ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ : ಡಾ.ಜೆ.ಜೆ. ಮೆಹೆಂದಳೆ

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ, ಪಾನ್‌ಮಸಾಲಾ, ಗುಟ್ಕಾ ಮುಂತಾದ ತಂಬಾಕು ಪದಾರ್ಥಗಳನ್ನು ಉಪಯೋಗಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುವುದಕ್ಕೋಸ್ಕರ ಡಾ|| ಜಿ.ಜೆ. ಮೆಹೆಂದಳೆ ಅವರು ಈ ಕೋಲ್ಯಾಜ್‌ ರಚಿಸಿದ್ದಾರೆ. 

ಕೋಲಾಜ್‌ ಚಿತ್ರವನ್ನು ಕರ್ನಾಟಕ ಸಮರ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಿ.ವಾಸುದೇವ್‌ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ವಾಸುದೇವ್‌ ಮಾತನಾಡಿ, ಸರ್ಕಾರ ತಂಬಾಕು ಪದಾರ್ಥಗಳ ಮಾರಾಟವನ್ನು ಕಟ್ಟುನಿ ಟ್ಟಾಗಿ ನಿಷೇಧಿಸಬೇಕು. ಮಾರಾಟ ಮಾಡುವವರನ್ನು ಶಿಕ್ಷಿಸಬೇಕು ಎಂದು ಅಭಿಪ್ರಾಯಪಟ್ಟರು. 

ಮಲೇರಿಯಾ ವಿರೋಧಿ ದಿನ ಅಂಗವಾಗಿ ಚಿತ್ರ ಕೋಲಾಜ್‌ ರಚಿಸಿದ ಮೆಹೆಂದಳೆ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಜನರು ಪರಿಸರದ ಅರಿವಿಲ್ಲದೇ ಎಲ್ಲೆಂದರಲ್ಲಿ ತಂಬಾಕು ಪದಾರ್ಥಗಳನ್ನು ತಿಂದು ಉಗುಳುತ್ತಿದ್ದಾರೆ. ಇಂದು ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ರೋಗಾಣು ಹರಡಲು ನಾವಾಗಿಯೇ ಅನುಕೂಲ ಮಾಡಿಕೊಟ್ಟಂತಾಗುವುದು. ಈ ಸಂಬಂಧ ಸರ್ಕಾರದ ಅಧಿಸೂಚನೆಯಂತೆ ಆಯಾ ಭಾಗದ ಸರ್ಕಾರಿ ನೌಕರರು ಉಗುಳುವ ಜನರನ್ನು ಕಂಡಲ್ಲಿ ಅಲ್ಲಿಯೇ ಅವರಿಗೆ ತಿಳಿ ಹೇಳಿದರೆ ಸಾರ್ವಜನಿಕ ಪ್ರದೇಶದಲ್ಲಿ ಉಗುಳುವ, ಉಗುಳಿ ಗಲೀಜು ಮಾಡುವುದು ಕಡಿಮೆಯಾಗಬಹುದು. ಆಯಾ ಪ್ರದೇಶದ ಪೊಲೀಸರು ಹೊರದೇಶದಂತೆ ನಮ್ಮಲ್ಲಿಯೂ ಉಗುಳುವವರನ್ನು ಕಂಡಲ್ಲಿ ಇನ್ನು ಅಲ್ಲಿಯೇ ದಂಡ ವಿಧಿಸಲು ಪ್ರಾರಂಭಿಸಬೇಕು. ಈ ವಿಷಯವಾಗಿ ಸರ್ಕಾರ ಕೂಡಲೇ ಕಾನೂನನ್ನೂ ರಚಿಸಿ, ಆದೇಶ ಹೊರಡಿಸಲಿ.

ಸಾರ್ವಜನಿಕರು ಸ್ವಚ್ಛತೆ ಕಡೆಗೂ ಗಮನ ಹರಿಸಬೇಕು. ಮಳೆಗಾಲ ಪ್ರಾರಂಭವಾದುದರಿಂದ ಸೊಳ್ಳೆಗಳು ವ್ಯಾಪಕವಾಗಿ ಹರಡಿ ಮಲೇರಿಯಾ, ವಾಂತಿ-ಭೇದಿ ಮುಂತಾದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಎಲ್ಲರೂ ತಮ್ಮ ತಮ್ಮ ಜವಾಬ್ಧಾರಿ ಅರಿತು, ಸರ್ಕಾರವೇ ಎಲ್ಲಾ ಕ್ರಮ ಕೈಕೊಳ್ಳಲಿ ಎಂಬ ಉಢಾಪೆ ತೋರದೆ, ಸಾರ್ವಜನಿಕರು ಉಗುಳುವವರ ವಿರುದ್ಧ ಹಾಗೂ ಸ್ವಚ್ಛತೆ ಬಗೆಗೆ ಈ ಮೂಲಕ ಅಭಿಯಾನ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಸೃಜನ ಬುಕ್ ಸ್ಟಾಲ್ ಮಾಲೀಕರಾದ ರವಿ ಜಗಳೂರು, ರವಿ ಹೋವಳೆ, ಸರ್ವೋದಯ ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

error: Content is protected !!