ಹರಿಹರದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗುರುಬಸವರಾಜ್
ಹರಿಹರ, ಏ.15- ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಜನರ ಒಳಿತಿಗಾಗಿ ಸಂವಿಧಾನವನ್ನು ರಚಿಸುವ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ವನ್ನು ಒದಗಿಸಿದ್ದರಿಂದ ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದರು ಎಂದು ತಹಶೀಲ್ದಾರ್ ಗುರುಬಸವರಾಜ್ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಿನ್ನೆ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಭಾರತದಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದರಿಂದ ಹಿಂದುಳಿದ ವರ್ಗಗಳ ಜನರು ಮತ್ತು ಬಡ, ಶೋಷಿತರ ವರ್ಗದವರಿಗೆ ಇವತ್ತು ಎಲ್ಲಾ ರಂಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಡೆಯುವುದಕ್ಕೆ ಅನುಕೂಲ ಆಗಿದೆ. ಅಂಬೇಡ್ಕರ್ ಅವರಿಗೆ ಇದ್ದ, ದೂರದೃಷ್ಟಿಯ ಫಲವಾಗಿ ಮತ್ತು ಅವರು ಅಂದು ತೆಗೆದುಕೊಂಡ ಕಠಿಣವಾದ ನಿರ್ಧಾರದಿಂದಾಗಿ ಇಂದು ಭಾರತ ವಿಶ್ವಮಟ್ಟದಲ್ಲಿ ತನ್ನ ಪ್ರಸಿದ್ದಿ ಪಡೆಯುವುದಕ್ಕೆ ಸಹಕಾರಿಯಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಲ್ಲಿದ್ದ ಸಾಮಾಜಿಕ ಕಳಕಳಿ ಹಾಗೂ ಅವರ ಆದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ಅವರಂತೆ ಪ್ರಬುದ್ಧತೆಯ ಜೀವನವನ್ನು ನಡೆಸಿಕೊಂಡು ಹೋಗುವಂತೆ ಅವರು ಕಿವಿ ಮಾತು ಹೇಳಿದರು.
ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಮ ಸಮಾಜವನ್ನು ನಿರ್ಮಿಸಲು ತಮ್ಮ ಜೀವನವಿಡೀ ಶ್ರಮಿಸಿದ್ದಾರೆ. ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹಗಲು – ರಾತ್ರಿ ಎನ್ನದೇ ಹೋರಾಟ ಮಾಡಿದ ಮಹಾನ್ ಚೇತನ, ದುರ್ಬಲ ವರ್ಗದವರ ಮತ್ತು ವಂಚಿತರ ಪಾಲಿನ ಆಶಾಕಿರಣವಾಗಿದ್ದರು ಎಂದು ಹೇಳಿದರು.
ತಾ.ಪಂ ಪ್ರಭಾರಿ ಇಓ ರಾಮಕೃಷ್ಣಪ್ಪ ಮಾತನಾಡಿ, ಅಂಬೇಡ್ಕರ್ ರವರು ಜನರಲ್ಲಿ ಇದ್ದ ಮೌಢ್ಯತೆ ಹಾಗೂ ಅಂಧಕಾರ ವಿಮುಕ್ತಿ ಗೊಳಿಸಿ, ಅನ್ಯಾಯ, ಅಸಮಾನತೆಯ ಸಂಕೋಲೆಗಳನ್ನು ಬಿಡುಗಡೆ ಮಾಡಿದ, ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು ಎಂದರು.
ಮನುಷ್ಯನು ಜೀವನದಲ್ಲಿ ಎಲ್ಲಾ ಬಗೆಯಲ್ಲಿ ಸುಖದಿಂದ ಇರಬೇಕಾ ದರೆ ಶಿಕ್ಷಣ ಪಡೆದರೆ ಮಾತ್ರ ಸಾಧ್ಯ. ಹಾಗಾಗಿ ಅದನ್ನು ಪಡೆದುಕೊಂಡು ಕುಟುಂಬದ ನಿರ್ವಹಣೆ ಮಾಡುವಂತೆ ಅವರು ಪ್ರೇರೇಪಿಸಿದರು. ಅವರು ಕಂಡ ಭವ್ಯ ಭಾರತದ ಕನಸು ಕೋಟ್ಯಾಂತರ ಭಾರತೀಯರ ಬದುಕು ಸಂವಿಧಾನದಲ್ಲಿ ಅಡಕವಾಗಿದೆ. ಹಾಗಾಗಿ ಇಂದಿನ ಯುವಕರು ಸಂವಿಧಾನದ ಮಹತ್ವವನ್ನು ಅರಿತುಕೊಂಡು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬೆಳೆಯುವು ದನ್ನು ರೂಢಿಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ಕೃಷಿ ಇಲಾಖೆಯ ನಿರ್ದೇಶಕ ನಾರನಗೌಡ್ರು, ಲೋಕೋಪಯೋಗಿ ಇಲಾಖೆಯ ಶಿವಮೂರ್ತಿ, ಸೇರಿದಂತೆ ಇತರರು ಹಾಜರಿದ್ದರು.