ಮಲೇಬೆನ್ನೂರು, ಜ. 22- ಭಾನುವಳ್ಳಿ ಗ್ರಾಮದ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲೇ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಾಯಕ ಸಮಾಜದವರು ಕಳೆದ 13 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಧರಣಿ ಸ್ಥಳದಲ್ಲಿ ಇಟ್ಟಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಫೋಟೋಗಳು ಶನಿವಾರ ತಡರಾತ್ರಿಯಿಂದ ಕಾಣೆಯಾಗಿವೆ.
ಫೋಟೋಗಳನ್ನು ತೆಗೆದುಕೊಂಡು ಹೋಗುವ ಮೂಲಕ ದಲಿತರ ಹೋರಾಟದ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿರುವವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವ ಪ್ರತಿಮೆ ತೆರವು ಮಾಡಲು 10 ದಿನಗಳ ಸಮಯಾವಕಾಶ ನೀಡಿರುವುದರ ಹಿಂದೆ ಕಾಣದ ಕೈಗಳ ಕೆಲಸ ನಡೆದಿದೆ ಎಂದು ದೂರಿದರು. ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನೆ ಅವರು ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಗಳಿ ರಂಗಪ್ಪ, ಕೆ.ಬಿ. ಮಂಜುನಾಥ್, ದಿನೇಶ್ಬಾಬು, ಮಕರಿ ಪಾಲಾಕ್ಷಪ್ಪ, ಪಾರ್ವತಿ ಬೋರಯ್ಯ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ಭಾನುವಳ್ಳಿ ಗ್ರಾಮಸ್ಥರು ಈ ವೇಳೆ ಹಾಜರಿದ್ದರು.