ಭಾವವಗಳೇ ಸುಂದರ. ವ್ಯಕ್ತಿ ವ್ಯಕ್ತಿಗೂ ಇವು ಬದಲಾಗುತ್ತವೆ. ಕೆಲವರಿಗೆ ಬೇವಾಗಿದ್ದು, ಅದೇ ಇನ್ನೊಬ್ಬರಿಗೆ ಬೆಲ್ಲವಾಗಬಹುದು. ಮಾನಸಿಕವಾಗಿ ನಾವು ಏನನ್ನು ಯೋಚಿಸುತ್ತೇವೋ ಅದೇ ನಮ್ಮ ಭಾವನೆಗಳು ಯಾದ್ಭಾವಂ ತದ್ ಭವತಿ ಎಂಬಂತೆ ನಮ್ಮ ಮಾನಸಿಕ, ದೈಹಿಕ ಸ್ಥಿತಿ ಉತ್ತಮವಾಗಿದ್ದರೆ ನಮಗೆ ಎಲ್ಲವು ಸಿಹಿಯಾಗಿ ಕಾಣುತ್ತದೆ.
ಕೆಲವರಿಗೆ ಶಿಮ್ಲಾದಂತಹ ಪ್ರಕೃತಿ ಸೌಂದರ್ಯವು ಬರೀ ಕಲ್ಲು, ಮಣ್ಣು, ಗಿಡಗಳಂತೆ ಕಾಣುತ್ತದೆ. ಆದರೆ ಪ್ರಕೃತಿಯನ್ನು ಪ್ರೀತಿಸುವವರಿಗೆ ಅದೇ ಸ್ವರ್ಗ ಎನಿಸುತ್ತದೆ. ಭಾವನೆಗಳ ಓಟ ಬಲು ಜೋರು. ಅದರ ಬೆನ್ನಟ್ಟಿ ನಾವು ಹೋಗುತ್ತೇವೆ. ಸಿಹಿ-ಕಹಿ ಭಾವನೆಗಳು ನಿರಂತರ ನಮ್ಮನ್ನು ಕಾಡುತ್ತವೆ.
ಜನಿಸಿದ ಶಿಶು ಅಳುತ್ತದೆ. ಅಮ್ಮನ ಒಡಲಲ್ಲಿ ಬೆಚ್ಚಗೆ ಇದ್ದು, ಏಕಾದರೂ ಹೊರಗೆ ಬಂದೇನೋ ಎಂದು ದುಃಖದಿಂದ ಅಳುವುದು. ಆದರೆ ತಂದೆ-ತಾಯಿಗೆ ಸಿಹಿಯಾದ ಭಾವನೆಗಳು ತುಂಬಿ ಬರುತ್ತವೆ. ನೋವನ್ನೆಲ್ಲಾ ಮರೆತು ತಾಯಿ ಸಂತಸ ಪಡುತ್ತಾಳೆ.ತಾಯಿಯ ಒಡಲಿನ ಕುಡಿಯಾಗಿ ಮಗು ಹೆತ್ತವರ ಪ್ರೀತಿಯಿಂದ ಖುಷಿಪಡುತ್ತದೆ. ಆರ್ಥಿಕವಾಗಿ ಏನೂ ತೊಂದರೆ ಇಲ್ಲದಿದ್ದರೆ ಮಗುವಿನ ಜೀವನ ಸಿಹಿ ಭಾವನೆಗಳಿಂದ ತುಂಬಿರುತ್ತದೆ. ಮುಂದೆ ಯೌವ್ವನದಲ್ಲಿ ಒಳ್ಳೆಯ ನೌಕರಿ ಒಳ್ಳೆಯ ಸಂಗಾತಿ ಸಿಕ್ಕರಂತೂ ಸ್ವರ್ಗ ಮೂರೇ ಗೇಣು ಎಂಬಂತೆ ಸಿಹಿ ಭಾವನೆಗಳೇ ತುಂಬಿರುತ್ತವೆ.
