ಬಂಗಾರದ ಒಡೆವೆ ಹಾಕಿದ್ದೀರಾ? ನಕಲಿ ಪೊಲೀಸರಿದ್ದಾರೆ ಎಚ್ಚರ !

ಪೊಲೀಸರೆಂದು ನಂಬಿಸಿ, ಒಂದೇ ದಿನ ಮೂರು ಕಡೆ ವಂಚನೆ

ದಾವಣಗೆರೆ, ಜೂ. 3- ನಕಲಿ ಪೊಲೀಸರ ಹಾವಳಿ ಮತ್ತೆ ಶುರುವಾಗಿದೆ. ನಾವು ಪೊಲೀಸರು, ನಿಮ್ಮ ಮೇಲಿನ ಆಭರಣ, ಒಡವೆಯನ್ನು ನಮ್ಮ ಕಡೆ ಕೊಡಿ, ಪೇಪರ್‌ನಲ್ಲಿ ಸುತ್ತಿ ಕೊಡುತ್ತೇವೆ. ಇಲ್ಲಿ ಕಳ್ಳತನಗಳು ಹೆಚ್ಚಾಗಿವೆ ಎಂದು ಹೇಳಿ, ಒಡವೆ ಪಡೆದು, ನಕಲಿ ಆಭರಣ ಕೊಟ್ಟು ವಂಚಿಸುವ ಜಾಲ ಮತ್ತೆ ಜಾಗೃತಗೊಂಡಿದೆ. ಶುಕ್ರವಾರ ಒಂದೇ ದಿನ ಇಂತಹ ಮೂರು ಪ್ರಕರಣಗಳು ದಾಖಲಾಗಿವೆ. 

ಡಿ.ಸಿ. ಸಾಹೇಬರು ಬಂದಿದ್ದಾರೆ: ನಾವು ಪೊಲೀಸರು, ಡಿಸಿ ಸಾಹೇಬರು ಬಂದಿದ್ದಾರೆ. ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಕರೆದುಕೊಂಡು ಹೋಗಿ, ಎತ್ತರ ಹಾಗು ದಪ್ಪವಾಗಿದ್ದ ವ್ಯಕ್ತಿಯನ್ನು ತೋರಿಸಿ ಇವರು ಡಿಸಿ ಸಾಹೇಬರು. ಇವರು ಹೊಸ ರೂಲ್ಸ್ ಮಾಡಿದ್ದು, ಬಂಗಾರವನ್ನು ಮೈ ಮೇಲೆ ಹಾಕಿಕೊಂಡು ಓಡಾಡಬಾರದು.

ಬಂಗಾರಕ್ಕಾಗಿ ಇಲ್ಲಿ ಕೊಲೆಯಾಗಿದೆ.  ಬಿಚ್ಚಿ ಒಳಗೆ ಇಟ್ಟುಕೊಳ್ಳಿ ಎಂದು ಹೇಳಿ, ವಿಕಲಾಂಗ ಚೇತನರಾಗಿದ್ದ ಎಂ.ಬಿ. ರಾಘವೇಂದ್ರ (37) ಅವರ  ಕೊರಳಲ್ಲಿದ್ದ 40 ಸಾವಿರ ರೂ. ಬೆಲೆ ಬಾಳುವ 10 ಗ್ರಾಂ ಬಂಗಾರದ ಚೈನ್ ಬಿಚ್ಚಿಸಿ, ನಕಲಿ ಡಿಸಿ  ಸಾಹೇಬರ ಕೈಗೆ ಕೊಟ್ಟಿದ್ದಾರೆ. ಆ ವ್ಯಕ್ತಿ ಅದನ್ನು ಹಾಳೆಯಲ್ಲಿ ಸುತ್ತಿ ಚೈನ್ ವಾಪಾಸ್ ಕೊಟ್ಟಿದ್ದಾರೆ. ಸ್ವಲ್ಪ ಸಮಯದ ನಂತರ ರಾಘವೇಂದ್ರ ಕೈಯ್ಯಲ್ಲಿದ್ದ ಹಾಳೆಯನ್ನು ತೆರೆದು ನೋಡಿದಾಗ ಅದು ನನ್ನ ಚೈನ್ ಆಗಿರದೆ ನಕಲಿ ಬಂಗಾರದ ಸರವಾಗಿತ್ತು. ಈ ಬಗ್ಗೆ ರಾಘವೇಂದ್ರ ಅವರು ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಘಟನೆ ಜೂ.2ರ ಶುಕ್ರವಾರ ಬಳಿಗ್ಗೆ 10 ಗಂಟೆ ಸುಮಾರಿಗೆ ಹರಿಹರ ನಗರದ ಹೆಚ್.ಸಿ. ಬಡಾವಣೆ, 4ನೇ ಮೇನ್, ಅಂಬೇಡ್ಕರ್ ಕಾಲೇಜು ಬಳಿ ನಡೆದಿದೆ.

