ಮಾಸ್ಕೇಶ್ವರಾ!

ಈರ : ನಮಸ್ಕಾರ ಕೊಟ್ರಾ! ನಮಸ್ಕಾರಾ…. ನಾನೂ ಈರಾ! ಗುರ್ತು ಸಿಗಲಿಲ್ವಾ?

ಕೊಟ್ರ: ಅಯ್ಯೋ! ನಮ್ಮ ಈರಾ. ಹೆಂಗೆ ಗುರ್ತು ಸಿಗಬೇಕೋ? ಮಸ್ತಾಗಿ ಮಾಸ್ಕ್ ಹಾಕ್ಯಂಡಿದಿಯಾ. ತಲೆ ಮ್ಯಾಲಿನ ಕೂದಲು ಹೆಂಗೆ ಬೇಕೋ ಹಂಗೆ ಕಾಂಗ್ರೆಸ್ ಹುಲ್ಲು ಬೆಳದಂಗೆ ಬೆಳದಾವು. ಯಾರು ಅಂತಾ ನಿನಗೆ ನೀನೇ ಪರಿಚಯ ಮಾಡ್ಕೆಂಡಿದ್ದ ಮೇಲೇನೆ ಗೊತ್ತಾಗಿದ್ದು. ಅದು ಸರಿ. ನಾನೂ ಮಾಸ್ಕ್ ಹಾಕ್ಯಂಡನೀ. ನನ್ನ ಹೆಂಗೆ ಗುರ್ತು ಹಿಡದಿ?

ಈರ: ನೀನು ಸೊಟ್ಟ ಸೊಟ್ಟ ನಡೆಯೋ ಸ್ಟೈಲಿನಾಗೆ!

ಕೊಟ್ರ: ಹೊಗ್ಗೋ ಇವನಾ! ನಮ್ಮದೇ ಆದ ಒಂದು ಸ್ಟೈಲು ಇರಬಾರದು ನೋಡು. ಅದೂ ಈ ಕೊರೊನಾ ಸನ್ನಿವೇಶದಾಗೆ ಬಾಳ ಫಜೀತಿ ಆಕ್ತತಿ.

ಈರ: ಈಗ ಎಂತಾ ಫಜೀತಿಯಪ್ಪಾ?                       

ಕೊಟ್ರ :  ತಮ್ಮಾ ಈಗ ಯಾರೇ ಹೊರಗೆ ಕಾಣಿಸ್ಕೆಂಡರೂ ಮಾಸ್ಕ್ ಹಾಕ್ಯಂಡಿರಲೇ ಬೇಕು.

ಮಾಸ್ಕೇಶ್ವರಾ! - Janathavani

ಈರ: ಹೌದು. ಎಲ್ಲರೂ ಈಗ ಮಾಸ್ಕ್ ದಾರಿಗಳು. ಮಾಸ್ಕೇಶ್ವರರು.

ಕೊಟ್ರ: ಯಾರನ್ನೂ ಜಲ್ದಿ ಗೊತ್ತು ಹಿಡಿಯೋಕೆ ಆಗಲ್ಲಾ. ಇದೇ ಸರಿಯಾದ ಸಮಯ ಅಂತಾ ಎಣ್ಣೆ ಅಂಗಡಿ ಮುಂದೆ ಕ್ಯೂನಾಗೆ ನಿಂತೂ ಒಂದೆರಡು ಬಾಟ್ಲಿ ಎತ್ತಿ ಹಾಕ್ಯಂಡು ಬರೋಣ ಅಂತಿದ್ದೇ. ನೀನು ಗುರ್ತು ಹಿಡಿದು ಬಿಟ್ಟೆ! ಹಿಂಗೇ ಬಾಳ ಮಂದಿ ನನ್ನ ಗುರ್ತು ಹಿಡಿದು ಎಣ್ಣೆ ತಗೋಳ್ಳೋದನ್ನ ನೋಡಿ ನನ್ನ ಹೆಂಡ್ರಿಗೆ ಹೇಳಿ ಬಿಟ್ಟರೇ!? ಸೀಗೆ ಪುಡಿ ತರೋಕ್ಕೆ ಹೊರಗೆ ಹೋಗ್ತೀನಿ ಅಂತಾ ಸುಳ್ಳು ಹೇಳಿ ಬಂದೇನಿ. ಈಗ ಆಕೆಗೆ ಸತ್ಯ ಏನೂ ಅಂತಾ ಗೊತ್ತಾದರೇ ನನ್ನ ಎಣ್ಣೆ ಸೀಗೆಕಾಯಿ ಮಾಡಿಬಿಡ್ತಾಳೆ. ಅಷ್ಟೇ!             

