ದೇಶ ಒಡೆ, ಅಭಿವೃದ್ಧಿಗೆ ತಡೆ: ಮೋದಿ ಕಿಡಿ

ದೇಶ ಒಡೆ, ಅಭಿವೃದ್ಧಿಗೆ ತಡೆ: ಮೋದಿ ಕಿಡಿ

ದಾವಣಗೆರೆ, ಏ. 28 – ಕರ್ನಾಟಕದಲ್ಲಿ ಮೊದಲ ಸುತ್ತಿನ ಚುನಾವಣೆಯ ನಂತರ, ಕಾಂಗ್ರೆಸ್‌ಗೆ ಖಾತೆ ತೆರೆಯುವ ವಿಶ್ವಾಸವೂ ಇಲ್ಲದಂತಾಗಿದೆ. ಈ ಬಾರಿ ಕರ್ನಾಟಕದಿಂದ ಒಂದು ಸೀಟಾದರೂ ದೊರೆತು, ಖಾತೆಯಾದರೂ ತೆರೆಯಲಿ ಎಂಬುದೇ ಅದರ ಚಿಂತೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನಗರದ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿ ದಿರುವ ಗಾಯತ್ರಿ ಸಿದ್ದೇಶ್ವರ ಹಾಗೂ ಹಾವೇರಿ ಲೋಕಸಭಾ  ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮತ ಯಾಚಿಸಲು ಸಮಾವೇಶ ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ಮೊದಲ ಸುತ್ತಿನ ಮತ ದಾನದ ನಂತರ ಕಾಂಗ್ರೆಸ್‌ನಲ್ಲಿ ಕೋಲಾಹಲವೇ ಉಂಟಾಗಿದೆ. ಬರುವ ಮೇ 7ರ ಎರಡನೇ ಸುತ್ತಿನಲ್ಲಾದರೂ ಒಂದು ಸೀಟು ಸಿಗಲಿ ಎಂಬ ಯೋಚನೆ ಕಾಂಗ್ರೆಸ್‌ನಲ್ಲಿದೆ. ದಾವಣಗೆರೆಯಲ್ಲಿ ಸೇರಿರುವ ಈ ಜನ ಸಮೂಹ ನೋಡಿದರೆ, ಕಾಂಗ್ರೆಸ್ ಪಕ್ಷದ ಪಾಪಕ್ಕೆ ಶಿಕ್ಷೆ ದೊರೆಯು ವುದು ಖಚಿತ ಎಂದು ಮೋದಿ ಹೇಳಿದರು.

ರಾಜ್ಯದೆಲ್ಲೆಡೆ ಈ ಬಾರಿ §ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಮಾತು ಪ್ರತಿಧ್ವನಿಸುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಜೂನ್ 4 ಇಡೀ ಕರ್ನಾಟಕಕ್ಕೆ ಸಂಭ್ರಮವಾಗಲಿದೆ. ದಾವಣಗೆರೆಯ ವಿಶೇಷವಾದ ಬೆಣ್ಣೆ ದೋಸೆಯೊಂದಿಗೆ ಫಲಿತಾಂಶ ಸವಿಯಲು ಇಂದಿನಿಂದಲೇ ಸಿದ್ಧತೆ ಆರಂಭಿಸಿ. ಬೆಣ್ಣೆ ದೋಸೆಯ ಸ್ವಾದ ಇನ್ನಷ್ಟು ಹೆಚ್ಚಾಗಲಿದೆ ಎಂದೂ ಅವರು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ದೇಶವನ್ನು ಮುನ್ನಡೆಸುತ್ತಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ತಳ್ಳುತ್ತಿದೆ. ವಿಕಸಿತ ಭಾರತಕ್ಕಾಗಿ 24 ಗಂಟೆಯೂ ಕೆಲಸ ಮಾಡಬೇಕು ಎಂಬುದು ಮೋದಿ ಮಂತ್ರವಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ದೇಶವನ್ನು ಒಡೆಯುವ, ಅಭಿವೃದ್ಧಿಯನ್ನು ತಡೆಯುವ ಕೆಲಸ ಮಾಡುತ್ತಿದೆ ಎಂದವವರು ಆರೋಪಿಸಿದರು.

ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವರು ಪರಸ್ಪರ ಕಾಲೆಳೆಯುವುದರಲ್ಲಿ ತೊಡಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಪರೋಕ್ಷವಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನವರಿಗೆ ಕರ್ನಾಟಕದ ಏಳಿಗೆಯ ಕೆಲಸಕ್ಕೆ ಪುರುಸೊತ್ತಿಲ್ಲ. ಗುಂಪುಗಾರಿಕೆ, ವಂಶಾಡಳಿತ ಹಾಗೂ ತಪ್ಪು ನೀತಿಗಳ ಮೂಲಕ ಕರ್ನಾಟಕದ ಕಾಂಗ್ರೆಸ್ ರಾಜ್ಯದ ಜನರ ಭವಿಷ್ಯದ ಜೊತೆ ಚಲ್ಲಾಟ ಆಡುತ್ತಿದೆ ಎಂದು ಟೀಕಿಸಿದರು.

