ಇಲ್ಲಿ ಸರಗ ಹರಿಯುವುದಿಲ್ಲ: ಕೋಣದ ಬಲಿ ಇಲ್ಲ, ಅತ್ತಿಗೆರೆಯಲ್ಲಿ ಸಾತ್ವಿಕತೆ ಮೆರೆವ ದುರುಗಮ್ಮನ ಜಾತ್ರೆ

ಇಲ್ಲಿ ಸರಗ ಹರಿಯುವುದಿಲ್ಲ: ಕೋಣದ ಬಲಿ ಇಲ್ಲ,  ಅತ್ತಿಗೆರೆಯಲ್ಲಿ ಸಾತ್ವಿಕತೆ ಮೆರೆವ ದುರುಗಮ್ಮನ ಜಾತ್ರೆ

ಜಿ.ಜಗದೀಶ್, ಮಾಯಕೊಂಡ

ಮಾರಮ್ಮ, ದುರುಗಮ್ಮನ ಜಾತ್ರೆಗಳೆಂದರೆ, ಕುರಿ, ಕೋಳಿ, ಕೋಣ ಬಲಿಯದೇ ಕಾರುಬಾರು. ಊರ ಗಡಿ ಸುತ್ತಲೂ ಸರಗ ಚೆಲ್ಲಿ ಭಕ್ತಿ ಪ್ರದರ್ಶಿಸುವುದು ಸಾಮಾನ್ಯ. ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಅತ್ತಿಗೆರೆಯಲ್ಲಿ ಸಾರ್ವಜನಿಕ ಪ್ರಾಣಿ ಬಲಿ ನಡೆಸದೇ, ಮಾಂಸಹಾರದ ಎಡೆ ಹಾಕದೇ  ಸಾತ್ವಿಕವಾಗಿ ಹಬ್ಬ ನಡೆಸುವುದು ವಿಶೇಷ.

ಗ್ರಾಮ ದೇವತೆ ಜಾತ್ರೆಗಳಲ್ಲಿ  ಬಹುತೇಕ ಒಂದೇ ರೀತಿಯ ಸಂಪ್ರದಾಯಗಳ ಆಚರಣೆ ಇರುತ್ತದೆ.

ಸೋಮವಾರ ಮದುವಣಗಿತ್ತಿ ಶಾಸ್ತ್ರ, ಕಂಕಣಧಾರಣೆ ಮಾಡುವುದು, ಮಂಗಳವಾರ ದೇವಿಯ ಮೆರವಣಿಗೆ ನಡೆಸಲಾಗುತ್ತದೆ. ಬುಧವಾರ ಬೆಳಗಿನ ಜಾವ ಕೋಣದ‌ ರಕ್ತ, ಕರುಸವನ್ನು ಜೋಳದ ಅನ್ನ ತುಂಬಿದ ಸರಗದ ಬುಟ್ಟಿಯಲ್ಲಿ ಬೆರೆಸಿ, ಊರ ಸುತ್ತಲೂ ಉಗ್ಗುತ್ತಾರೆ. ಸರಗ ಹರಿಯುವುದರಿಂದ ಗ್ರಾಮದಲ್ಲಿ ಸುಖ – ಶಾಂತಿ – ಸಮೃದ್ಧಿ ಹೆಚ್ಚುತ್ತದೆ ಎಂಬುದು ಪ್ರತೀತಿ.

ಜಾತ್ರೆಯಲ್ಲಿ ಇಂತಹ ಸಮುದಾಯದವರು ಇಂತದ್ದೇ ಕಾಯಕದಲ್ಲಿ ಪಾಲ್ಗೊಳ್ಳಬೇಕೆಂಬ ಅನೌಪಚಾರಿಕ ನಡೆಗಳೂ ಅನಾದಿ ಕಾಲದಿಂದ ಬೆಳೆದು ಬಂದಿದೆ.  