3.85 ಲಕ್ಷ ರೂ. ಬೆಲೆಯ ಆಭರಣ ವಂಚನೆ:  ದಾವಣಗೆರೆ ಕೆ.ಟಿ.ಜೆ. ನಗರ ಠಾಣಾ ವ್ಯಾಪ್ತಿಯ ಗಣೇಶ್ ಲೇಔಟ್‌ 2ನೇ ಮೇನ್, 1ನೇ ಕ್ರಾಸ್‌ನಲ್ಲಿ ಇಂತಹದ್ದೇ ಪ್ರಕರಣ ಶುಕ್ರವಾರ ನಡೆದಿದ್ದು, ಭ್ರಮಾ ರಂಬ ಎಂಬ ಮಹಿಳೆ, ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಸ್‌ ಮನೆಗೆ  ಹೋಗುತ್ತಿದ್ದಾಗ ನಡೆದಿದೆ.

20-25 ವರ್ಷ ವಯಸ್ಸಿನ ಯುವಕ ಬಂದು ನಾವು ಪೊಲೀಸರು, ಸಾಹೇಬರು ಕರೆಯುತ್ತಿದ್ದಾರೆ ಬನ್ನಿ ಎಂದು ಒಬ್ಬ ವ್ಯಕ್ತಿಯನ್ನು ತೋರಿಸಿದ್ದಾರೆ. ಆ ವ್ಯಕ್ತಿ ನಾವು ಪೊಲೀಸರು ನೀವು ಭಯಪಡಬೇಡಿ. ಬಂಗಾರದ ಆಭರಣಗಳನ್ನು ಧರಿಸಿಕೊಂಡು ಹೋಗುವುದು ಸರಿಯಲ್ಲ. ಅವುಗಳನ್ನು ಬಿಚ್ಚಿಕೊಡಿ, ನಾವು ಚೆಕ್ ಮಾಡಿ ವಾಪಸ್ ಕೊಡುತ್ತೇವೆ ಎಂದಿದ್ದಾರೆ. 

ಆಗ ಮಹಿಳೆ ಒಪ್ಪದಿದ್ದಕ್ಕೆ ನೀವು ನಮ್ಮ ಕೈಗೆ ಕೊಡಬೇಡಿ. ನೀವು ಧರಿಸಿದ್ದ ಬಂಗಾದ ಆಭರಣ ಬಿಚ್ಚಿಕೊಟ್ಟರೆ ನಾವು ನಿಮ್ಮ ಸೆರಗಿನಲ್ಲಿ ಹಾಕುತ್ತೇವೆ ಅವುಗಳನ್ನು ಗಂಟುಕಟ್ಟಿಕೊಂಡು ಹೋಗಿ. ಇತ್ತೀಚೆಗೆ ದಾವಣಗೆರೆಯಲ್ಲಿ ರಾಬರಿ ಕೇಸುಗಳು ಜಾಸ್ತಿಯಾಗುತ್ತಿದ್ದು, ನಾವು ಚೆಕ್ ಮಾಡಬೇಕಾಗಿದೆ ಎಂದು ತಿಳಿಸಿದಾಗ ಧರಿಸಿದ್ದ 42 ಗ್ರಾಂ ತೂಕದ ಎರಡು ಎಳೆಯ ಮಾಂಗಲ್ಯ ಸರ, ಕೈಯಲ್ಲಿದ್ದ 35 ಗ್ರಾಂ ತೂಕದ ಎರಡು ಬಳೆಗಳನ್ನು  ಬಿಚ್ಚಿ ಅವರ ಕೈಗೆ ಕೊಟ್ಟಾಗ ಅವರು ಸೀರೆ ಸೆರಗಿನಲ್ಲಿ ಹಾಕಿದ್ದಾರೆ., ಅವನ್ನು ಗಂಟು ಕಟ್ಟಿಕೊಂಡು ಮಹಿಳೆ ಮನೆಗೆ ಹೋಗಿದ್ದಾರೆ.  ಮನೆಯಲ್ಲಿ ಮಗಳಿಗೆ ತೋರಿಸಲು ಹೋದಾಗ ನಕಲಿ ಸರ ಹಾಗೂ ಕಲ್ಲು ಇದ್ದುದು ಗೊತ್ತಾಗಿದೆ. ಒಟ್ಟು ಸುಮಾರು 77 ಗ್ರಾ.ಂ ತೂಕದ 3.85 ಲಕ್ಷ ರೂ. ಮೌಲ್ಯದ ಆಭರಣಗಳ ವಂಚನೆಗೊಳಗಾಗಿ ದ್ದಾರೆ. ಈ ಕುರಿತು ದೂರು ದಾಖಲಿಸಿದ್ದಾರೆ.

