ಮಧ್ಯ ಕರ್ನಾಟಕದ ಅನ್ನದಾಸೋಹ ಮಠವೆಂಬ ಪ್ರಸಿದ್ದಿಗೆ ಪಾತ್ರವಾಗಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ

ಎಲ್ಲಾ ಜಾತಿ ವರ್ಗಗಳ ಅಪಾರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರ, ಕಷ್ಟಗಳ ಪರಿಹಾರಕ್ಕಾಗಿ ಮೊರೆ ಹೋಗುವ ಭಕ್ತರಲ್ಲಿ ತಮ್ಮ ಇಷ್ಟಾರ್ಥಗಳನ್ನು ಕಣ್ಣಿಗೆ ಕಾಣುವ ದೇವರು ಈಡೇರಿಸುವನು ಎನ್ನುವ ನಂಬಿಕೆ.

ಹತ್ತೆಂಟು ಸಮಸ್ಯೆಗಳನ್ನು ಹೊತ್ತು ಬಂದವರು ನೋವಿನಲ್ಲಿಯೇ ಹಿಂದಿರುಗಿದವರಿಲ್ಲ. ಈ ಕಾರಣಕ್ಕೆ ಭಕ್ತರು ಭೇಟಿ ನೀಡಿ ಕತೃ ಗದ್ದುಗೆ ಪೂಜೆ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಕೆಯ ಸಂಕಲ್ಪ ಮಾಡಿಕೊಳ್ಳುವುದು ವಾಡಿಕೆ. ಭವರೋಗಗಳಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ಹೌದು ಮಧ್ಯ ಕರ್ನಾಟಕದ ಭಕ್ತ ಜನರ ಆರಾಧ್ಯ ಗುರುವರ್ಯರೆಂದೆ ಹೆಸರಾಗಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ರಾಂಪುರ, ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ, ಚಿತ್ರದುರ್ಗ ಜಿಲ್ಲೆಯ ಗುಂಡೇರಿ ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಹಿರಿಯೂರು ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಪೀಠ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರ.

ಸುಮಾರು 800 ವರ್ಷಗಳಿಂದ ಪ್ರವರ್ಧ ಮಾನಕ್ಕೆ ಬಂದಿರುವ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮಠವೂ ಈವರೆಗೆ 6 ಪೀಠಾಧ್ಯಕ್ಷರನ್ನು ಕಂಡಿದ್ದು,  ಧರ್ಮಾತೀತವಾಗಿ ಮತ್ತು ಜಾತ್ಯಾತೀತವಾಗಿ ನಿತ್ಯದಾಸೋಹ ಉಣಬಡಿಸುವ ಮಧ್ಯಕರ್ನಾಟಕದ ಅನ್ನದಾಸೋಹ ಮಠವೆಂಬ ಪ್ರಸಿದ್ದಿಗೆ ಪಾತ್ರವಾಗಿದೆ.

ಶ್ರೀಗಳು ತಪೋನಿರತ ಸಾಧಕರಾಗಿದ್ದು, ಶರಣೆಂದು ವರಬೇಡಿ ಬರುವ ಭಕ್ತರಿಗೆಲ್ಲಾ ಇಷ್ಟಾರ್ಥ ಸಿದ್ದಿ ಪ್ರಾಪ್ತಿರಸ್ತೋ ಅನ್ನುವಂತೆ ನಿರುದ್ಯೋಗಿಗಳಿಗೆ ಉದ್ಯೋಗ, ಜ್ಞಾನ ಭಾಗ್ಯ, ಸಂಕಷ್ಟವೆಂದು ಬಂದವರಿಗೆ ಪರಿಹಾರೋಪಾಯ ಮಾರ್ಗ, ಅವಿವಾಹಿತರಿಗೆ ವಿವಾಹ ಕಂಕಣ ಭಾಗ್ಯದ ಶುಭಾಶೀರ್ವಾದ ಅನುಗ್ರಹಿಸುವುದು ಹಾಲಸ್ವಾಮೀಜಿ ತಪಸ್ಸಾಧನೆ ಶಕ್ತಿಯಾಗಿದೆ.

