ರಾಗಿ ಮಾರಾಟದ ಹಣ ಪಾವತಿಸಲು ಮನವಿ

ರಾಗಿ ಮಾರಾಟದ ಹಣ ಪಾವತಿಸಲು ಮನವಿ

ಜಗಳೂರು, ಮೇ 31- ತಾಲ್ಲೂಕಿನಲ್ಲಿ  ಸರ್ಕಾರದ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿದ್ದು, ರೈತರಿಗೆ ಬರಬೇಕಾದ ಹಣ ಇದುವರೆಗೂ ಪಾವತಿ ಯಾಗದಿರುವ ಬಗ್ಗೆ ಮತ್ತು ತಕ್ಷಣವೇ ರೈತರಿಗೆ ಹಣ ಪಾವತಿಸುವಂತೆ ಒತ್ತಾಯಿಸಿ ಇಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹ್ಮದ್ ತಿಳಿಸಿದ್ದಾರೆ.

ಎಪಿಎಂಸಿ ಆವರಣದಲ್ಲಿ ಕೆಲವು ತಿಂಗಳ ಹಿಂದೆ ತೆರೆಯಲಾಗಿದ್ದ ಸರ್ಕಾರದ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರಕ್ಕೆ ತಾಲ್ಲೂಕಿನ ಸಾವಿರಾರು ಜನ ಸಣ್ಣ ರೈತರು ರಾಗಿಯನ್ನು ಮಾರಾಟ ಮಾಡಿದ್ದರು. ಈ ಪೈಕಿ ನೂರಾರು ಜನರಿಗೆ ಈವರೆಗೂ ಹಣ ಪಾವತಿ ಆಗಿಲ್ಲ. ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಿಗೂ ಮನವಿ ಸಲ್ಲಿಸಿ ತಕ್ಷಣವೇ ಹಣ ಬಿಡುಗಡೆಗೆ ಮನವಿ ಮಾಡಲಾಯಿತು.

ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ತಕ್ಷಣವೇ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ದಾರೆ. ನಿಯೋಗದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಪಿ.ಎಸ್. ಸುರೇಶ್ ಗೌಡ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳ ರೈತರು ಮತ್ತು ರೈತ ಮುಖಂಡರು ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

error: Content is protected !!