ಹೊನ್ನಾಳಿ ಹಿರೇಕಲ್ಮಠದಲ್ಲಿ ರೈತ ಹುತಾತ್ಮ ದಿನಾಚರಣೆ

ಹೊನ್ನಾಳಿ, ಜು. 25 – ರೈತರಿಗಾಗಿಯೇ ಹೆಚ್ಚು ತಮ್ಮ ಬದುಕು ತೊಡಗಿಸಿಕೊಂಡಿದ್ದ ಮಾಜಿ ಸಚಿವರು ಹಾಗೂ ರೈತ ಸಂಘದ  ಪ್ರಥಮ ರಾಜ್ಯಾಧ್ಯಕ್ಷರಾದ ಹೆಚ್. ಎಸ್. ರುದ್ರಪ್ಪ ಅವರು ರೈತಾಪಿ ಜನರಿಗೆ ನೀಡಿದ ಕೊಡುಗೆಗಳನ್ನು ಉಳಿಸಿಕೊಳ್ಳುವ ಬಗ್ಗೆ ರೈತ ಸಂಘಟನೆಗಳು ಹೆಚ್ಚು ಚಿಂತನೆ ನಡೆಸಬೇಕಿದೆ ಎಂದು ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ  ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ವತಿಯಿಂದ ಹೆಚ್‍.ಎಸ್. ರುದ್ರಪ್ಪ ಅವರ 29ನೇ ಸ್ಮರಣಾರ್ಥ 39ನೇ ರೈತ ಹುತಾತ್ಮ ದಿನಾಚರಣೆಯ ಸಾನ್ನಿದ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಕೆಲವ ತಿಂಗಳುಗಳ ಹಿಂದೆ ಇಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಸಮ್ಮೇಳನದಲ್ಲಿ  ರೈತರೇ ತಮ್ಮ ಬೆಳೆಗೆ ಬೆಂಬಲ ಬೆಲೆ ನಿರ್ಧರಿಸುವುದು ಮೊದಲ ಅಜೆಂಡಾವಾಗಿತ್ತು. ಅದರಂತೆ ಅನೇಕ ಕಾರ್ಯ ಯೋಜನೆಗಳಿಗಾಗಿ ತಿಂಗಳಿಗೊಂದು ಸಭೆ ನಡೆಸುವ ಯೋಜನೆಯನ್ನು ಸದ್ಯಕ್ಕೆ ಶ್ರೀ ಮಠದಿಂದ ಮುಂದೂಡಲಾಗಿದ್ದು, ಇದಕ್ಕೆ ರೈತರು  ಸಹಕರಿಸಬೇಕು ಎಂದು ಶ್ರೀಗಳು ಹೇಳಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಳ್ಳಿ ನಾಗರಾಜಪ್ಪ ಮಾತನಾಡಿ, ಹೆಚ್‍.ಎಸ್. ರುದ್ರಪ್ಪ ಅವರು ಆರಂಭದಲ್ಲಿ ಸ್ವಾತಂತ್ರ ಹೋರಾಟಗಾರ ರಾಗಿ ನಂತರ ರಾಜಕಾರಣಿಯಾಗಿ ಕೊನೆಯಲ್ಲಿ  ರೈತ ಸಂಘದ ಕಡೆ ಮುಖ ಮಾಡಿ ರೈತರ ಅನೇಕ ಜಟಿಲ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸತತ ಪ್ರಯತ್ನ ನಡೆಸಿ ರೈತರಿಗೆ ಮಾರ್ಗದರ್ಶಕರಾಗಿದ್ದರು. ಇಲ್ಲವಾದಲ್ಲಿ ಇಂದಿಗೂ ರೈತರು  ಗುಲಾಮರಂತೆ ಜೀವನ ನಡೆಸಬೇಕಿತ್ತೆಂದು ವಿವರಿಸಿದರು.

ಅರಬಗಟ್ಟೆ ಬಸವರಾಜಪ್ಪ ಮಾತನಾಡಿ, ದಿ.ರುದ್ರಪ್ಪ ಅವರು ಕಾನೂನು ಪದವೀಧರರಾಗಿ ವೃತ್ತಿ ಆರಂಭಿಸಿ ಅದನ್ನು ತೊರೆದು ರಾಜಕಾರಣಕ್ಕೆ ಬಂದಿದ್ದು ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಸರ್ಕಾರ ಬಂಧಿಸುವ ಆದೇಶವನ್ನು ಅವರು ಎದುರಿಸಬೇಕಾಯಿತು.

ಹೊನ್ನಾಳಿ, ಶಿಕಾರಿಪುರ ಎರಡೂ ತಾಲ್ಲೂಕುಗಳ ವಿಧಾನಸಭಾ ಚುನಾವಣೆಗಳಲ್ಲಿ ನಿಂತು ಗೆದ್ದು ಬಂದ ಅವರು, ಸರ್ಕಾರದಲ್ಲಿ ಅರಣ್ಯ ಹಾಗೂ ಗ್ರಾಮೀಣ ಸೇರಿದಂತೆ ಇತರ 4 ಖಾತೆಗಳನ್ನು ನಿಭಾಯಿಸಿದ ಚತುರತೆ ಹೊಂದಿದ್ದರಲ್ಲದೇ, ನಂತರದಲ್ಲಿ ರೈತ ಮುಖಂಡ ಸುಂದರೇಶ, ನಂಜುಂಡ ಸ್ವಾಮಿ ಅವರ ಜೊತೆಗೂಡಿ ರೈತ ಸಂಘಟನೆಗೆ ಮುಂದಾಗಿದ್ದನ್ನು ವಿವರಿಸಿದರು.

ಕುಂದೂರು  ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರೇಮಠದ ಬಸವರಾಜಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿದರಗಡ್ಡೆ ಭರಮಪ್ಪ, ಗೊಗ್ಗ ರಮೇಶಪ್ಪ, ಸುಂಕದಕಟ್ಟೆ ಕರಿಬಸಪ್ಪ, ಉಮೇಶ, ಮುರುಗೇಶಪ್ಪ, ನ್ಯಾಮತಿ ಗೊಪಾಲಪ್ಪ, ಚನ್ನೇಶ, ಮಲ್ಲಿಕಾರ್ಜುನ, ಸೊರಟೂರು ನಿರಂಜನ, ಹೊಸಳ್ಳಿ ಬಸವರಾಜಪ್ಪ, ಕೆ.ಜಿ. ಷಣ್ಮುಖಪ್ಪ, ಮಾಜಿ ಸೈನಿಕ ರಮೇಶ್ ಮತ್ತಿತರರು ಇದ್ದರು.

error: Content is protected !!