ಇಷ್ಟೇ ಅಲ್ಲದೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದುಷ್ಟ ಶಕ್ತಿಗಳಿಂದುಂಟಾಗುವ ತಾಪತ್ರಯಗಳನ್ನು ದೂರವಾಗಿಸುವ ಮೂಲಕ ಹತ್ತು ಹಲವಾರು ವಿಧಗಳ ಸಮಸ್ಯೆಗಳಿಗೆಲ್ಲ ಶ್ರೀಗಳು ತಪ್ಸಾಧನೆ ಶಕ್ತಿಯ ಮೂಲಕವೇ ಸನ್ಮಾರ್ಗವನ್ನು ತೋರುವವರಾಗಿರುವ ಕಾರಣ ಒಂದಿಲ್ಲೊಂದು ಪರಿಹಾರದಿಂದ ನೆಮ್ಮದಿಯನ್ನು ಕಂಡು ಕೊಂಡ ಭಕ್ತರು ಪ್ರತಿವರ್ಷ ಹೊನ್ನಾಳಿ ತಾಲೂಕಿನ ರಾಂಪುರ ಕ್ಷೇತ್ರದಲ್ಲಿ ಮಾಘಬಹುಳ ತದಿಗೆಯಂದು ನಡೆಯುವ ಮಹಾರಥೋತ್ಸವದಲ್ಲಿ ಅವರವರ ಶಕ್ತ್ಯಾನುಸಾರವಾಗಿ ಒಣ ಕೊಬ್ಬರಿಯನ್ನು ಸುಡುವುದು ಮತ್ತು ಶ್ರೀಗಳ ಸನ್ನಿಧಿಯಲ್ಲಿ ದವಸಧಾನ್ಯ ತೈಲ ಮತ್ತಿತರೆ ಸ್ವರೂಪದ ಭಕ್ತಿಯ ಹರಿಕೆಯನ್ನು ಭಕ್ತಿಯಿಂದ ಸಮರ್ಪಿಸುವುದು ವಿಶೇಷತೆಗಳಲ್ಲಿ ಒಂದಾಗಿದೆ. 

ಪ್ರತಿನಿತ್ಯ ಶ್ರೀಗಳಲ್ಲಿ ಸಂಕಷ್ಟಗಳ ಪರಿಹಾರ ಕಂಡುಕೊಳ್ಳಲು ಬರುವ ಭಕ್ತರಿಗೆ ಮೊದಲು ದಾಸೋಹ ಪ್ರಸಾಧದ ಪ್ರಾಗಂಣಕ್ಕೆ ಸ್ವಾಗತಿಸುವುದು ಇಲ್ಲಿನ ವಿಶೇಷ. ಪ್ರಸಾಧ ಸ್ವೀಕರಿಸಿದ ಅನಂತರ ಶ್ರೀಗಳ ಸನ್ನಿಧಿಯಲ್ಲಿ ಪರಿಹಾರ ಮಾರ್ಗದರ್ಶನದ ಪ್ರಸಾಧವನ್ನು ಶ್ರೀಗಳು ಉಣಬಡಿಸುವುದು ಇಲ್ಲಿನ ಗುರುವರ್ಯರ ವೈಶಿಷ್ಟ್ಯತೆಯಾಗಿದೆ.   

ಸ್ವಂತ ಬದುಕಿನಿಂದ ಸಂತನ ಬದುಕು, ಕರ್ಮದ ಕರೆಯನ್ನು ಓಗೊಟ್ಟು ಪವಾಡ ಪುರುಷರ ಮಠವೆಂದು ಖ್ಯಾತಿಪಡೆದಿರುವ ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನದ ಮೂಲ ಗುರುಗಳಾದ ಒಂದನೆಯ ಹಾಲಸಿದ್ದೇಶ್ವರ ಹಾಲಸ್ವಾಮೀಜಿ ರಾಂಪುರ ಹಾಗೂ ಹಿರಿಯೂರು ಗ್ರಾಮದಲ್ಲಿ  ಎರಡನೇಯ ಪವಾಡ ಪುರುಷರು   ರಾಂಪುರ ಬೃಹನ್ಮಠ ಬಿಟ್ಟು  ಬಸವಾಪಟ್ಟಣದ ಗ್ರಾಮದ ನೈರುತ್ಯ ದಿಕ್ಕಿನ ಬೆಟ್ಟದ ಗವಿಯಲ್ಲಿ ಅನುಷ್ಠಾನಗೈದ ಹಾಲಶಂಕರೇಶ್ವರ ಹಾಲಸ್ವಾಮೀಜಿ ಗವಿಮಠ, ಗುಂಡೇರಿ ಗ್ರಾಮದಲ್ಲಿ ಹಾಲಸೋಮೇಶ್ವರ ಹಾಲಸ್ವಾಮೀಜಿಯವರು ಅನೇಕ ಗ್ರಾಮಗಳಲ್ಲಿ ಸಂಚಾರ ಮಾಡುತ್ತಾ ತಮ್ಮ ಲೀಲೆಗಳನ್ನು ತೋರಿಸುತ್ತಾ ಭಕ್ತರ ಪರಿಹಾರ ಮಾರ್ಗದರ್ಶನದ ನೀಡಿ ಮಠವನ್ನು ಸ್ಥಾಪಿಸಿದರು.