ಅತ್ತಿಗೆರೆಯಲ್ಲಿ ಗ್ರಾಮಸ್ಥರು ಇದ್ಯಾವುದಕ್ಕೂ ಅವಕಾಶ ನೀಡದೇ ಸಾರ್ವಜನಿಕ ಪ್ರಾಣಿಬಲಿ, ಸರಗ ಹಾಕುವುದನ್ನು ಕೈಬಿಟ್ಟು, ದುರುಗಮ್ಮನಿಗೆ ಅನ್ನ, ಮೊಸರು, ಬಾಳೆಹಣ್ಣಿನ ಎಡೆಯನ್ನಷ್ಟೇ ಹಾಕಿ ಭಕ್ತಿ ಮೆರೆಯುತ್ತಾರೆ. ವಿಜೃಂಭಣೆಯಿಂದ ಸಾತ್ವಿಕ ರೀತಿಯಲ್ಲಿ ದುರುಗಮ್ಮ ದೇವಿ ಜಾತ್ರೆ ನೆರವೇರಿಸುತ್ತಾರೆ.

ಕೋಣ ಬಲಿ‌ ಕೊಡಲ್ಲ,  ಸರಗ ಹಾಕಲ್ಲ : `ನಮ್ಮೂರಿನಲ್ಲಿ ಊರೊಳಗೆ ಮತ್ತು ಊರ ಸುತ್ತಮುತ್ತಲೂ ಹಲವಾರು ಕರವುಗಲ್ಲುಗಳಿವೆ. ಅವುಗಳು ಲಿಂಗದ ಆಕಾರದಲ್ಲಿವೆ. ಲಿಂಗ ಮುದ್ರೆಯ ಕುರುಹುಗಳಿರುವ ಕಡೆ ಮಾಂಸಾಹಾರ, ಪ್ರಾಣಿಗಳ ಬಲಿ ನೀಡುವುದು ನಿಷಿದ್ಧ, ಎಂದು ನಮ್ನ ಹಿರಿಯರು ನಂಬಿದ್ದಾರೆ, ಸರಗ ಚೆಲ್ಲಿದರೆ ಲಿಂಗ ಮುದ್ರೆಯ ಕಲ್ಲುಗಳಿಗೆ ಅಪಚಾರ ಎಂದು ಭಾವಿಸಿ, ನಮ್ಮೂರ ಜಾತ್ರೆಯಲ್ಲಿ ಸರಗ ಚೆಲ್ಲುವು ದನ್ನು ನಿಷೇಧಿಸಲಾಗಿದೆ. ಮನೆಗಳಲ್ಲಿ ಮಾಂಸಾಹಾರ ಉಣಬಡಿಸಲು ಅವಕಾಶವಿದೆ. ದೇವಿಗೆ ಮಾತ್ರ ಸಿಹಿ ಅಡುಗೆ ಎಡೆ ಮಾಡುತ್ತೇವೆ ಎನ್ನುತ್ತಾರೆ, ಗ್ರಾ.ಪಂ. ಸದಸ್ಯ ಮಂಜುನಾಥ ಬಾಬು, ಮುಖಂಡರಾದ ಎ.ಕೆ.ಅಂಜಿನಪ್ಪ, ಎ.ಒ.ರವಿ, ದೇವರಾಜ್, ವೆಂಕಟೇಶ್, ಶಿವಣ್ಣ, ಮನೋಜ್, ಸಿದ್ದೇಶ್ ಮತ್ತು ನಾಗರಾಜ್.

ಕಳೆಗಟ್ಟಿದ ಸಂಭ್ರಮ : ಊರಿನಲ್ಲಿ ಜಾತ್ರೆ ಸಂಭ್ರಮ ಕಳೆಗಟ್ಟಿದೆ. ದೇವಾಲಯಗಳಿಗೆ ಸುಣ್ಣ – ಬಣ್ಣ ಮಾಡಿಸಲಾಗಿದೆ. ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ ಹಾಕಲಾಗಿದೆ.

`ಗ್ರಾಮ ಪಂಚಾಯತಿಯಿಂದ ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಸ್ವಚ್ಛತೆ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಎಲ್ಲರ ಸಹಕಾರದಿಂದ ಜಾತ್ರೋತ್ಸವ ಯಶಸ್ವಿಗೊಳಿಸಲಾಗುತ್ತಿದೆ ಎನ್ನುತ್ತಾರೆ ಗ್ರಾ. ಪಂ. ಅಧ್ಯಕ್ಷ ಕೆ.ಎಂ.ಮಹೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿವೇಕಾನಂದ.

error: Content is protected !!