ಬಸವ ತತ್ವದ ಮೇಲೆ ಬಾಳಿದರೆ ಜಾತಿ ಸಂಘರ್ಷ ನಿವಾರಣೆ : ಪಂಡಿತಾರಾಧ್ಯ ಶ್ರೀಗಳು

ಬಸವ ತತ್ವದ ಮೇಲೆ ಬಾಳಿದರೆ ಜಾತಿ ಸಂಘರ್ಷ ನಿವಾರಣೆ : ಪಂಡಿತಾರಾಧ್ಯ ಶ್ರೀಗಳು - Janathavaniಸಾಣೇಹಳ್ಳಿ, ಆ.6- ಬಸವತತ್ವದ ತಳಹದಿಯ ಮೇಲೆ ಎಲ್ಲ ಮಠಗಳು, ಸರ್ಕಾರ ಮತ್ತು ಸಾರ್ವಜನಿಕರು ಬಾಳುವಂತಾದರೆ ಸಾಧ್ಯವಾದಷ್ಟು ಜಾತಿ ಸಂಘರ್ಷಗಳನ್ನು ನಿವಾರಿಸಬಹುದು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.

ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಆರನೆಯ ದಿನದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ಭಾಷಣ, ನಾಟಕ, ಬರಹಗಳಲ್ಲಿ ಮಾತ್ರ ಜಾತಿಯನ್ನು ವಿರೋಧಿಸಲಿಲ್ಲ. ನಮ್ಮ ಮಠ, ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ಸಹ ಎಲ್ಲ ಜಾತಿಯ ಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದರು. ಜಾತಿಯ ವಾಸನೆ ಇಲ್ಲದೆ ಎಲ್ಲ ವಿದ್ಯಾರ್ಥಿಗಳು ಒಟ್ಟಾಗಿ ಓದುತ್ತ್ತಿದ್ದರು. ಕೆಲಸ ಮಾಡುತ್ತಿದ್ದರು. ಪ್ರಸಾದ ಸ್ವೀಕರಿಸುತ್ತಿದ್ದರು. ವಾಸ ಮಾಡುತ್ತಿದ್ದರು. ಅದೇ ಕಾರ್ಯವನ್ನು ನಮ್ಮ ಬೃಹನ್ಮಠ ಇಂದಿಗೂ ಮುಂದುವರಿಸಿಕೊಂಡು ಬಂದಿದೆ ಎಂದರು.

ಜಾತಿ ಮೈಗಂಟಿದ ತೊಗಲಲ್ಲ; ಮನಸ್ಸಿಗೆ ಮೆತ್ತಿಕೊಂಡಿರುವ ಕಸ. ಜಾತಿಯಿಂದ ಶ್ರೇಷ್ಠ ಎನ್ನುವ ಮೇಲಿರಿಮೆ ಮತ್ತು ಕನಿಷ್ಠ ಎನ್ನುವ ಕೀಳರಿಮೆಯೆಂಬ ಕಸವನ್ನು ಗುಡಿಸಿ ಹಾಕಬೇಕು. ಜಾತಿರಹಿತ, ಸಮಸಮಾಜದ ಕನಸು ಕಂಡ ಬಸವಣ್ಣನವರಿಗೆ ತಾವು ಬ್ರಾಹ್ಮಣ ಕುಲದಲ್ಲಿ ಜನಿಸಿದ್ದೇ ಹೊರಲಾರದ ಭಾರವಾಗಿ ಕಂಡಿದೆ. ತಮ್ಮ ವಚನಗಳಲ್ಲಿ `ನಾನು ಹಾರುವನೆಂದರೆ ಕೂಡಲ ಸಂಗಮದೇವ ನಗುವನು…’ ಎಂದು ತಮ್ಮನ್ನು ಅಪವರ್ಗೀಕರಿಸಿಕೊಳ್ಳುವರು. ಎಲ್ಲರ ಹುಟ್ಟಿನ ಗುಟ್ಟು ಒಂದೇ. ಕಿವಿಯಲ್ಲಿ ಜನಿಸಿದವರು, ಕಲ್ಲಿನಿಂದ ಉದ್ಭವಿಸಿದವರು ಯಾರೂ ಇಲ್ಲ. ಹೀಗೆ ವಾಸ್ತವ ಚಿತ್ರಣವನ್ನು ಸಮಾಜದ ಮುಂದೆ ಇಡುವ ಮೂಲಕ ಜಾತಿಯ ಭೂತವನ್ನು ಒದ್ದೋಡಿಸುವ ಕಾರ್ಯವನ್ನು ಅನುಭವಮಂಟಪದ ಮೂಲಕ ಶರಣರು ಮಾಡಿದರು ಎಂದರು. 

