ಅತಿಯಾದ ಆತ್ಮವಿಶ್ವಾಸವೇ ನನ್ನ ಗೆಲುವಿಗೆ ಮುಳುವಾಯಿತು

ಅತಿಯಾದ ಆತ್ಮವಿಶ್ವಾಸವೇ  ನನ್ನ ಗೆಲುವಿಗೆ ಮುಳುವಾಯಿತು

ಭಾವುಕರಾಗಿ ಕಣ್ಣೀರು ಹಾಕಿದ ಜಗಳೂರಿನ ಮಾಜಿ ಶಾಸಕ ರಾಜೇಶ್

ಜಗಳೂರು, ಮೇ 27- ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಲು ನಾನು ಶ್ರಮಿಸಿದೆ, ಆದರೆ `ಗೆದ್ದಲುಗಳು ಕಟ್ಟಿದ ಹುತ್ತದಲ್ಲಿ ಹಾವು ಬಂದು ಸೇರಿದಂತಾಯಿತು’ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್.ಪಿ.ರಾಜೇಶ್  ಭಾವುಕರಾಗಿ ಕಣ್ಣೀರು ಹಾಕಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಜಗಳೂರು ವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು ಮತ್ತು ಎಚ್.ಪಿ.ರಾಜೇಶ್ ಅಭಿಮಾನಿ ಬಳಗ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆ ಹಾಗೂ ಮತದಾರರಿಗೆ ಕೃತಜ್ಞತೆ ಸಭೆಯಲ್ಲಿ ಅವರು ಮಾತನಾಡಿದರು.

2008 ರಿಂದ 2023ರವರೆಗೆ ಐದು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. 1 ಬಾರಿ ಗೆದ್ದು ನಾಲ್ಕು ಬಾರಿ ಸೋತಿದ್ದೇನೆ, ಸೋತರೂ ದೃತಿಗೆಡುವುದಿಲ್ಲಾ. 

ಸೋತರೂ ನನ್ನ ಜೊತೆ ಬದ್ಧತೆಯಿಂದ ಇರುವ ಅಪಾರ ಸಂಖ್ಯೆಯ ಅಭಿಮಾನಿಗಳ ಅಭಿಮಾನಕ್ಕೆ ನನ್ನ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಭಾವುಕರಾದರು.  

ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡದೇ ಇದ್ದರೂ ಶೇ.80 ರಷ್ಟು ಕಾಂಗ್ರೆಸ್ ಮುಖಂಡರು ನನ್ನ ಬೆನ್ನಿಗೆ ನಿಂತು ಶ್ರಮಿಸಿದರು. ನಾನು ಕನಿಷ್ಠ ಹತ್ತು ಸಾವಿರ ಸಂಖ್ಯೆಯಲ್ಲಿ ಸೋತಿದ್ದರೆ ಬೇಸರವಾಗುತ್ತಿರಲಿಲ್ಲ. ಕೆಲವೇ ಓಟುಗಳಿಂದ ಸೋತಿದ್ದಕ್ಕೆ ಬೇಸರವಾಗುತ್ತಿದೆ. 

ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು 50 ಸಾವಿರ ಮತ ಪಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ. ಆದರೆ ನಾನು   ಪಕ್ಷೇತರನಾಗಿ 49 ಸಾವಿರಕ್ಕೂ ಅಧಿಕ ಮತ ಪಡೆದೆ. ತಾಂತ್ರಿಕವಾಗಿ `ನೋಟಾ’ ಮತಗಳಿಂದ ನಾನು ಸೋತಿದ್ದೇನೆ. ಮತದಾರರಿಗೆ ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂಬ ದೃಢನಂಬಿಕೆಯಿಂದ ಮತದಾರರು ಕಾಂಗ್ರೆಸ್‍ಗೆ ಮತ ಹಾಕಿದರು. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಅನಿವಾರ್ಯ. ಅತಿಯಾದ ಆತ್ಮವಿಶ್ವಾಸವೇ ನನ್ನ ಗೆಲುವಿಗೆ ಮುಳುವಾಯಿತು. ಸೋಲಿನಿಂದ ನನಗಿಂತಲೂ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಹೆಚ್ಚಿನ ದುಃಖ ಉಂಟಾಗಿದೆ. ಜಿಪಂ, ತಾಪಂ ಚುನಾವಣೆಗಳು ಹತ್ತಿರವಾಗುತ್ತಿದ್ದು ಕಾರ್ಯಕರ್ತರು, ಅಭಿಮಾನಿಗಳು ದೃತಿಗೆಡಬಾರದು. ಇನ್ನು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಎಲ್ಲರ ಜೊತೆ ಚರ್ಚಿಸಿ ನನ್ನ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ರಾಜೇಶ್ ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಎಸ್.ಕೆ.ರಾಮರೆಡ್ಡಿ, ತಾ.ಪಂ. ಮಾಜಿ ಸದಸ್ಯರಾದ ಕುಬೇರಪ್ಪ, ಮರೇನಹಳ್ಳಿ ಬಸವರಾಜ್‌, ಎಂ.ಎಸ್.ಪಾಟೀಲ್, ಎನ್.ಎಸ್.ರಾಜು, ಯು.ಜಿ.ಶಿವಕುಮಾರ್, ಮೊಬೈಲ್ ಮಂಜುನಾಥ್, ತಿಪ್ಪೇಸ್ವಾಮಿ ಗೌಡ, ಗಿರೀಶ್ ಒಡೆಯರ್, ಚಿತ್ತಪ್ಪ,   ವಕೀಲ  ರಂಗನಾಥ್ ಸೇರಿದಂತೆ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.

error: Content is protected !!