ಶಿಕ್ಷಣ, ಆರೋಗ್ಯ, ನೀರಾವರಿಗೆ ಮೊದಲ ಆದ್ಯತೆ

ಶಿಕ್ಷಣ, ಆರೋಗ್ಯ, ನೀರಾವರಿಗೆ ಮೊದಲ ಆದ್ಯತೆ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್

 ಮಾಯಕೊಂಡ,ಏ.26- ಶಿಕ್ಷಣ, ಆರೋಗ್ಯ ಮತ್ತು ನೀರಾವರಿಗೆ ಮೊದಲು ಆದ್ಯತೆ  ನೀಡುವುದರ ಮೂಲಕ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ   ಲೋಕಿಕೆರೆ ಗ್ರಾಮದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಶ್ಯಾಗಲೆ, ಹೂಮಿನಮಡು, ಗೋಣಿವಾಡ, ಮತ್ತಿ, ಕದರನಹಳ್ಳಿ, ಅರೇಹಳ್ಳಿ, ತ್ಯಾವಣಿಗಿ, ಮಿಯ್ಯಾಪುರ, ಗೋಮಾಳ, ನಲ್ಕುದುರೆ ಗೋಮಾಳ, ಅಶೋಕ ಎನ್ ಕ್ಯಾಂಪ್, ನಲ್ಕುದುರೆ, ನವಿಲೇಹಾಳ್, ದೊಡ್ಡಘಟ್ಟ, ಕಬ್ಬಳ, ಸೇವಾನಗರ, ಮಧುರನಾಯಕನಹಳ್ಳಿ, ಮಧುರನಾಯ್ಕನಹಳ್ಳಿ ತಾಂಡಾ, ಗುಡ್ಡದ ಕೊಮಾರನಹಳ್ಳಿ, ಹಾಲೇಶಪುರ, ಜಿ.ಬಿ.ಹಳ್ಳಿ, ನಿಲೋಗಲ್, ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯ ಸಿಗಬೇಕಿದ್ದು, ನಮ್ಮ ಟ್ರಸ್ಟ್ ಮೂಲಕವೂ ಸಹ ಈಗಾಗಲೇ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಅದನ್ನು ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ವಿಸ್ತರಿಸಲಾಗುವುದು. ಸರ್ಕಾರದಿಂದಲೂ ಸಹ ಶಿಕ್ಷಣ, ಆರೋಗ್ಯ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಕೇವಲ 8 ತಿಂಗಳಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ. 98 ಕೋಟಿಯಷ್ಟು ಹಣವನ್ನು ಗ್ಯಾರಂಟಿ ಯೋಜನೆಯ ಮೂಲಕ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದ ಅವರು, ದಾವಣಗೆರೆಗೆ ಸಂಸದರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಮಾಯಕೊಂಡ ಕ್ಷೇತ್ರವನ್ನು ನೀರಾವರಿ ಪ್ರದೇಶ ಮಾಡಲು ಹೆಚ್ಚಿನ ಒತ್ತು ನೀಡಲಾಗುವುದು. ಈಗಾಗಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು 22  ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಕೆಲಸ ಮಾಡಿದ್ದು, ಇನ್ನು ಹೆಚ್ಚಿನ ಕೆಲಸ ಮಾಡುವ ಬಗ್ಗೆ ಈಗಾಗಲೇ ರೂಪುರೇಷೆ ತಯಾರಿಸಲಾಗಿದ್ದು, ಇದರಲ್ಲಿ ನಾನೂ ಸಹ ಭಾಗಿಯಾಗುತ್ತಿರುವುದು ಹರುಷ ತಂದಿದೆ ಎಂದರು.

ಪ್ರತಿ ಗ್ರಾಮಗಳಿಗೂ ಕುಡಿಯವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ ಕೇಂದ್ರದ ಯೋಜನೆಗಳನ್ನು ಬಳಸಿಕೊಂಡು ಈ ಭಾಗದ ಶಾಸಕ ಕೆ.ಎಸ್.ಬಸವಂತಪ್ಪನವರ ಸಹಕಾರದಿಂದ ಪ್ರತಿ ಮನೆ-ಮನೆಗೂ ನೀರು ಸರಬ ರಾಜು ಮಾಡಲಾಗುವುದು ಎಂದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಇದೀಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ನ್ಯಾಯದಡಿ 25 ಗ್ಯಾರಂಟಿಗಳನ್ನು ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹನುಮಂತಪ್ಪ, ಬಿ.ಜಿ.ನಾಗರಾಜ್, ಲೋಕಿಕೆರೆ ಪ್ರದೀಪ್, ಬಿ.ಹೆಚ್.ಹಾಲಪ್ಪ, ಪಿ.ಸಿ.ಗೋವಿಂದಸ್ವಾಮಿ, ಲೋಹಿತ್, ಸುರೇಶ್ ಪೈ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!