ಕರ್ನಾಟಕದ ವಿಜ್ಞಾನಿ ಕೆ. ಕಸ್ತೂರಿ ರಂಗನ್ ನೇತೃತ್ವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಸಮಾಲೋಚನೆ ನಡೆಸಿ ನೂತನ ಶಿಕ್ಷಣ ನೀತಿ ರೂಪಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ವೋಟ್ ಬ್ಯಾಂಕ್ ರಾಜಕೀಯ ಖುಷಿ ಪಡಿಸಲು ಅದನ್ನೂ ರದ್ದು ಮಾಡಿದೆ. ಆ ಮೂಲಕ ಯುವ ಪೀಳಿಗೆಗೆ ಹೆಚ್ಚು ನಷ್ಟವಾಗಿದೆ. ರಾಜಕೀಯಕ್ಕಾಗಿ ಜನತೆಯ ಭವಿಷ್ಯ ಹಾಳುವ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದೂ ಮೋದಿ ಹೇಳಿದರು.

ದಶಕಗಳಿಂದ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಹಾಗೂ ಹಗರಣಗಳ ಹಾದಿಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದಿಂದ 1 ರೂ. ಕಳಿಸಿದರೆ, ಬಡವರಿಗೆ 15 ಪೈಸೆ ತಲುಪುತ್ತದೆ ಎಂದು ಕಾಂಗ್ರೆಸ್‌ನ ಆಗಿನ ಪ್ರಧಾನ ಮಂತ್ರಿ ಹೇಳಿದ್ದರು. ಬಡವರ 85 ಪೈಸೆ ಕಸಿಯುತ್ತಿದ್ದ §ಕೈ’ ಯಾವುದು? ಎಂದು ಮೋದಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

10 ಕೋಟಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ, ಅವರ ಹೆಸರಿನಲ್ಲಿ ಹಣ ಕಬಳಿಸಲಾಗುತ್ತಿತ್ತು. ಈ ಹಣ ಕಾಂಗ್ರೆಸ್ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿತ್ತು. ಇಂತಹ ನಕಲಿಗಳ ಸಂಖ್ಯೆ ಕರ್ನಾಟಕದ ಜನಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಆಧಾರ್ ಹಾಗೂ ಡಿ.ಬಿ.ಟಿ. ಜೋಡಣೆಯಿಂದಾಗಿ ಬಡವರಿಗೆ ಹಕ್ಕು ನೀಡಲಾಗಿದೆ. ಈಗ ಮೋದಿ ಕಳಿಸುವ ಪ್ರತಿ ರೂಪಾಯಿಯೂ ಬಡವರಿಗೆ ತಲುಪುತ್ತದೆ ಎಂದರು.

2014ಕ್ಕೆ ಮುಂಚೆ ಕರ್ನಾಟಕದಲ್ಲಿ ಕೇವಲ 15 ರಾಷ್ಟ್ರೀಯ ಹೆದ್ದಾರಿಗಳಿದ್ದವು. ಈಗ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 47ಕ್ಕೆ ತಲುಪಿದೆ. ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಿದೆ. ಹರಿಹರ ರೈಲ್ವೆ ನಿಲ್ದಾಣ ಉನ್ನತೀಕರಣವಾಗುತ್ತಿದೆ, ತುಮಕೂರು – ದಾವಣಗೆರೆ ನೇರ ಸಂಪರ್ಕ ಯೋಜನೆ ಜಾರಿಗೆ ಬರುತ್ತಿದೆ. ಎಸ್.ಟಿ.ಪಿ.ಐ. ಉಪ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದರು.

ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಜಿ.ಎಂ. ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದೆ ಸುಮಲತ ಅಂಬರೀಷ್, ಪರಿಷತ್ ಸದಸ್ಯ ನವೀನ್, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಬಿ.ಸಿ. ಪಾಟೀಲ್, ಹರಿಹರ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಹೆಚ್.ಪಿ. ರಾಜೇಶ್, ಬಸವರಾಜ ನಾಯ್ಕ, ಉಪ ಮೇಯರ್ ಯಶೋದ ಎಗ್ಗಪ್ಪ, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮುಖಂಡರಾದ ಅರುಣ್ ಕುಮಾರ್ ಪೂಜಾರ್, ರಾಜು ಕುರುಡಗಿ, ಚಿದಾನಂದಪ್ಪ, ಮಾಡಾಳ್ ಮಲ್ಲಿಕಾರ್ಜುನ್, ನಾಗರಾಜ್ ಲೋಕಿಕೆರೆ, ಬಿ.ಜಿ. ಅಜಯ್ ಕುಮಾರ್, ಆನಂದಪ್ಪ, ಡಾ. ಬಸವರಾಜ್ ಕೇಲಗಾರ್, ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಅನಿಲ್ ಮೆಣಸಿನಕಾಯಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!