ಪ್ರೊ.ಗಿಲ್ ಬೆನ್ ಹೆರೂತ್
ಇಸ್ರೇಲ್ ಮೂಲದ ಹೀಬ್ರೂ ಮಾತೃಭಾಷೆ ಯವರಾದ ಪ್ರೊ. ಗಿಲ್ ಬೆನ್ ಹೆರೂತ್ ಸದ್ಯ ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಸಹಾ ಯಕ ಪ್ರಾಧ್ಯಾಪಕರಾಗಿದ್ದಾರೆ. ಇಪ್ಪತ್ತು ವರ್ಷ ಗಳಿಂದ ಕರ್ನಾಟಕದ ಸಂಪರ್ಕ ಹೊಂದಿರುವ ಪ್ರೊ. ಗಿಲ್ ಅವರು ಅಪ್ಪಟ ಕನ್ನಡ ಸಾಹಿತ್ಯದ ಅಭಿಮಾನಿ. ಕನ್ನಡದ ಮಹಾಕವಿ ಹರಿಹರನ ರಗಳೆಗಳ ಬಗ್ಗೆ ಅಧ್ಯಯನ ಮಾಡಿ, ಪಿಎಚ್ಡಿ ಪದವಿ ಪಡೆದಿದ್ದಾರೆ. ಕಿಟೆಲ್ ಶಬ್ದಕೋಶವನ್ನು ಅಂತರ್ಜಾಲಕ್ಕೆ ಅಳವಡಿಸಿರುವುದು ಪ್ರೊ. ಗಿಲ್ ಅವರ ಕನ್ನಡ ಪ್ರೀತಿಗೆ ಸಾಕ್ಷಿಯಾಗಿದೆ. ಹರಿಹರನ ಬಸವರಾಜ ದೇವರ ರಗಳೆಯಲ್ಲಿ ಬಸವಣ್ಣನವರ ವಚನಗಳ ಸಾಲುಗಳಿರುವು ದನ್ನು ಪ್ರೊ. ಗಿಲ್ ಶೋಧಿಸಿದ್ದಾರೆ.
ಸಿರಿಗೆರೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರುಗಳು
ಸಿರಿಗೆರೆ, ಅ.12- ಕನ್ನಡದಲ್ಲಿ ಸಮೃದ್ಧ ಸಾಹಿತ್ಯ ಸಂಪತ್ತಿದೆ, ಆದರೆ ಆಳವಾಗಿ ಅಭ್ಯಾಸ ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಕನ್ನಡದ ಎಲ್ಲಾ ಗ್ರಂಥಗಳನ್ನು ಡಿಜಿಟಲ್ ಮಾಡಿದರೆ ಸಾಹಿತ್ಯದಲ್ಲಿ ಹೊಸ ಸಂಶೋಧನೆಗೆ ಅವಕಾಶವಾಗುತ್ತದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಸಿರಿಗೆರೆಯ ಸದ್ಧರ್ಮ ನ್ಯಾಯಪೀಠದ ಆವರಣದಲ್ಲಿ ನಿನ್ನೆ ನಡೆದ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಯುವ ಪೀಳಿಗೆಯಲ್ಲಿ ಭಾಷಾಭಿಮಾನ, ಸಾಹಿತ್ಯದ ಆಸಕ್ತಿ ಕಡಿಮೆಯಾಗಿದೆ.ಅವರು ಮಾತನಾಡುವ ಭಾಷೆಯು ಕುಲಗೆಟ್ಟಿದೆ. ಮಾತುಗಾರಿಕೆಯಲ್ಲಿ ಅನವಶ್ಯಕ ಆಂಗ್ಲ ಪದಗಳನ್ನು ಬಳಸುವುದು ಸೂಕ್ತವಲ್ಲ. ಕನ್ನಡ ಭಾಷೆಯಲ್ಲಿ ಸಮೃದ್ಧ ಪದ ಸಂಪತ್ತಿದ್ದು, ಶುದ್ಧವಾದ ಕನ್ನಡದಲ್ಲಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಗ್ರಾಮೀಣ ಹೆಣ್ಣು ಮಕ್ಕಳು ಇಂದಿಗೂ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಅಮೆರಿಕಾ ಫ್ಲೋರಿಡಾ ವಿಶ್ವವಿದ್ಯಾಲಯದ ಸಹಾಯಕ ಅಧ್ಯಾಪಕ ಪ್ರೊ. ಗಿಲ್ ಬೆನ್ ಹೆರೂತ್ ಮಾತನಾಡಿ, ಕನ್ನಡ ಸುಂದರ ಮತ್ತು ಶ್ರೀಮಂತ ಭಾಷೆ. ಈ ಭಾಷೆಯ ಸಾಹಿತ್ಯವು ನನ್ನನ್ನು ಆಕರ್ಷಿಸಿತು. ಎ.ಕೆ. ರಾಮಾನುಜನ್ ಅನುವಾದದ ಸ್ಪೀಕಿಂಗ್ ಆಫ್ ಶಿವ ಓದಿದ್ದರಿಂದ ವಚನ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು. ಬಸವಣ್ಣನವರ `ಉಳ್ಳವರು ಶಿವಾಲಯ ಮಾಡುವರು’ ವಚನದ ಪ್ರೇರಣೆಯಿಂದ ಇನ್ನಷ್ಟು ಉತ್ಸಾಹ ಬಂದಿತು. ಬಸವಣ್ಣನ ಕಾಲಮಾನಕ್ಕೆ ತುಂಬಾ ಹತ್ತಿರವಾದ ಕವಿ ಹರಿಹರ. ಹಾಗಾಗಿ ಹರಿಹರ ಕವಿಯ ರಗಳೆಗಳ ಬಗ್ಗೆ ಸಂಶೋಧನೆ ಮಾಡಲು ಸಾಧ್ಯವಾಯಿತು ಎಂದರು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರೊ. ಗಿಲ್ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಶ್ರೀಗಳು ಪ್ರೊ. ಗಿಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್, ಅಣ್ಣನ ಬಳಗದ ಬಿ.ಎಸ್. ಮರುಳಸಿದ್ದಯ್ಯ, ಪ್ರಾಚಾರ್ಯ ಶಿವಕುಮಾರ ಸುರಕೋಡ್, ಮುಖ್ಯೋಪಾ ಧ್ಯಾಯ ಬಸವರಾಜಪ್ಪ, ಸೋಮಶೇಖರ್, ಎನ್. ಎಂ. ಶಾಂತ, ಅಧ್ಯಾಪಕ ನಾಗರಾಜ ಸಿರಿಗೆರೆ ಮುಂತಾದವರು ಪಾಲ್ಗೊಂಡಿದ್ದರು.