ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಾನಂದ ಪುರಿ ಶ್ರೀ

ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಪುಣ್ಯಾನಂದ ಪುರಿ ಶ್ರೀ

ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗೆಪ್ಪ ಮೆಚ್ಚುಗೆ

ಹರಪನಹಳ್ಳಿ, ಏ. 3- ರಾಜ್ಯದ ವಾಲ್ಮೀಕಿ ನಾಯಕ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದವರು ಮಹಾ ತಪಸ್ವಿ ಲಿಂ. ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿಯವರು ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗೆಪ್ಪ  ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ವಾಲ್ಮೀಕಿ ನಗರದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಆಯೋಜಿಸಿದ್ದ ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಥಮ ಪೀಠಾಧಿಪತಿಯಾಗಿದ್ದ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿಯವರ 16ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಾಲ್ಮೀಕಿ ನಾಯಕ ಸಮಾಜ ಅರಿವಿನ ದಾರಿ ಕಾಣದೇ ಪರಿತಪಿಸುತ್ತಿರುವಾಗ ದಾರಿ ತೋರುವ ಪುಣ್ಯ ಪುರುಷರಾಗಿ ಶ್ರೀ ಪುಣ್ಯಾ ನಂದ ಪುರಿ ಮಹಾಸ್ವಾಮೀಜಿಯವರು ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಥಮ ಪೀಠಾಧಿಪತಿಯಾಗಿ ಶ್ರೀ ಕ್ಷೇತ್ರವು ಕೆಲವೇ ವರ್ಷಗಳಲ್ಲಿ ಸಮಾಜದ ಜನ ಮಾನಸದಲ್ಲಿ ವಿರಾಜಿಸುವಂತೆ ಮಾಡಿದರು. ಸಮಾಜದಲ್ಲಿ ಬಡವ-ಬಲ್ಲಿದ, ಮೇಲು-ಕೀಳು ಎಂಬ ಭಾವನೆಗೆ ಅವಕಾಶ ಕೊಡದೆ ಸಮಾಜದ ಎಲ್ಲ ರನ್ನೂ ಸಮಾನತೆಯಿಂದ ಕಾಣುತ್ತಾ, ಮಾನ ವೀಯ ಮೌಲ್ಯಗಳನ್ನು ಬಿತ್ತರಿಸುತ್ತಾ, ಭೋ ಗಾಧಿಗಳನ್ನು ತ್ಯಜಿಸಿ, ಸಾಮಾನ್ಯ ಜನತೆಯ ಹಾಗೂ ಸಮಾಜದ ಹಿತಕ್ಕಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಅವಿರತ ಪ್ರಯತ್ನ ಮಾಡಿದರು ಎಂದು ಹೇಳಿದರು.

ಮುಖಂಡರಾದ ಮಂಡಕ್ಕಿ ಸುರೇಶ ಹಾಗೂ ಅಲಮರಸಿಕೇರಿ ಟಿ.ಬಿ. ರಾಜು ಮಾತನಾಡಿ, ರಾಜ್ಯದ 4ನೇ ಅತಿ ದೊಡ್ಡ ಸಮಾಜದ ವಾಲ್ಮೀಕಿ ನಾಯಕ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ರಾಜ್ಯ ಪ್ರವಾಸ ಮಾಡಿ ಸಮಾಜವನ್ನು ಜಾಗೃತಿ ಮಾಡಲು ಶ್ರಮಿಸಿದ್ದರು. ಸಮಾಜದಲ್ಲಿರುವ ದುರ್ಬಲರ ಧ್ವನಿಯಾಗಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟರು. ಸಮಾಜದಲ್ಲಿ ಎಲ್ಲಿಯೇ ಅನ್ಯಾಯವಾದರೂ ತಕ್ಷಣ ಪ್ರತಿಕ್ರಿಯಿಸಿ ನ್ಯಾಯಪರ ಹೋರಾಟಕ್ಕೆ ಸಿದ್ಧರಾಗುತ್ತಿದ್ದರು ಎಂದರು.

ಯುವ ಮುಖಂಡ ರಾಜು ತಳವಾರ ಮಾತನಾಡಿ, ಪುಣ್ಯಾನಂದ ಶ್ರೀಗಳು ಬಹಿರಂಗದಲ್ಲಿ ಸೌಮ್ಯ ಪರ್ವತವಾಗಿದ್ದರು. ಅವರ ಆಲೋಚನೆಗಳು, ಸಾಮೂಹಿಕ ಕಾರ್ಯ ಯೋಜನೆಗಳು, ಕ್ರಿಯಾ ಯೋಜನೆಗಳು ಸಮಾಜ ನಿಷ್ಠವಾಗಿದ್ದವು. ಇಂತಹ ಮೇರು ವ್ಯಕ್ತಿತ್ವ ಹೊಂದಿದ್ದ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿಯವರು ಕಾಣದ ಕೈಗಳ ಕಪಟಕ್ಕೆ ಸಿಲುಕಿ ರೈಲ್ವೆ ಅಪಘಾತದಲ್ಲಿ ಕೊನೆಯುಸಿರೆಳೆದರು ಎಂದು ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಪ್ಪ ತಳವಾರ್, ಈಶಾಪುರ ಗ್ರಾಮ ಪಂಚಾಯ್ತಿ ಸದಸ್ಯ ಪೂಜಾರ್ ಮಂಜುನಾಥ್, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ಸಂಘಟನಾ ಕಾರ್ಯದರ್ಶಿ ಜಿ.ಕೆ. ಬಸವರಾಜ, ತಾಲ್ಲೂಕು ವಾಲ್ಮೀಕಿ ನಾಯಕ ಮಹಿಳಾ ಘಟಕದ ಗೌರವ ಅಧ್ಯಕ್ಷೆ ಟಿ. ಪದ್ಮಾವತಿ,  ಕೆ. ದ್ರಾಕ್ಷಾಯಿಣಮ್ಮ, ಮಂಜುಳಾ, ಪವಿತ್ರಾ, ರೇಖಾ ಮಂಜಪ್ಪ, ಮ್ಯಾಕಿ ಶಿವರಾಜ, ಮ್ಯಾಕಿ ಬಸವರಾಜ, ವಕೀಲರಾದ ಜಿಟ್ಟಿನಕಟ್ಟಿ ಮಂಜುನಾಥ, ಕವಸರ ರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!