ಈರ: ಹೋಗ್ಲಿ ಬಿಡು. ಈಗ ಹೆಂಗಿದ್ದರೂ ತಿಂಗಳಿಂದ ಎಣ್ಣೆ ಬಿಟ್ಟಿದ್ದೀಯಾ. ಅದನ್ನೇ ಮುಂದುವರಿಸು.

ಕೊಟ್ರ: ಲೇ ನಮ್ಮ ಕಲಾ ಮಂಜಣ್ಣ ಹೇಳ್ತಿದ್ದ. ನಮ್ಮ ಭಿರಸು ಫೋಟೋ ಶಿವಣ್ಣ ಟನ್ ಗಂಟಲೇ ತೂಕ ಇದ್ದೋನು ತಿಂಗಳುಗಟ್ಟಲೇ ಎಣ್ಣೇ ಇಲ್ಲದೇ ಸೊರಗಿ ಸುಣ್ಣ ಆಗಿದ್ದನಂತೆ. ಈಗ ಎರಡು ದಿನದಿಂದ ಎಣ್ಣೆ ಸೇವನೆ ಮಾಡಿ ಸ್ವಲ್ಪ ನುಣ್ಣುಗಾಗ್ತಾ ಇದಾನಂತೆ. ಕೇಳಿ ನನಗೂ ಬಾಯಾಗೆ ನೀರು ಬಂತು.

ಈರ: ಸದ್ಯಕ್ಕೆ ನೀನು ಆ ಸಾಹಸಕ್ಕೆ ಕೈ ಹಾಕಬೇಡ. ದಪ್ಪಗಿದ್ದು ತೆಳ್ಳಗಾದೋರು ಎಣ್ಣೆಯಿಂದ ನುಣ್ಣಗಾಗಬಹುದು. ನೀನು ಮೊದಲಿಂದಲೂ ಸಣಕಲು ಪಾರ್ಟಿ. ತಿಂಗಳಿಂದ ಮೂರು ಹೊತ್ತೂ ಮನೆ ಊಟ ಮಾಡಿ ಸ್ವಲ್ಪ ದುಂಡುಕಾಗಿದಿಯಾ. ಈಗ ಮತ್ತೆ ಎಣ್ಣೆ ಸಹವಾಸಕ್ಕೆ ಹೋಗಿ ಕರೆಂಟ್ ಹೊಡೆದ ಕಾಗೆ ಆಗ್ತಿಯಾ. ಸ್ವಲ್ಪ ಬಾಯಿ ಸ್ವಚ್ಚವಾಗಿ ಇಟ್ಕಾ. ಲೂಸ್ ಬಿಡಬೇಡ.

ಕೊಟ್ರ: ಹೌದು ಬಿಡು. ಬರೀ ಬಾಯಿ ಯಾಕೆ? ಯಾವುದೂ ಲೂಸ್ ಆಗಬಾರದು. ಗಟ್ಟಿಯಾಗಿರಬೇಕು.

ಈರ: ಅಂದರೇ!?

