ಹರಿಹರ : ಮನೆಗೊಂದು ಮರ ನೆಟ್ಟು ಪರಿಸರ ರಕ್ಷಣೆ

ಹರಿಹರ : ಮನೆಗೊಂದು ಮರ ನೆಟ್ಟು ಪರಿಸರ ರಕ್ಷಣೆ

6 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ  ಶಾಸಕ ಬಿ.ಪಿ. ಹರೀಶ್

ಹರಿಹರ, ಜೂ. 5 – `ಮನೆಗೊಂದು ಮರ, ಊರಿಗೊಂದು ವನ’ ಎಂಬಂತೆ, ಸರ್ವರೂ ಮನೆಗೊಂದು ಮರ ನೆಟ್ಟು ಬೆಳೆಸುವುದರೊಂದಿಗೆ, ಪರಿಸರ ಉಳಿಸಿ, ಬೆಳೆಸಬೇಕೆಂದು ಶಾಸಕ ಬಿ.ಪಿ. ಹರೀಶ್ ಕರೆ ನೀಡಿದರು.

ಜಿಲ್ಲಾ ಪಂಚಾಯ್ತಿ ಹಾಗೂ ನಗರಸಭೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಸಾಮಾಜಿಕ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ಸುಮಾರು 6 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರುವ ಅನೇಕ ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಅನಿವಾರ್ಯವಾಗಿ ಒಂದು ಮರ ಕಡಿದರೆ, 10 ಸಸಿಗಳನ್ನು ನೆಡಲಾಗುತ್ತದೆ. ಹೀಗಾದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಶಾಸಕ ಹರೀಶ್ ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಕೈಗಾರಿಕೆಗಳು ಹೊರಸೂಸುವ ವಿಷಾನಿಲ ಗಾಳಿಯಲ್ಲಿ ಮಿಶ್ರಣಗೊಳ್ಳುವುದರಿಂದ ಬಿಸಿಲು ಹೆಚ್ಚಾಗಿ ಪರಿಸರ ಹಾಳಾಗಿದೆ. ಪರಿಸರ ರಕ್ಷಿಸಲು ಹೆಚ್ಚು-ಹೆಚ್ಚು ಗಿಡ, ಮರಗಳನ್ನು ಬೆಳೆಸಬೇಕು ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಜಿಲ್ಲಾ ಪ್ರಾದೇಶಿಕ ನಿರ್ದೇಶಕಿ ಬಿ. ಗೀತಾ ಮಾತನಾಡಿ, ಶ್ರೀಕ್ಷೇತ್ರ ಯೊಜನೆಯಿಂದ ರಾಜ್ಯದ 460 ಕೆರೆಗಳಲ್ಲಿನ ಹೂಳು ತೆಗೆಯುವ ಜೊತೆಗೆ ಕೆರೆ ಅಂಗಳದಲ್ಲಿ ಸಸಿಗಳನ್ನು ನೆಡಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಶಾಹಿನಾ ದಾದಾಪೀರ್, ತಹಶೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯಾಧಿಕಾರಿ ಶ್ವೇತಾ, ಪೌರಾಯುಕ್ತ ಬಸವರಾಜ್ ಐಗೂರು, ಹಿರಿಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಹೆಚ್.ಪಿ ಬಸವರಾಜ್ ಕಾರ್ಯಕ್ರಮ ಕುರಿತು ಮಾತನಾಡಿದರು.

ಯೋಜನಾಧಿಕಾರಿ ಗಣಪತಿ ಮಾಳಂಜಿ ನೇತೃತ್ವದಲ್ಲಿ ನಗರದ ಮಹಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದಿಂದ ಬಿಇಓ ಕಛೇರಿವರೆಗೆ ಪ್ರಮುಖ ಬೀದಿಗಳಲ್ಲಿ ನಗರದ ವಿವಿಧ ಶಾಲೆಗಳ ಮಕ್ಕಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಪರಿಸರ ಜಾಗೃತಿ ಜಾಥಾ ನಡೆಸಿದರು.

ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ರಾಮಕೃಷ್ಣ, ಕೆಂಚನಹಳ್ಳಿ ಮಹಾಂತೇಶಪ್ಪ, ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ಎಂ.ಆರ್ ಮುಜಾಮಿಲ್ ಬಿಲ್ಲು, ಅಮರಾವತಿ ವಿಜಯಕುಮಾರ್, ಆಟೋ ಹನುಮಂತಪ್ಪ ಉಪಸ್ಥಿತರಿದ್ದರು.

error: Content is protected !!