`ನಾನು ಆಯ್ಕೆ ಮಾಡಿಕೊಂಡದ್ದು ಜನಾದೇಶದ ಅಭಿಪ್ರಾಯ’

`ನಾನು ಆಯ್ಕೆ ಮಾಡಿಕೊಂಡದ್ದು ಜನಾದೇಶದ ಅಭಿಪ್ರಾಯ’

ಆಲೂರು ಗ್ರಾಮದಲ್ಲಿ ಮತ ಯಾಚಿಸಿದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್

ದಾವಣಗೆರೆ,ಏ.26- ಕಳೆದ 35ರಿಂದ 40 ವರ್ಷಗಳಿಂದ ಎರಡೂ ಕುಟುಂಬದವರನ್ನು ನೋಡಿದ್ದೇವೆ. ಅಭಿವೃದ್ಧಿ ಏನೂ ಮಾಡಿಲ್ಲ. ಹೊಸಬನಾಗಿರುವ ನೀನು ಬಂದಿದ್ದು ಹೊಸ ಆಶಾಕಿರಣ ಮೂಡಿತ್ತು ಎಂಬ ಭಾವನೆ ಜನರದ್ದಾಗಿತ್ತು.  ಹಾಗಾಗಿ ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಕಣಕ್ಕಿಳಿದಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮನವಿ ಮಾಡಿದರು.

ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಾನು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ್ದೆ. ಟಿಕೆಟ್ ಘೋಷಣೆಯಾಗುವ ಬೆಳಿಗ್ಗೆಯವರೆಗೆ ಶೇ. 99ರಷ್ಟು ನನಗೇ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಆದ್ರೆ, ಕೊನೆ ಗಳಿಗೆಯಲ್ಲಿ ಟಿಕೆಟ್ ತಪ್ಪಿತು ಎಂದರು. 

ಟಿಕೆಟ್ ಕೈ ತಪ್ಪಿದ ಮೇಲೆ ಒಂದು ವಾರವಾದರೂ ಪಕ್ಷದ ಮುಖಂಡರಾಗಲೀ, ಕಾರ್ಯಕರ್ತರಾಗಲೀ ಬರಲಿಲ್ಲ. ಆಗ ನಾನು ಜನರ ಅಭಿಪ್ರಾಯ ಕೇಳಲು ಮತ್ತೆ ಹಳ್ಳಿಗಳಿಗೆ ಭೇಟಿ ನೀಡಿದೆ. ಸುಮಾರು 200 ಹಳ್ಳಿಗಳಲ್ಲಿ ಎಲ್ಲಾ ವರ್ಗದ ಜನರನ್ನು ಕೇಳಿದೆ. ಅವರು ಸ್ಪರ್ಧಿಸಿ ಎಂದಿದ್ದಕ್ಕೆ ಕಣಕ್ಕಿಳಿದಿದ್ದೇನೆ. ಈ ಬಾರಿ ನನ್ನನ್ನು ಗೆಲ್ಲಿಸಿ, ಸ್ವಾಭಿಮಾನ ಉಳಿಸಿ ಎಂದರು.

ನಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಬಳಿಕ ತುಂಬಾನೇ ಒತ್ತಡ ಬಂತು. ಮುಖ್ಯಮಂತ್ರಿ ಅವರೂ ಸೇರಿದಂತೆ ತುಂಬಾನೇ ಜನರಿಂದ ಹಿಂದೆ ಸರಿಯುವಂತೆ ಒತ್ತಡ ಬಂತು. ಹೊಸಬರಿಗೆ ಎಂಪಿ ಅವಕಾಶ ಸಿಕ್ಕಿಲ್ಲ. ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ. ಹಾಗಾಗಿ ಆರು ಬಾರಿ ಬಿಜೆಪಿ ಗೆದ್ದಿದೆ. ಈ ಬಾರಿ ನನಗೆ ಟಿಕೆಟ್ ನೀಡಿದ್ದರೆ, ಕನಿಷ್ಠ ಎಂದರೂ ಒಂದೂವರೆಯಿಂದ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದೆ ಎಂದು ತಿಳಿಸಿದರು. 

ನಮ್ಮಂಥವರಿಗೆ ಹೋರಾಟ ಅನಿವಾರ್ಯ. ರಾಜಕಾರಣದಲ್ಲಿ ನಾಯಕರ ಹಿಂದೆ ಸುತ್ತುತ್ತಿರಬೇಕು. ಅವರು ಯಾವಾಗ ಅವಕಾಶ ಕೊಡುತ್ತಾರೋ ಅಲ್ಲಿಯವರೆಗೆ ಕಾಯಬೇಕು. 

ಇಲ್ಲ ಎಂದರೆ ಜನರ ಮಧ್ಯೆ ಇದ್ದು ಸಂಪರ್ಕ ಬೆಳೆಸಿ ಕಷ್ಟ ಸುಖದಲ್ಲಿ ಭಾಗಿಯಾಗಿ ನಿಧಾನವಾಗಿಯಾದರೂ ಜನರು ಕೈಹಿಡಿಯುತ್ತಾರೆಂದುಕೊಂಡು ಮುಂದುವರೆಯಬೇಕು. ನಾನು ಆಯ್ಕೆ ಮಾಡಿಕೊಂಡಿದ್ದು ಜನಾದೇಶದ ಅಭಿಪ್ರಾಯ ಎಂದು ವಿನಯ್ ಕುಮಾರ್ ಹೇಳಿದರು.

error: Content is protected !!