ಶ್ರೀಹಾಲಸ್ವಾಮೀಜಿಯವರು ಅನೇಕ ಗ್ರಾಮಗಳಲ್ಲಿ ಸಂಚಾರ ಮಾಡುತ್ತಾ ಭಕ್ತರಿಗೆ ಮಾರ್ಗದರ್ಶನ ನೀಡಿ, ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮೀಜಿಯವರಿಗೆ ಅಧಿಕಾರ ನೀಡಿದರು.  ತದನಂತರ   ಚನ್ನಬಸವಯ್ಯ (ಪುಟ್ಟ ಸ್ವಾಮಿ) ಯವರು 4 ವರ್ಷಗಳ ಕಾಲ ಉಸ್ತುವಾರಿ ನೋಡಿಕೊಂಡು. ಶ್ರೀಶೈಲ ಜಗದ್ಗುರು ಕೇದಾರ ಜಗದ್ಗುರು ಹಾಗೂ ಜಗದ್ಗುರು ಕಾಶಿ ಜಗದ್ಗುರುಗಳ ಸಾನಿಧ್ಯದಲ್ಲಿ 1996 ಜನವರಿ 21 ಮತ್ತು 22 ರಂದು   ಚನ್ನಬಸವಯ್ಯ  ಶ್ರೀ  ಷ||ಬ್ರ|| ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ನಾಮಕರಣದೊಂದಿಗೆ ಪೀಠಾಧ್ಯಕ್ಷಾರಾಗಿ ಪಟ್ಟಾಧಿಕಾರ  ವಹಿಸಿಕೊಂಡರು.

ಷ||ಬ್ರ|| ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಮಠಕ್ಕೆ ಬಂದ ಭಕ್ತರ ಜೊತೆಗೆ ಅವಿನಾಭಾವ ಸಂಬಂಧವಿಟ್ಟು, ಪ್ರತಿವರ್ಷ ಶ್ರಾವಣ ಮಾಸ,  ಕಾರ್ತಿಕ ಮಾಸ, ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ಶ್ರೀ ಮಠಗಳಲ್ಲಿ ಕತ್ರು ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಇಷ್ಟಲಿಂಗಾನುಷ್ಠಾನ ಉದರ ದಾಸೋಹದ ಜೊತೆಗೆ ಪ್ರತಿ ಚರ್ತುದರ್ಶಿಯಂದು ಜ್ಞಾನ ದಾಸೋಹ, ರೈತರಿಗೆ ಸಾವಯವ ಕೃಷಿಯ ಬಗ್ಗೆ ಅರಿವು, ಸಾಮಾನ್ಯ ಜನರಿಗೆ ಕಾನೂನು ಅರಿವು, ಸಮಾಜದಲ್ಲಿನ ಮೂಡನಂಬಿಕೆಗಳನ್ನು ತಡೆದುಹಾಕುವುದು. ವಿವಿಧ ಸಮಾಜದಲ್ಲಿ ಸಾಮರಸ್ಯ ತರುವುದು ಮತ್ತು ಬಡವರಿಗಾಗಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ,   ಆಯುರ್ವೇದದಲ್ಲಿ ಅಪಾರ ಜ್ಞಾನ ಹೊಂದಿ ಸಾವಿರಾರು ರೋಗಗಳಿಗೆ ಉಚಿತವಾಗಿ ಔಷಧಗಳನ್ನು ನೀಡುತ್ತಿದ್ದರಲ್ಲದೆ ಶಾರೀರಿಕ  ರೋಗಗಳ ಜೊತೆಗೆ ಮಾನಸಿಕ ರೋಗಗಳು ಗುಣಪಡಿಸುತ್ತಿದ್ದರು.ಹಲವಾರು ಕುಟುಂಬದಲ್ಲಿ ಕಲಹಗಳಿಗೆ ತಿಲಾಂಜಲಿಯನಿಟ್ಟು ಶಾಂತಿಯನ್ನು ಮರು ಸ್ಥಾಪನೆ, ಸಮಾಜದಲ್ಲಿ  ಬದಲಾವಣೆಗಳಾದಂತೆ ಪೂಜ್ಯರು ಮಠದಲ್ಲಿ ಮತ್ತು ಮಠದ ಕಾರ್ಯಕ್ರಮಗಳಲ್ಲಿ  ಇತ್ತೀಚಿನ ದಿನಗಳಲ್ಲಿ ಹಲವಾರು ಬದಲಾವಣೆ ತರುವುದರ ಮೂಲಕ ಮೂಡನಂಬಿಕೆಯ  ಕಾರಣದಿಂದ  ಬಸವಪಟ್ಟಣದಲ್ಲಿ ನಡೆಯುವ ಮುಳ್ಳು ಗದ್ದುಗೆಯ ಉತ್ಸವ ಮಾಡುವುದನ್ನು 2015 ರಿಂದ ಕೈಬಿಟ್ಟಿದರು.

