ದಾವಣಗೆರೆ, ಮಾ. 15- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹರಿಹರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಇದೇ ದಿನಾಂಕ 18 ಮತ್ತು 19 ರಂದು ಎರಡು ದಿನಗಳ ಕಾಲ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಿನಾಂಕ 18 ರಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ, 9 ಕ್ಕೆ ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಅವರ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಲಿದ್ದಾರೆ.
ಅಂದು ಬೆಳಿಗ್ಗೆ 10.30 ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ. ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಪ್ರೊ.ಸಿ.ವಿ. ಪಾಟೀಲ್ ಅವರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿ ದ್ದಾರೆ. ಡಾ. ಹೆಚ್. ಗಿರಿಜಮ್ಮ ಮಹಾದ್ವಾರವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಹೆಳವನಕಟ್ಟೆ ಗಿರಿಯಮ್ಮ , ಪ್ರೊ. ಬಿ. ಕೃಷ್ಣಪ್ಪ ವೇದಿಕೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಲಿದ್ದಾರೆ.
ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಉಪಸ್ಥಿತರಿರುವರು.
ಬೆಂಗಳೂರಿನ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಪ್ರಧಾನ ಭಾಷಣ ಮಾಡಲಿದ್ದು, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಎಸ್.ಎಸ್. ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ ಕೆ.ಬಿ. ಕೊಟ್ರೇಶ್, ಕಾಂಗ್ರೆಸ್ ಯುವ ಮುಖಂಡ ಜಿ.ಬಿ. ವಿನಯ್ ಕುಮಾರ್, ಡಾ.ಜಿ. ರವಿಕುಮಾರ್ ಸೇರಿದಂತೆ, ಅನೇಕ ಗಣ್ಯರು ಆಗಮಿಸಲಿದ್ದಾರೆ.
ದಿನಾಂಕ 18 ರ ಮಧ್ಯಾಹ್ನ 2 ಗಂಟೆಗೆ ವಿವಿಧ ಗೋಷ್ಠಿಗಳು ಆರಂಭಗೊಳ್ಳಲಿವೆ. `ಶಿಕ್ಷಣ ಮತ್ತು ಕನ್ನಡದ ಅಸ್ಮಿತೆ’ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಡಾ.ಹೆಚ್.ವಿ. ವಾಮದೇವಪ್ಪ ವಹಿಸಲಿದ್ದು, ಮಧ್ಯಾಹ್ನ 3.30 ಕ್ಕೆ ಇತಿಹಾಸ, ಕೃಷಿ, ದಲಿತ ಚಳವಳಿ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಹೆಚ್.ಎಸ್. ಹರಿಶಂಕರ್ ವಹಿಸಿಕೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ನಡೆಯುವ ಯುವ ಗೋಷ್ಠಿಯ ಅಧ್ಯಕ್ಷತೆಯನ್ನು ಸಿದ್ದೇಶ್ ಎಸ್. ಕುರ್ಕಿ ವಹಿಸಿಕೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರ ನಿರ್ದೇಶಕ ಡಾ. ರಾಧಾಕೃಷ್ಣ ಪಲ್ಲಕ್ಕಿ ವಹಿಸುವರು.
ದಿನಾಂಕ 19 ರಂದು ಬೆಳಿಗ್ಗೆ 9 ಗಂಟೆಗೆ ಕವಿಗೋಷ್ಠಿ ಆರಂಭವಾಗಲಿದೆ. ಬೆಳಿಗ್ಗೆ 10.30ಕ್ಕೆ ಮಠಾಧೀಶರ ವಿಶೇಷ ಚಿಂತನ-ಮಂಥನ ನಡೆಯಲಿದೆ. ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಧ್ಯಾಹ್ನ 1.30 ಕ್ಕೆ ಮಧ್ಯ ಕರ್ನಾಟಕ ಚಳವಳಿ ಸ್ವರೂಪಗಳು ಕುರಿತು ನಡೆಯಲಿರುವ ಗೋಷ್ಠಿಯ ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ವಹಿಸುವರು. ಪ್ರಗತಿಪರ ಚಿಂತಕರಾದ ಬಿ.ಎನ್. ಮಲ್ಲೇಶ್, ಡಾ. ದಾದಾಪೀರ್ ನವಿಲೇಹಾಳ್, ಡಾ.ಆನಂದ ಋಗ್ವೇದಿ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ 4ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ಬಿ. ದಿಳ್ಳೆಪ್ಪ, ಕೆ. ರಾಘವೇಂದ್ರ ನಾಯರಿ, ಸುರೇಶ್ ಕುಣಿಬೆಳಕೆೇರೆ, ಜಿಗಳಿ ಪ್ರಕಾಶ್, ರುದ್ರಾಕ್ಷಿಬಾಯಿ, ರೇವಣಸಿದ್ಧಪ್ಪ ಅಂಗಡಿ ಮತ್ತಿತರರಿದ್ದರು.