ನನ್ನ ಅನುಭವದಲ್ಲಿ ಸಿಹಿ-ಕಹಿ ಭಾವನೆಗಳು ಹಲವಾರು. ನನ್ನ ಮಗ ಒಂದು ಹುಡುಗಿಯನ್ನು ಇಷ್ಟಪಡುತ್ತೇನೆಂದಾಗ ದುಃಖ ಉಕ್ಕಿ ಕಹಿಯಾದ ಭಾವನೆಯಿಂದ ಜೀವನದಲ್ಲಿ ಉತ್ಸಾಹವೇ ಇರದಂತಾಯ್ತು. ಆದರೆ ನಂತರ ಎಲ್ಲಾ ಒಪ್ಪಿ ಅದೇ ಹುಡುಗಿ ಸೊಸೆ ಆದಾಗ ನಾನೇ ಹುಡುಕಿದ್ದರು ಇಂತಹ ಹುಡುಗಿ ಸಿಗುತ್ತಿರಲಿಲ್ಲ ಎಂದು ಸಂತಸ ಸಿಹಿ ಭಾವನೆ ತುಂಬಿತು.
ನಮ್ಮ ಹಿರಿಯರು ದಾರ್ಶನಿಕರು ಹೇಳುವಂತೆ ನಾವು ಎಲ್ಲಾ ಪರಿಸ್ಥಿತಿಗಳಲ್ಲೂ ಸಮಚಿತ್ತದಿಂದ ಇರಬೇಕು. ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು. ಮಾನಸಿಕವಾಗಿ ಗಟ್ಟಿಯಾಗಿರಬೇಕು. ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕ ಬಂದರೆ ಜೀವ ಕಳೆದುಕೊಳ್ಳುತ್ತಾರೆ. ಇದು ಘೋರ ಪಾಪ. ಒಬ್ಬ ವ್ಯಕ್ತಿಗೆ ಜೀವ ಕೊಡಲು ಆಗದೇ ಇದ್ದಾಗ ಜೀವ ತೆಗೆಯುವುದು ಕಳೆದುಕೊಳ್ಳುವುದು ದೊಡ್ಡ ಅಪರಾಧ.
ನಿನ್ನೆಯ ಚಿಂತೆ ಬಿಟ್ಟು ನಾಳೆಗೆ ಹೆಚ್ಚು ನಿರೀಕ್ಷೆ ಮಾಡದೆ ಇಂದಿನ ಬದುಕನ್ನು ಸಂತಸದಿಂದ ಕಳೆಯಬೇಕು. ಆತ್ಮತೃಪ್ತಿ ಇರಬೇಕು. ಬರೀ ಸುಖವೇ ಬೇಕು. ಕಷ್ಟ ಬರಲೇಬಾರದು ಅನ್ನುವುದಕ್ಕಿಂತ ಕಷ್ಟ ಎದುರಿಸುವ ಶಕ್ತಿಯನ್ನು ದೇವರಲ್ಲಿ ಬೇಡಬೇಕು. ಆಗ ಸಮಚಿತ್ತ ಇರುವುದು. ನಮ್ಮ ಹಿರಿಯರು ಚೈತ್ರ ಮಾಸದ ಮೊದಲ ಹಬ್ಬವಾಗಿ ಯುಗಾದಿಯನ್ನು ಆಚರಣೆಗೆ ತಂದಿದ್ದಾರೆ.
ಬೇವು ಬೆಲ್ಲ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಬರೀ ಬೆಲ್ಲವೇ ಆದರೆ ಅದನ್ನು ಸಹಿಸಲು ಕಷ್ಟ. ಬೇವು ಸ್ವಲ್ಪ ತಿಂದರೆ ಬೆಲ್ಲದ ರುಚಿ ಹೆಚ್ಚಾಗುವುದು ಎಂಬ ಕಾರಣಕ್ಕಾಗಿ ಬೇವು ಬೆಲ್ಲ ಸವಿಯುವ ಹಬ್ಬವಾಗಿ ಯುಗಾದಿ ಹಬ್ಬ ಸಮರಸದಿಂದ ಎಲ್ಲರೂ ಸೇರಿ ಯುಗಾದಿ ಆಚರಿಸೋಣ. ಕ್ರೋಧಿ ನಾಮ ಸಂವತ್ಸರದಲ್ಲಿ ದೇಶದಲ್ಲಿ ಸುಭಿಕ್ಷತೆ ನೆಲೆಸಲಿ.
– ಕೋಮಲ ವಿ. ಕುಮಾರ್, ದಾವಣಗೆರೆ.