ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು

ಪೋಷಕರಿಗೆ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು

ಹೊನ್ನಾಳಿ, ಮೇ 14 – ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯ್ಯಲ್ಲಿಯೇ ಇದ್ದು ಪೋಷ ಕರು ಜಾಗೃತೆಯಿಂದ ಮಕ್ಕಳ ಲಾಲನೆ-ಪೋಷಣೆ ಮಾಡಬೇಕು ಎಂದು ಹಿರೇಕ ಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪೋಷಕರಿಗೆ ಕಿವಿ ಮಾತು ಹೇಳಿದರು.

ಹಿರೇಕಲ್ಮಠದಲ್ಲಿ ಅಕ್ಷಯ ತೃತೀಯ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮಗು 6 ತಿಂಗಳಿದ್ದಾಗಿನಿಂದಲೇ ಪೋಷಕರು ಮಕ್ಕಳ ಕೈಯ್ಯಲ್ಲಿ ಮೊಬೈಲ್ ನೀಡುತ್ತಾ ಮಗುವನ್ನು ಮೊಬೈಲ್‍ಗೆ ದಾಸನಾಗುವಂತೆ ಮಾಡುತ್ತಾ ಮಗುವಿನ ಮೇಲೆ ದುಷ್ಪರಿಣಾಮವುಂಟಾಗಲು ಪೋಷಕರೇ ನೇರ ಕಾರಣರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತೀ ಅಮಾವಾಸ್ಯೆಯಂದು ಹಿರೇಕಲ್ಮಠದಲ್ಲಿ ಸಂಸ್ಕೃತಿ, ಸಂಸ್ಕಾರ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಕರೆ ತರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸಿ ಕೊಡಲಾಗುತ್ತಿದ್ದು, ಎಲ್ಲರೂ ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ಹಾಗೆಯೇ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಇಲ್ಲಿಯೇ ಆಚರಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಸಾಹಿತಿ ಯು.ಎನ್. ಸಂಗನಾಳಮಠ ಮಾತನಾಡಿ, ಬಸವಣ್ಣನವರು ವೀರಶೈವ ಧರ್ಮದ ಪುನರುದ್ಧಾರ ಮಾಡಿದಂತಹ ಮಹಾನ್ ವ್ಯಕ್ತಿಯೆಂದು ಬಣ್ಣಿಸಿದರು. ಕನ್ನಡವನ್ನು ಸಂವಹನ ಭಾಷೆಯನ್ನಾಗಿ ಮಾಡಿದ ಕೀರ್ತಿಯು ಬಸವಣ್ಣನವರಿಗೆ ಸಲ್ಲುತ್ತದೆ. 1913ರಲ್ಲಿಯೇ ದಾವಣಗೆರೆಯ ವಿರಕ್ತ ಮಠದಲ್ಲಿ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪನವರು ಬಸವಣ್ಣನ ಜಯಂತಿಯನ್ನು ಆಚರಿಸಿದ್ದರು ಎಂದು ಮಾಹಿತಿ ನೀಡಿದರು.

ಬಸವಾದಿ ಶರಣರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಮಾತ್ರವೇ ಬಸವ ಜಯಂತಿ ಸೇರಿದಂತೆ, ಇತರೆ, ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಣೆ ಮಾಡಿದ್ದಕ್ಕೂ ಸಾರ್ಥಕ್ಯ ಸಿಗಲಿದೆ ಎಂದು ಬಸವಣ್ಣನವರ ಜೀವನ ವೃತ್ತಾಂತವನ್ನು ವಿವರಿಸಿದರು.

ಚನ್ನೇಶ್ವರ ಗಾನ ಕಲಾ ಬಳಗ ಮತ್ತು ಸಂಸ್ಕೃತಿ-ಸಂಸ್ಕಾರ ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.

ಧಾರ್ಮಿಕ ಸಭೆಯಲ್ಲಿ ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ನಿಜಗುಣ ಶಾಸ್ತ್ರಿ, ಹರಳಹಳ್ಳಿ ಶೇಖರಪ್ಪ, ಕಡದಕಟ್ಟೆ ದಾನಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!