ಪೂಜ್ಯರು ಅಧಿಕಾರ ವಹಿಸಿಕೊಂಡ ಬಳಿಕ ಮಠಕ್ಕೆ ಭಕ್ತರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಆಯಿತು. ವಿಶಾಲವಾದ ಸಮುದಾಯ ಭವನ ಯಾತ್ರಿ ನಿವಾಸ ನಿರ್ಮಾಣ ಮಾಡಿದರು. ಮಕ್ಕಳಿಗೆ ಸಂಸ್ಕಾರ ಕೊಡುವ ಸಲುವಾಗಿ ಶಾಲೆಗಳನ್ನು ಆರಂಭಸಿದರು. ತಮ್ಮ ಮಠಗಳಲ್ಲಲ್ಲದೆ  ಸುತ್ತ ಮುತ್ತಲಿನ ಜಿಲ್ಲೆಗಳಾದ ದಾವಣಗೆರೆ ಶಿವಮೊಗ್ಗ ಚಿಕ್ಕಮಂಗಳೂರು ಚಿತ್ರದುರ್ಗ ಜಿಲ್ಲೆಯಲ್ಲಿ ಬಹಳ ಪ್ರಭಾವಿಗಳಾಗಿದ್ದ ಪೂಜ್ಯರು  ಯಾವುದೇ ಬೇಡಿಕೆಗಳಿಲ್ಲದೆ ಹಲವಾರು ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳನ್ನು  ಅತಿ ಹೆಚ್ಚು ಮಾಡಿದವರಲ್ಲಿ  ಮೊದಲಿಗರೆಂದರೆ ತಪ್ಪಾಗಲಾರದು.

ಜೂನ್ ತಿಂಗಳ ಕೊನೆಯಲ್ಲಿ ಕೊರೊನಾ ಪಾಜಿಟಿವ್ ವ್ಯಕ್ತಿ ಓರ್ವ ಶ್ರೀ ಗಳ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದುಕೊಂಡಿದ್ದರು. ಸಾಲದ್ದಕ್ಕೆ ಮಠದ ತುಂಬಾ ಓಡಾಡಿ ಎಲ್ಲರನ್ನೂ ಮಾತನಾಡಿಸಿದ್ದರು. ಪೂಜ್ಯರು ಕ್ರಮೇಣ ಆರೋಗ್ಯದ ಕಡೆ ಲಕ್ಷ ಕಡಿಮೆ ಮಾಡಿದ್ದರು ಎಂದೆನ್ನಿಸುತ್ತದೆ. ತಮ್ಮ ಕಫದ ಸಮಸ್ಯೆಯಿಂದ ಅನಾರೋಗ್ಯ ಉಂಟಾಗಿದೆ ಎಂದುಕೊಂಡಿದ್ದರು. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿರುವಾಗ ಭಕ್ತರು ಬಲವಂತ ಮಾಡಿ ಜುಲೈ 11ರಂದು ತಪಾಸಣೆಗಾಗಿ ಆಸ್ಪತ್ರೆಯಲ್ಲಿ ದಾಖಲಾದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅಂತಿಮವಾಗಿ ಜುಲೈ 15ರ ಸಂಜೆಯ ಸಮಯಕ್ಕೆ ಅಪಾರಾ ಭಕ್ತ ವೃಂದವನ್ನು ಶೋಕ ಸಾಗರದಲ್ಲಿ ಮುಳುಗಿಸಿ, ಶಿವ ಸಾಯುಜ್ಯವನ್ನು ಪಡೆದರು. ಶ್ರೀಗಳು ಭಕ್ತರ ಆರೋಗ್ಯದ ಬಗ್ಗೆ ಯೋಚಿಸಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು ಇಷ್ಟಕ್ಕೆಲ್ಲ ಕಾರಣವಾಯಿತೆಂದೆನಿಸುತ್ತದೆ. ಇನ್ನೂ ನಮಗೆ ಉಳಿದಿರುವುದು ನೆನಪು ಮಾತ್ರ.


ಹೊನ್ನಾಳಿ ಕವಿತಾ ಶಾಸ್ತ್ರೀ ಹೊಳೆಮಠ್

error: Content is protected !!