ನಿರಂತರ ದಬ್ಬಾಳಿಕೆ ಪರಿಣಾಮವೇ ಭೂಮಿ `ತಾಪ’ ಹೆಚ್ಚಲು ಕಾರಣ

ನಿರಂತರ ದಬ್ಬಾಳಿಕೆ ಪರಿಣಾಮವೇ ಭೂಮಿ `ತಾಪ’ ಹೆಚ್ಚಲು ಕಾರಣ

ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ನೇರ್ಲಿಗಿ ಪ್ರಕಾಶ್‌

ದಾವಣಗೆರೆ, ಏ. 24- ನಮ್ಮ ಅತಿಯಾದ ಆಸೆಗಳಿಂದ ಭೂಮಿಯ ಮೇಲೆ ನಿರಂತರ ದಬ್ಬಾಳಿಕೆ ಮಾಡಿದ್ದರ ಪರಿಣಾಮವಾಗಿ ಭೂಮಿಯ ತಾಪ ಹೆಚ್ಚಾಗಿ, ಸರಿಯಾದ ಸಮಯಕ್ಕೆ ಮಳೆ ಬೆಳೆಗಳಾಗದೇ, ರೈತ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆಂದು ಸಾವಯವ ಕೃಷಿಕ ನೇರ್ಲಿಗಿ ಪ್ರಕಾಶ್‌ ತಿಳಿಸಿದರು.   

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಜಿಲ್ಲಾ ಬಾಲಭವನ ಸಮಿತಿ, ಸಂಯುಕ್ತವಾಗಿ ಏರ್ಪಡಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ,  `ಭೂಮಿ ಉಳಿದರೆ ನಾವೆಲ್ಲ’ ವಿಷಯ ಕುರಿತು ಉಪನ್ಯಾಸ ನೀಡಿ  ಅವರು ಮಾತನಾಡಿದರು. 

ನಿತ್ಯವು ಭೂಮಿಗೆ ವಿಷ ಬೆರೆಸುತ್ತಿದ್ದೇವೆ. ಅತಿಯಾದ ಪ್ಲಾಸ್ಟಿಕ್ ಬಳಕೆ ಭೂಮಿ ಮೇಲಿನ ಜೀವಿಗಳ ನಾಶಕ್ಕೆ ಕಾರಣವಾಗುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಕಾಡು ದಿನದಿಂದ ದಿನಕ್ಕೆ ಇಂಚಿಂಚು ಸವೆಯುತ್ತಿದೆ. ಅದರ ಪರಿಣಾಮ ಸಕಲ ಜೀವರಾಶಿಗಳ ಮೇಲೆ ಮೂಡುತ್ತಿದೆ. ಅಂತರ್ಜಲದ ಮಟ್ಟ ಪ್ರಪಾತಕ್ಕೆ ಕುಸಿದು, ರೈತರ ಆತ್ಮ ಬಲವೇ ಕಡಿಮೆಯಾಗುತ್ತಿದೆ ಎಂದೂ ಕಾಣದ ಹೊಸ ರೋಗಗಳು ನಮ್ಮನ್ನು ಕಾಡುತ್ತಿವೆ. ನಾವೆಲ್ಲ ಮಾರುಕಟ್ಟೆಯಲ್ಲಿ ವಿಷ ಕೊಂಡುಕೊಳ್ಳುತ್ತಿದ್ದೇವೆ. ಆಹಾರ, ನೀರು, ಮಣ್ಣು, ಗಾಳಿ ಕಲುಷಿತಗೊಂಡು ಸಕಲ ಜೀವರಾಶಿಗಳ ಬದುಕಿಗೆ ಮಾರಕವಾಗಿದೆ. ನಮ್ಮ ಮುಂದಿರುವ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕು. ನಾವುಗಳು ದೊಡ್ಡ ಪ್ರಯತ್ನ ಮಾಡಬೇಕಿಲ್ಲ, ಸಣ್ಣ ಸಣ್ಣ ಪ್ರಯತ್ನಗಳ ಮೂಲಕ ಈ ಭೂಮಿಯನ್ನು ರಕ್ಷಿಸುವ ಜವಾಬ್ದಾರಿ ಹೊರಬೇಕಿದೆ. 

ಯುವ ಜನತೆ ಕೃಷಿಯ ಕಡೆ ಮತ್ತೇ ಮುಖ ಮಾಡಬೇಕು. ರಾಸಾಯನಿಕ ಮುಕ್ತ, ವಿಷಮುಕ್ತ ಆಹಾರ ಉತ್ಪಾದನೆಯ ಮೂಲಕ ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯ ಕಾಪಾಡಬೇಕಿದೆ ಎಂದರು. ಸರ್ಕಾರಿ ಕೆಲಸಕ್ಕೆ ಕಾಯದೆ, ಸಹಜ ಕೃಷಿ, ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು, ಭೂ ತಾಯಿಯ ಒಡಲನ್ನು ತಂಪುಗೊಳಿಸಬೇಕೆಂದು ಯುವ ಜನತೆಗೆ ಕರೆ ನೀಡಿದರು. 

ಸಮಾರಂಭವನ್ನು  ಉದ್ಘಾಟಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷ ಡಾ. ಜೆ.ಬಿ.ರಾಜ್ ಮಾತನಾಡಿ, ನಾವು ಸುಧಾರಣೆಯಾದರೆ, ಸಮಾಜವನ್ನು ಸುಧಾರಿಸುತ್ತೇವೆ. ಸಮಾಜ ಸುಧಾರಣೆಯಾದರೆ ಈ ಭೂಮಿ ಸುಧಾರಣೆಯಾಗುತ್ತದೆ. ಕೈಗಾರಿಕಾ ಕ್ರಾಂತಿಯ ನಂತರ ಇಡೀ ವಿಶ್ವ ನೆಲ, ಜಲ, ಮಾಲಿನ್ಯ ಹೆಚ್ಚಿಸಿ, ಸ್ವೇಚ್ಛೆಯ ಬದುಕನ್ನು ಸಾಗಿಸಿದ್ದರ ಪರಿಣಾಮ ಇಂದು ಅನೇಕ ಸಂಕಟಕ್ಕೆ ಸಿಲುಕಿದ್ದೇವೆ. ವಿಶ್ವದ 194 ರಾಷ್ಟ್ರಗಳು ಒಟ್ಟಾಗಿ ಇಂದು ವಿಶ್ವ ಭೂ ದಿನವನ್ನು ಆಚರಿಸುತ್ತಿದ್ದೇವೆ ಎಂದು  ತಿಳಿಸಿದರು.   ಸಮಾರಂಭದ ಅಧ್ಯಕ್ಷತೆಯನ್ನು ಕೆಎಸ್‍ಎಸ್ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ   ಹೆಚ್.ಕೆ.ಬಸವರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವ ಮಾನವ ಮಂಟಪದ ಸಂಸ್ಥಾಪಕ  ಆವರಗೆರೆ ರುದ್ರಮುನಿ, ಕೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್.ಚನ್ನಬಸಪ್ಪ ಉಪಸ್ಥಿತರಿದ್ದರು.

ಜಿಲ್ಲಾ ಕರಾವಿಪ ಕಾರ್ಯದರ್ಶಿ   ಎಂ.ಗುರುಸಿದ್ಧಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕಾರಿ ಎಸ್.ಬಿ.ಶಿಲ್ಪ ಸ್ವಾಗತಿಸಿದರು. ಉಪನ್ಯಾಸಕ ರುದ್ರಮುನಿ ಹಿರೇಮಠ್ ವಂದಿಸಿದರು.

error: Content is protected !!