ದಾವಣಗೆರೆ, ಮಾ. 15- ಹೊರ ಗುತ್ತಿಗೆ ನೌಕರ ವರ್ಗದ ನೇರ ಪಾವತಿ ಪ್ರಕ್ರಿಯೆಯಲ್ಲಿ ಗಾರ್ಡನ್ ವಿಭಾಗದ ಹೊರ ಗುತ್ತಿಗೆ ನೌಕರರ ಪ್ರಸ್ತಾವನೆ ಇಲ್ಲದಿರುವುದು ಮತ್ತು ಕಡೆಗಣಿಸಿರುವುದು ವಿಷಾದದ ಸಂಗತಿಯಾಗಿದೆ. ನೇರ ಪಾವತಿ, ಖಾಯಮಾತಿ ವ್ಯಾಪ್ತಿಗೆ ಗಾರ್ಡನ್ ವಿಭಾಗದ ಕಾವಲುಗಾರರು, ಗಾರ್ಡನರ್‌ಗಳನ್ನು ಸೇರ್ಪಡೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಯಿತು.
18 ಜನ ದಾವಣಗೆರೆ ಮಹಾನಗರ ಪಾಲಿಕೆ ತೋಟಗಾರಿಕೆ ವಿಭಾಗದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದು, ಉದ್ಯಾನವನ ಸ್ವಚ್ಛತೆಗಾಗಿ, ತ್ಯಾಜ್ಯ ವಸ್ತುಗಳನ್ನು ಒಂದೆಡೆ ಕಲೆ ಹಾಕಿ ಅದನ್ನು ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದೇವೆ. ಕಸ ಗುಡಿಸುವ ಕಾಯಕವನ್ನು ಕಾಳಜಿಯಿಂದ ನಿರ್ವಹಿಸುತ್ತಾ ಬಂದಿದ್ದೇವೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಕೊರೊನ ಸಂದರ್ಭದಲ್ಲಿ ಉದ್ಯಾನವನಗಳ ಸಂರಕ್ಷಣೆ ಮತ್ತು ಸ್ವಚ್ಛತೆಗಾಗಿ ಪರಿಶ್ರಮಿಸಿದ್ದು, ಹೊರ ಗುತ್ತಿಗೆ ನೌಕರರ ನೇರ ಪಾವತಿ ವಿಚಾರದಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಎನ್. ಪ್ರಕಾಶ್, ಎಸ್. ಅಂಜಿನಪ್ಪ, ಸದಾಂ ಹುಸೇನ್, ಸುಧಾಕರ್, ಪ್ರಕಾಶ್ ಬಿ. ಇಂಗಳಗೊಂದಿ, ರಮೇಶ್, ಸುಬೋಧ್ ಎನ್. ಬಂಡೀಕರ್, ಪಿ.ಎಸ್. ಸಿದ್ದೇಶ್, ಅನ್ನಪೂರ್ಣಮ್ಮ, ಮರಿಯಮ್ಮ, ಕರಿಯಮ್ಮ, ಎಂ. ಶೈಲಾ, ಬಿ. ರಾಕೇಶ್, ಹೆಚ್. ಷಣ್ಮುಖ, ರಿಯಾಜ್ ಅಹ್ಮದ್, ಡಿ. ಸಂತೋಷ್, ಟಿ.ಕೆ. ಗಣೇಶ್, ಮಹಾಲಿಂಗಸ್ವಾಮಿ ಪಾಲ್ಗೊಂಡಿದ್ದರು.