ಶಿಕ್ಷಕಿಗೆ ವಂಚನೆ:  ದಾವಣಗೆೆರೆ ಸಿದ್ದವೀರಪ್ಪ ಬಡಾವಣೆ ಶಿಕ್ಷಕಿ ಚಂದ್ರಕಲಾ ಎಂಬುವವರು ಇದೇ ರೀತಿ ಗುರುವಾರ  ವಂಚನೆಗೊಳಗಾಗಿದ್ದು, 35 ಗ್ರಾಂ.ನ 2 ಲಕ್ಷ ರೂ. ಬೆಲೆಯ ಮಾಂಗಲ್ಯದ ಸರ ಕಳೆದುಕೊಂಡಿದ್ದಾರೆ. 

ಚಂದ್ರಕಲಾ ಅವರು  ಗುರುವಾರ ಶಾಮನೂರು ರಸ್ತೆಯ ನಂದಿನಿ ಆಸ್ಪತ್ರೆ ಬಳಿ ಶಾಲೆಗೆ ಕರ್ತವ್ಯಕ್ಕೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದಾಗ  ಖಾಕಿ ಪ್ಯಾಂಟ್, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಧರೆಸಿ, ನೀವು ಪ್ರತಿ ದಿನ ಕೊರಳಲ್ಲಿ ಮಾಂಗಲ್ಯದ ಚೈನು ಹಾಕಿಕೊಂಡು ಓಡಾಡುತ್ತಿದ್ದೀರಿ. ಪೊಲೀಸರು ಹೇಳಿದರೂ ಕೇಳುವುದಿಲ್ಲ. ಇಲ್ಲಿಯೇ ಸಮೀಪದಲ್ಲಿ ಯಾರೋ ಹೆಣ್ಣು ಮಗಳಿಗೆ ಚಾಕು ಹಾಕಿ ಚೈನ್ ಕಿತ್ತುಕೊಂಡು ಹೋಗಿದ್ದಾರೆ. ಆ ಮಹಿಳೆ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ನೀವು ಮಾಂಗಲ್ಯ ಚೈನ್ ಹಾಕಿಕೊಂಡು ಓಡಬೇಡಿ. ಚೈನ್ ತೆಗೆದುಕೊಡಿ ಪ್ಯಾಕ್ ಮಾಡಿ ಕೊಡುತ್ತೇನೆಂದು ಹೇಳಿದ್ದಾರೆ. 

ಅವರ ಮಾತು ನಂಬಿ ಮಹಿಳೆಯು  ಚೈನ್ ಕೊಟ್ಟಾಗ ಆ ವ್ಯಕ್ತಿ ಪ್ಯಾಕ್ ಮಾಡುತ್ತಿ ರುವಾಗ ಅಲ್ಲಿಯೇ ಇದ್ದ ಮತ್ತೊಬ್ಬ ವ್ಯಕ್ತಿ ಮಹಿಳೆಯನ್ನು ಮಾತನಾಡಿಸುತ್ತಾ ಅವರ ಗಮನ ಬೇರೆಡೆ ಸೆಳೆದಿದ್ದಾರೆ. ಮೊದಲ ವ್ಯಕ್ತಿ  ಚೈನ್ ಅನ್ನು ಪೇಪರ್‌ನಲ್ಲಿಟ್ಟು ಪ್ಯಾಕ್ ಮಾಡಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟು ಹೊರಟು ಹೋಗಿದ್ದಾರೆ. ತುಸು ಹೊತ್ತಿನ ನಂತರ ಮಹಿಳೆ  ಬ್ಯಾಗ್ ನಲ್ಲಿದ್ದ ಮಾಂಗಲ್ಯದ ಚೈನ್ ನೋಡಿದಾಗ ಅದು ನಕಲಿಯಾಗಿರುವುದು ಗೊತ್ತಾಗಿದೆ. ನನ್ನ ಗಮನ  ಬೇರೆಡೆ ಸೆಳೆದು 35 ಗ್ರಾಂ.ನ 2 ಲಕ್ಷ ರೂ. ಬೆಲೆಯ ಮಾಂಗಲ್ಯದ ಚೈನ್ ವಂಚಿಸಿದ್ದಾರೆ ಎಂದು ಮಹಿಳೆಯು ವಿದ್ಯಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!