ಎಸ್ಸೆಸ್ಸೆಂ ಮತ್ತೆ ಶಾಸಕರಾಗಲಿ

Home ರಾಜಕೀಯ ಎಸ್ಸೆಸ್ಸೆಂ ಮತ್ತೆ ಶಾಸಕರಾಗಲಿ
ಎಸ್ಸೆಸ್ಸೆಂ ಮತ್ತೆ ಶಾಸಕರಾಗಲಿ

ಜನ್ಮ ದಿನದಂದು ಎಸ್ಸೆಸ್ಸೆಂಗೆ ಅಭಿಮಾನದ ಮಹಾಪೂರ, ಗಣ್ಯರ ಹಾರೈಕೆ
ದಾವಣಗೆರೆ, ಸೆ. 22 – ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 55ನೇ ಜನ್ಮ ದಿನಾಚರಣೆಗೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದ್ದು, ಮಲ್ಲಿಕಾರ್ಜುನ್ ಮುಂದಿನ ಶಾಸಕರಾಗಲಿ ಹಾಗೂ ಸಚಿವರಾಗಲಿ ಎಂದು ಕಾಂಗ್ರೆಸ್ ಗಣ್ಯರು ಹಾರೈಸಿದ್ದಾರೆ.
ನಗರದ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ವತಿಯಿಂದ ಜನ್ಮ ದಿನಾಚರಣೆ ಆಯೋಜಿಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಎಸ್.ರಾಮಪ್ಪ, ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಹೆಚ್.ಪಿ. ರಾಜೇಶ್, ಮಾಜಿ ಸಚಿವ ಹೆಚ್.ಆಂಜನೇಯ ಮತ್ತಿತರರು ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸ್ಪರ್ಧಿಸಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ್ ಅವರು ಶಾಸಕರಾಗಿ ಹಾಗೂ ಸಚಿವರಾಗಿ ದಾವಣಗೆರೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ನಿಖಿಲ್ ರಾಜ್ ಮೌರ್ಯ, ಜಿ.ಪಂ. ಮಾಜಿ ಸದಸ್ಯರಾದ ತೇಜಸ್ವಿ ಪಟೇಲ್, ಕೆ.ಎಸ್. ಬಸವಂತಪ್ಪ ಮತ್ತಿತರರು, ಮಲ್ಲಿಕಾರ್ಜುನ್ ಮತ್ತೆ ಅಧಿಕಾರಕ್ಕೆ ಬಂದರೆ ನಗರದ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ನಿರ್ಮಿಸಲಾದ 13 ಸಾವಿರಕ್ಕೂ ಹೆಚ್ಚು ಆಶ್ರಯ ಮನೆಗಳು, ಕುಂದುವಾಡ ಕೆರೆ ನಿರ್ಮಾಣ, ಸಿ.ಸಿ. ರಸ್ತೆಗಳು, ವೈಟ್ ಟಾಪಿಂಗ್ ರಸ್ತೆಗಳು, 22 ಕೆರೆ ಯೋಜನೆ, ಗ್ಲಾಸ್‌ಹೌಸ್‌ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳ ಕುರಿತು ಮುಖಂಡರು ಪ್ರಸ್ತಾಪಿಸಿದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಉದ್ಯೋಗ, ಆರೋಗ್ಯ, ವಿದ್ಯೆ ಹಾಗೂ ವ್ಯಾಪಾರ – ವಹಿವಾಟುಗಳಿಗೆ ಶಾಮನೂರು ಕುಟುಂಬದಿಂದ ಶಕ್ತಿ ಬಂದಿದೆ ಎಂದು ತಿಳಿಸಿದರು.
ಎಂ.ಬಿ. ಪಾಟೀಲ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಹಾಗೂ ಮಲ್ಲಿಕಾರ್ಜುನ್ ಅವರು ಸಚಿವರಾಗುವುದು ನಿಶ್ಚಿತ. ಮಲ್ಲಿಕಾರ್ಜುನ್ ದಾವಣಗೆರೆ ಜಿಲ್ಲಾ ಪ್ರವಾಸ ಮಾಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮಾತನಾಡಿ, ಭ್ರಷ್ಟ ಹಾಗೂ ಮತೀಯ ಶಕ್ತಿಗಳನ್ನು ಓಡಿಸಲು ಮಲ್ಲಿಕಾರ್ಜುನ್ ಅವರಿಗೆ ಹೆಚ್ಚಿನ ಶಕ್ತಿ ಕೊಡಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ನಿಖಿಲ್ ರಾಜ್ ಮೌರ್ಯ ಮಾತನಾಡಿ, ಮಲ್ಲಿಕಾರ್ಜುನ್ ಅವಧಿಯಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ಇಲ್ಲದೇ ದಾವಣಗೆರೆ ಅಭಿವೃದ್ಧಿಯಾಗಿತ್ತು. ಈಗಿನ ಬಿಜೆಪಿ ಸರ್ಕಾರದಲ್ಲಿ ಕೆಟ್ಟಿರುವ ಕ್ಲಾಕ್‌ ಟವರ್‌ ಸರಿಪಡಿಸಲು, ಹಾಳಾಗಿರುವ ಬಲ್ಬ್‌ಗಳನ್ನು ಹಾಕಿಸಲು ಆಗುತ್ತಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಸೋತ ನಂತರ ದಾವಣಗೆರೆಯ ಅಭಿವೃದ್ಧಿ ಕುಂಠಿತವಾಗಿದೆ. ಇಲ್ಲಿ ಕೆಲಸಗಳು ಆಗುತ್ತಿಲ್ಲ. ಅವರು ಮಾಡಿದ ಕಾರ್ಯಗಳನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಅವಧಿಯಲ್ಲಿ ದಾವಣಗೆರೆಯು ಕರ್ನಾಟಕದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಕಂಡಿತ್ತು. ಅವರ ಜನ್ಮ ದಿನ 2023ರ ಚುನಾವಣೆಯ ವಿಜಯೋತ್ಸವದ ರೀತಿ ಇದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯ ಪಟ್ಟರು.
ಮಲ್ಲಿಕಾರ್ಜುನ್ ಅವರು ಸಾರ್ವಜನಿಕ ಜೀವನದಲ್ಲಿ ಅಪಾರ ವಿಶ್ವಾಸ ಹೊಂದಿದ್ದಾರೆ. ಅವರು ತಮ್ಮ 56ನೇ ಜನ್ಮ ದಿನದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಎಂದು ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹಾರೈಸಿದರು.
ವೇದಿಕೆಯ ಮೇಲೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ರವಿ ಭೋಸ್‌ರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಎಸ್. ಬಸವಂತಪ್ಪ, ಬಿ.ಹೆಚ್. ವೀರಭದ್ರಪ್ಪ, ಮುದೇಗೌಡ್ರ ಗಿರೀಶ್, ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್, ಬಿ.ಕೆ. ಪರಶುರಾಮ್ ಮಾಗಾನಹಳ್ಳಿ, ಎಸ್. ಮಲ್ಲಿಕಾರ್ಜುನ್, ಡಿ.ಬಸವರಾಜ್, ಕೆ.ಜಿ. ಶಿವಕುಮಾರ್, ಎಂ.ಪಿ. ಲತಾ ಮಲ್ಲಿಕಾರ್ಜುನ್, ಸವಿತಾಬಾಯಿ ಮಲ್ಲೇಶ್‌ನಾಯ್ಕ್, ನಿಖಿಲ್ ಕೊಂಡಜ್ಜಿ, ಅಯೂಬ್ ಪೈಲ್ವಾನ್, ಕುರುಡಿ ಗಿರೀಶ್, ಸೀಮೆಎಣ್ಣೆ ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆಯ ಬದುಕು, ಬದಲಾವಣೆ ಹಾಗೂ ಅಭಿವೃದ್ಧಿಯ ಬಗ್ಗೆಯೇ ಸದಾ ಚಿಂತಿಸುತ್ತಾರೆ.

ಡಿ.ಕೆ. ಶಿವಕುಮಾರ್‌

ದಾವಣಗೆರೆಯನ್ನು ಮಾದರಿ ನಗರ ಮಾಡಲು ಮಲ್ಲಿಕಾರ್ಜುನ್ ಶ್ರಮಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ ಕೂಲಿಗಾಗಿ ಕಾಳು ಯೋಜನೆಯನ್ನು ಚಂದ್ರಬಾಬು ನಾಯ್ಡು ಬಳಸಿಕೊಂಡ ರೀತಿಯಲ್ಲಿ, ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ಬಳಸಿಕೊಂಡಿದ್ದರು.

ಎಂ.ಬಿ. ಪಾಟೀಲ್

ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಬೆಂಗಳೂರು ಹೊರತು ಪಡಿಸಿದರೆ ದಾವಣಗೆರೆಯಲ್ಲೇ ಅತಿ ಹೆಚ್ಚು ಅಭಿವೃದ್ಧಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.

ಶಾಸಕ ಎಸ್. ರಾಮಪ್ಪ
error: Content is protected !!