ಕೊಟ್ರ: ಹೇ ಗಾಮಾನ ಹಳ್ಳಿ ಗೌಡ ಹೇಳಿಲ್ವಾ ಮನಸ್ಸು ಲೂಸ್ ಮಾಡ್ಕೆಂಡಿದ್ದವರ ಕಥೆನಾ! ಕೇವಲ ಸಾವಿರ ರೂಪಾಯಿ ಅಂತಾ ಸಾಲಾಗಿ ಹೋಗಿದ್ದವರು. ಸಾವಿರ ರೂಪಾಯಿಗೆ ಕೊರೊನಾ ಖರೀದಿ ಮಾಡ್ಕೆಂಡು ಬಂದು ಆಸ್ಪತ್ರೆ ಐ.ಸಿ.ಯುನಾಗೆ ಬಿದ್ಕಂಡಾರೆ ಅಂತ!

ಈರ: ಹೋಗ್ಲಿ ಬಿಡು. ಊರ ಮಂದಿ ಉಸಾಬರಿ ನಮಗ್ಯಾಕೆ. ನಾವಂತೂ ಸ್ವಚ್ಛವಾಗಿರೋಣ. ಮಡಿವಂತಿಕೆ ಮುಖ್ಯ.

ಕೊಟ್ರ : ನೆನಪಾತು ನೋಡು. ನಮ್ಮ ಜ್ಯೋತಿಷಿ ಸಂತೋಷಾಚಾರಿ ಸಿಕ್ಕಿದ್ರು. ನೋಡಿದ್ರೇನಯ್ಯಾ? ನಮ್ಮ ಸನಾತನ ಧರ್ಮದ ಪದಗಳು ನಿಮ್ಮ ಕೊರೊನಾ-ಭಂಗ ವ್ರತದಲ್ಲಿ ಬಳಕೆಯಾಗುತ್ತಿವೆ ಅಂದ್ರೂ.

ಈರ : ಯಾವ ಪದಗಳೋ?

ಕೊಟ್ರ: ಕ್ವಾರಂಟೈನ್ ಅಂದ್ರೆ ಮೈಲಿಗೆ, ಸೋಷಿಯಲ್ ಡಿಸ್ಟೆನ್ಸಿಂಗ್ ಅಂದ್ರೆ ಮಡಿ! ಸ್ಯಾನಿಟೈಸರ್ ಅಂದ್ರೆ ಮಂತ್ರ ಸ್ನಾನ!

ಈರ: ಲಾಕ್ ಡೌನಿಗೆ?

ಕೊಟ್ರ: ಚಾತುರ್ಮಾಸ ವ್ರತ!

ಈರ: ಹೇ ಪುರಾತನ ಕಾಲದಿಂದ ಬಂದಿರೋ ಈ ಧರ್ಮದ ಆಚರಣೆಯಲ್ಲಿ ಎಷ್ಟೊಂದು ಮರ್ಮ ಅಡಗೇತಿ ನೋಡು. ಹಂಗಾದ್ರೇ
ಈ ಕೊರೊನಾ ಭಯ ನಮ್ಮ ಆಚಾರರಿಗೆ ಇಲ್ಲ ಅಂತಾ ಕಾಣುತ್ತೆ.

ಕೊಟ್ರ: ನಾನೂ ವಿಚಾರಿಸಿದೆ. ಸಾಧ್ಯನೇ ಇಲ್ಲ ಅದು ನಮ್ಮ ಮನೆ ಹತ್ರಾನೇ ಸುಳಿಯಂಗಿಲ್ಲಾ ಅಂದ್ರು! ಮನೆ ಬಾಗಿಲ ಮೇಲೆ ಬರೆದಿದ್ದಾರಂತೆ.

ಈರ : ಏನಂತಾ?

ಕೊಟ್ರ : ನಾಳೆ ಬಾ ಕೊರೊನಾ !!!

ಮಾಸ್ಕೇಶ್ವರಾ! - Janathavani

ಆರ್.ಟಿ. ಅರುಣ್‌ಕುಮಾರ್
[email protected]

error: Content is protected !!