಲಾರ್ ಹಾಗೂ ಇತರೆ ಮಾನಸಿಕ ಅಸ್ವಸ್ಥತೆ ಹೊಂದಿದ ಶೇ.33ರಷ್ಟು ಜನರಲ್ಲಿ ಸರ್ಕಾಡಿಯನ್ ರಿದಂ ಸಮರ್ಪಕವಾಗಿಲ್ಲ. ಅವರ ನಿದ್ರೆಯ ವೇಳಾಪಟ್ಟಿಯಲ್ಲಿ ಲೋಪಗಳಿವೆ ಎಂದು ಚೆಲ್ಲಪ್ಪ ತಿಳಿಸುತ್ತಾರೆ.

ಮೆದುಳು ರಾಸಾಯನಿಕಗಳ ಮೂಲಕ ಸಂಕೇತಗಳನ್ನು ಕಳಿಸುತ್ತದೆ. ಈ ಸಂಕೇತಗಳಲ್ಲಿ ವ್ಯತ್ಯಾಸವಾದಾಗಲೂ ಸಹ ನಿದ್ರೆಯಲ್ಲಿ ಸಮಸ್ಯೆಯಾಗಿರುವುದು ನಮ್ಮ ಅಧ್ಯಯನದಿಂದ ಕಂಡು ಬಂದಿದೆ. ಇಂತಹ ಸಮಸ್ಯೆಗಳು ಜೀನ್ ಹಾಗೂ ಜೀವಕಣಗಳ ಹಂತದಲ್ಲೂ ಸರ್ಕಾಡಿಯನ್ ರಿದಂ ಬದಲಿಸಲು ಕಾರಣವಾಗಿವೆ ಎಂದವರು  ಹೇಳುತ್ತಾರೆ.

ವಿಶ್ವದಾದ್ಯಂತ ಹತ್ತರಿಂದ 19 ವರ್ಷದವರಲ್ಲಿ ಪ್ರತಿ ಏಳರಲ್ಲಿ ಒಬ್ಬರು ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಾರೆ. ಹದಿಹರೆಯದವರಲ್ಲಿ ಅಸ್ವಸ್ಥತೆಗೆ ಖಿನ್ನತೆ ಹಾಗೂ ಆತಂಕಗಳೇ ಪ್ರಮುಖ ಕಾರಣ. 15ರಿಂದ 29ರ ವಯೋಮಾನದವರಲ್ಲಿ ಈ ಸಮಸ್ಯೆಗಳೇ ಆತ್ಮಹತ್ಯೆಗೆ ನಾಲ್ಕನೇ ಪ್ರಮುಖ ಕಾರಣ. ಈ ಸಮಸ್ಯೆಗಳಿಗೆ ಹದಿಹರೆಯದಲ್ಲೇ ಪರಿಹಾರ ಕಂಡುಕೊಳ್ಳದೇ ಹೋದರೆ, ಜೀವನವಿಡೀ ಈ ಕಾಟ ಮುಂದುವರೆಯುತ್ತದೆ ಎಂದು ಚೆಲ್ಲಪ್ಪ ಹೇಳುತ್ತಾರೆ.

ಅಲ್ಲದೇ, ಹದಿಹರೆಯದಲ್ಲಿ ನಿದ್ರೆ ಹಾಗೂ ಸರ್ಕಾಡಿಯನ್ ರಿದಂ ವಿಧಾನ ಬದಲಾಗುತ್ತದೆ. ಹದಿಹರೆಯದವರು ಕೆಲವೊಮ್ಮೆ ರಾತ್ರಿ ತಡವಾಗಿ ಮಲಗುತ್ತಾರೆ. ಇದಕ್ಕೆ ಅವರಲ್ಲಿರುವ ಸರ್ಕಾಡಿಯನ್ ರಿದಂ ಪ್ರವೃತ್ತಿ ಕಾರಣ. ಶಾಲಾ ಒತ್ತಡ ಇತರೆ ಕಾರಣಗಳಿಂದಾಗಿ ಹದಿ ಹರೆಯದವರು ಬೆಳಿಗ್ಗೆ ಬೇಗ ಏಳಬೇಕಾಗುತ್ತದೆ. ಇದರಿಂದಾಗಿ ಅವರಿಗೆ ಸಮರ್ಪಕ ನಿದ್ರೆ ಸಿಗುವುದಿಲ್ಲ. ಮೊದಲೇ ಮಾನಸಿಕ ಅಸ್ವಸ್ಥತೆ ಇದ್ದವರಲ್ಲಿ, ನಿದ್ರಾಹೀನತೆ ಇನ್ನಷ್ಟು ಸಮಸ್ಯೆ ತರುತ್ತದೆ.

ಹೀಗಾಗಿ ಹದಿಹರೆಯದವರು ಹಾಗೂ ಯುವ ವಯ ಸ್ಸಿನಲ್ಲಿ ಸರ್ಕಾಡಿಯನ್ ರಿದಂ ಕಡೆ ಗಮನ ಹರಿಸುವುದು ಅಗತ್ಯ ಎಂಬುದು ನಮ್ಮ ಅಧ್ಯಯನ ತಿಳಿಸುತ್ತದೆ. ಅದ ರಲ್ಲೂ ಮಾನಸಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಯ ವಿಷಯ ಬಂದಾಗ ಇನ್ನಷ್ಟು ಗಮನ ಹರಿಸಬೇಕಾಗುತ್ತದೆ. ಆದರೆ, ನಿದ್ರೆ ಹಾಗೂ ಸರ್ಕಾಡಿಯನ್ ರಿದಂಗಳ ಬಗ್ಗೆ ಇನ್ನೂ ಅಗತ್ಯ ಪ್ರಮಾಣದ ಅಧ್ಯಯನ ನಡೆದಿಲ್ಲ.

ನಿದ್ರೆಯ ಗುಣಮಟ್ಟ ಹೆಚ್ಚಿಸುವುದರಿಂದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ. ಔಷಧ ಸೇವನೆಯ ಸಮಯ, ಸಾಕಷ್ಟು ನೈಸರ್ಗಿಕ ಬೆಳಕು ಪಡೆಯುವುದು, ರಾತ್ರಿ ವೇಳೆ ಬೆಳಕಿನ ಪ್ರಮಾಣ ಕಡಿಮೆ ಮಾಡುವುದು, ಸೂಕ್ತ ಆಹಾರ ಸೇವನೆ ಹಾಗೂ ಹಗಲು ಹೊತ್ತಿನಲ್ಲಿ ದೈಹಿಕ ಚಟುವಟಿಕೆ ಇತ್ಯಾದಿಗಳಿಂದ ನಿದ್ರೆಯ ಗುಣಮಟ್ಟ ಹೆಚ್ಚಿಸಲು ಸಾಧ್ಯ.

ಈ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ. ಈ ವಿಷಯಗಳನ್ನು ಉತ್ತಮವಾಗಿ ಅರಿತಷ್ಟೂ ನೈಜ ಜಗತ್ತಿನಲ್ಲಿ ಚಿಕಿತ್ಸೆಯ ಲಾಭ ಇನ್ನಷ್ಟು ಉತ್ತಮವಾಗುತ್ತದೆ ಎಂದು ಚೆಲ್ಲಪ್ಪ ಅಭಿಪ್ರಾಯ ಪಟ್ಟಿದ್ದಾರೆ.

error: Content is protected !!