ಪಾಲಿಕೆ: ಮುಂದುವರಿದ ಕಮಲ ಪಾರುಪತ್ಯ

ದಾವಣಗೆರೆ, ಫೆ.24- ಮಹಾನಗರ ಪಾಲಿಕೆ ಎರಡನೇ ಅವಧಿಯ ಮೇಯರ್ ಆಗಿ 25ನೇ ವಾರ್ಡ್‌ನ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ 44ನೇ ವಾರ್ಡ್‌ನ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಎಸ್.ಟಿ. ವೀರೇಶ್, ಉಪ ಮೇಯರ್ ಸ್ಥಾನಕ್ಕೆ ಶಿಲ್ಪಾ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ 38ನೇ ವಾರ್ಡ್‌ನ ಗಡಿಗುಡಾಳ್ ಮಂಜುನಾಥ್ ಹಾಗೂ 36ನೇ ವಾರ್ಡ್‌ನ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರು. 29 ಮತ ಪಡೆದು ಬಿಜೆಪಿ ಜಯಗಳಿಸಿದರೆ ಕಾಂಗ್ರೆಸ್ 22 ಮತ ಪಡೆಯಲು ಸಾಧ್ಯವಾಯಿತು. 

ಕಳೆದ ಬಾರಿ ತಮ್ಮದೇ ಪಕ್ಷದ ಸದಸ್ಯರಿಬ್ಬರು ಗೈರು ಹಾಜರಾಗಿದ್ದರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಮೇಯರ್ ಅಧ್ಯಕ್ಷ ಗಾದಿಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ಆದರೆ ಈ ಬಾರಿ ಆಡಳಿತ ಹಿಡಿಯಲು ಶತಾಯಗತಾಯ ಪ್ರಯತ್ನ ಪಟ್ಟಿದ್ದ ಕಾಂಗ್ರೆಸ್‌ಗೆ ಪಕ್ಷದ ಸದಸ್ಯ ದೇವರಮನೆ ಶಿವಕುಮಾರ್ ನಿನ್ನೆ ರಾತ್ರಿ ದಿಢೀರ್ ರಾಜೀನಾಮೆ ನೀಡಿದ್ದು ಆಘಾತ ತಂದಿತ್ತು.

ಈ ಮೂಲಕ ಕಳೆದ ಮೂರ್ನಾಲ್ಕು ತಿಂಗಳು ಮುನ್ನವೇ ಕಾಂಗ್ರೆಸ್ ನಡೆಸಿದ ಎಲ್ಲಾ ಕಸರತ್ತುಗಳು ವಿಫಲವಾಗಿ, ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಿತು. ಕಾಂಗ್ರೆಸ್ ಸದಸ್ಯರೇ ಬಿಜೆಪಿಯ ಹಾದಿಯನ್ನು ಸುಗಮಗೊಳಿಸಿದಂತಾಯಿತು.

ರಾತ್ರಿ ನಡೆದ ಬೆಳವಣಿಗೆಯಿಂದ ಕಾಂಗ್ರೆಸ್ ಸೋಲು ಖಚಿತವಾಗುತ್ತಿದ್ದಂತೆ ಮತದಾನಕ್ಕೆ ಆಗಮಿಸಬೇಕಾಗಿದ್ದ ವಿಧಾನ ಪರಿಷತ್ ಸದಸ್ಯರು ನಿರ್ಧಾರ ಬದಲಿಸಿದ್ದರು. ಅಲ್ಲದೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಗೈರು ಹಾಜರಾದರು. ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರಾದರೂ, ಯಾರಲ್ಲೂ ಉತ್ಸಾಹ ಕಂಡು ಬರಲಿಲ್ಲ. 

ಬಿಜೆಪಿಯ ನಾಲ್ವರು ಪಕ್ಷೇತರರೂ ಸೇರಿ 21 ಸದಸ್ಯರ ಬಲ ಹೊಂದಿತ್ತು. ಜೊತೆಗೆ ಓರ್ವ ಶಾಸಕ, ಸಂಸದ  ಹಾಗೂ ವಿಧಾನ ಪರಿಷತ್‌ನ ಏಳು ಸದಸ್ಯರು ಸೇರಿ ಒಟ್ಟು 30 ಮತಬಲ ಹೊಂದಿತ್ತು. ಆದರೆ ಸದಸ್ಯೆ ಜಯಮ್ಮ ಗೋಪಿನಾಯ್ಕ ಅವರು ಅನಾರೋಗ್ಯದ ನಿಮಿತ್ತ್ಯ ಗೈರಾಗಿದ್ದರಿಂದ 29 ಮತಗಳನ್ನು ಪಡೆಯಿತು.