 ವ್ಯಕ್ತಿಯ ಸಾಧನೆಗೆ, ನೀತಿಗೆ, ಮೌಲ್ಯಗಳಿಗೆ ಜಾತಿ ಇಲ್ಲ. ಅಂಬೇಡ್ಕರ್, ಗಾಂಧೀಜಿ ಜಾತಿಯ ಕಳಂಕದಿಂದ ಜನರನ್ನು ಬಿಡಿಸಲು ಬಹುದೊಡ್ಡ ಹೋರಾಟವನ್ನೇ ಮಾಡಿದರು. ಆದರೂ ಜಾತಿಯ ಜಾಡ್ಯವನ್ನು ಇವತ್ತಿಗೂ ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಅಮೆರಿಕದಲ್ಲಿ ಕರಿಯರ ಮೇಲೆ ಬಿಳಿಯರು ಅದರಲ್ಲೂ ರಕ್ಷಣಾ ಇಲಾಖೆಯವರು ನಡೆಸಿದ ಅಮಾನುಷ ಕೃತ್ಯವನ್ನು ಅಲ್ಲಿನ ಬಿಳಿಯರೇ ಪ್ರತಿಭಟಿಸಿದರು. 

ವಚನಕಾರರ ಜಾತ್ಯತೀತತೆ – ಲಿಂಗ ಸಮಾನತೆ ಕುರಿತಂತೆ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿನಯಾ ಒಕ್ಕುಂದ ಮಾತನಾಡಿ, ಅವೈಚಾರಿಕತೆ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ `ಮತ್ತೆ ಕಲ್ಯಾಣ’ದಂತ ವಿಚಾರಮಂಥನದ ಮೂಲಕ ಬೆಳಕಿನ ರೇಖೆಗಳನ್ನು ಕಾಣಿಸುತ್ತಿರುವ ಪಂಡಿತಾರಾಧ್ಯ ಶ್ರೀಗಳ ಕೆಲಸ ಶ್ಲಾಘನೀಯವಾದುದು. ಅಂದಂದಿನ ನುಡಿಯ ಅಂದಂದೇ ಅರಿಯಾಲಾಗದು ಎನ್ನುವ ಅಲ್ಲಮಪ್ರಭುಗಳ ಮಾತಿನಂತೆ ಕಾಲಾಂತರಗಳಲ್ಲಿ ವಚನಗಳು ತಮ್ಮ ನುಡಿ ಶಕ್ತಿಗೆ ಸಾಕ್ಷಿಯಾಗಿವೆ. 

ವಚನಯುಗದ ಎಲ್ಲ ಆಲೋಚನೆಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ. ಅದು ಸರಿಯಾದ ಕ್ರಮವೂ ಅಲ್ಲ. ಆದರೆ ವರ್ತಮಾನದ ಸಂಕಟಗಳನ್ನು ತಣಿಸುವ ತಂಪಿನ ಸೆಲೆಗಳ ಹುಡುಕಾಟದಲ್ಲಿರುವವರಿಗೆ ವಚನಗಳ ಒರತೆಯ ನೀರು ಸ್ಪರ್ಶವಾಗದೆ ಇರದು. ಈ ನೀರು ಸಿಹಿಯೋ ಕಹಿಯೋ ಎಂದು ವಿಮರ್ಶಿಸುವುದಕ್ಕೆ, ಅದರ ಜೀವದಾಯಿ ಗುಣಕ್ಕೆ ಋಣಿಯಾಗುವುದಕ್ಕೆ `ಮತ್ತೆ ಕಲ್ಯಾಣ ಅಭಿಯಾನ’ ಆಸ್ಪದ ನೀಡಿದೆ ಎಂದರು.

ಜಾತ್ಯಾಂಧತೆ, ಠೇಂಕಾರ, ಮತೀಯ ಉನ್ಮಾದಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶರಣ ಸಂಪ್ರದಾಯಗಳನ್ನು ಪರಿಪಾಲಿಸುವ ಸಮಾಜದ ಜವಾಬ್ದಾರಿ ಏನು ಎನ್ನುವುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳುವ, ಶರಣರ ದಾರಿಯಿಂದ ನಾವು ಯಾಕೆ ವಿಮುಖಗೊಳ್ಳುತ್ತಿದ್ದೇವೆ ಎನ್ನುವ ಆತ್ಮಾವಲೋಕನಕ್ಕೆ `ಮತ್ತೆ ಕಲ್ಯಾಣದ ಅಭಿಯಾನ’ ದಾರಿಯಾಗಿದೆ ಎಂದರು. 

error: Content is protected !!