ಸದಸ್ಯರೊಂದಿಗೆ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯರುಗಳಾದ ಕೆ.ಪಿ. ನಂಜುಂಡಿ, ಆರ್.ಶಂಕರ್, ಲೇಹನ್ ಸಿಂಗ್ ಸಿರಾಯಿ, ಎಸ್.ರವಿಕುಮಾರ್, ತೇಜಸ್ವಿನಿ ಗೌಡ, ಹನುಮಂತ ನಿರಾಣಿ, ಎಂ.ಚಿದಾನಂದ ಇಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದರು.

ಕಾಂಗ್ರೆಸ್‌ನ ಪಕ್ಷದಲ್ಲಿ ಓರ್ವ ಪಕ್ಷೇತರ ಸೇರಿ 22 ಸದಸ್ಯರು, ಒಬ್ಬ ಶಾಸಕ, ವಿಧಾನ ಪರಿಷತ್ತಿನ ನಾಲ್ವರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯೆ ಸೇರಿ ಒಟ್ಟು 28 ಮತಬಲ ಇತ್ತು. ಆದರೆ ಜೆಡಿಎಸ್ ಸದಸ್ಯ ಗೈರು ಹಾಜರಾಗಿದ್ದರು. ಮೂವರು ಎಂ.ಎಲ್.ಸಿ., ಶಾಸಕ ಸೇರಿ ಐವರ ಗೈರು ಹಾಗೂ ಓರ್ವ ಸದಸ್ಯನ ರಾಜೀನಾಮೆಯಿಂದಾಗಿ ಸಂಖ್ಯಾ ಬಲ 22ಕ್ಕೆ ಕುಸಿದಿತ್ತು.

ಮಹಾನಗರ ಪಾಲಿಕೆಯಲ್ಲಿ ಮತ ಚಲಾಯಿಸಲು ಅರ್ಹರಾದವರ ಸಂಖ್ಯೆ 58. ಗೆಲುವಿಗೆ ಬೇಕಾಗಿದ್ದು 29 ಮತಗಳು.  ಪಾಲಿಕೆಯ ಒಟ್ಟು ಸದಸ್ಯರು 45, ಕಳೆದ ವರ್ಷ ಓರ್ವ ಕಾಂಗ್ರೆಸ್ ಸದಸ್ಯರು  ಹಾಗೂ ನಿನ್ನೆ ರಾತ್ರಿ ಕಾಂಗ್ರೆಸ್ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದರಿಂದ ಸದಸ್ಯರ ಸಂಖ್ಯೆ 43ಕ್ಕೆ ಇಳಿದಿತ್ತು. ಪ್ರಸ್ತುತ 20 ಕಾಂಗ್ರೆಸ್, 17 ಬಿಜೆಪಿ ಹಾಗೂ 1 ಜೆಡಿಎಸ್, 5 ಪಕ್ಷೇತರರ ಸದಸ್ಯರು ಇದ್ದರು.

20 ಕಾಂಗ್ರೆಸ್ ಸದಸ್ಯರ ಜೊತೆ ಪಕ್ಷೇತರ ಅಭ್ಯರ್ಥಿ ಉದಯ್ ಕುಮಾರ್  ಹಾಗೂ  ಎಂ.ಎಲ್.ಸಿ. ಮೋಹನ್ ಕೊಂಡಜ್ಜಿ ಸೇರಿ ಕಾಂಗ್ರೆಸ್ 22 ಮತಗಳನ್ನು ಪಡೆದಿತ್ತು.

ಬಿಜೆಪಿ ತನ್ನ 17 ಸದಸ್ಯರೊಂದಿಗೆ 3 ಪಕ್ಷೇತರ ಸದಸ್ಯರ ಬೆಂಬಲ ಪಡೆದಿತ್ತು. ಇದರೊಟ್ಟಿಗೆ 7 ಜನ ಎಂ.ಎಲ್.ಸಿ.ಗಳು, ಓರ್ವ ಸಂಸದ, ಓರ್ವ ಶಾಸಕ ಸೇರಿ 29 ಜನರ ಬೆಂಬಲ ಪಡೆದಿತ್ತು.

ಬಿಜೆಪಿಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ,  ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಶಿಧರ್ ಹೆಮ್ಮನ ಬೇತೂರು, ಕಲ್ಲೇಶ್  ಇತರರು ಪಾಲಿಕೆ ಆವರಣದಲ್ಲಿದ್ದು, ನೂತನ ಮಹಾಪೌರರಿಗೆ ಶುಭಶಯ ಕೋರಿದರು.

error: Content is protected !!