ಖಾಸಗಿ ಶಿಕ್ಷಣ ಸಂಸ್ಥೆ, ಶಿಕ್ಷಕರ ಸ್ಥಿತಿ ಮಳೆಯಲ್ಲಿರುವ ಗಾಳಿಪಟ …

ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯನ್ನು ನಮ್ಮ ದೇಶದಲ್ಲಿ ತಂದವರು ಕ್ರೈಸ್ತ ಮಿಷನರಿಗಳು ಎಂಬುದನ್ನ ನಾವು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಅದರಂತೆ ಹಳ್ಳಿಹಳ್ಳಿಗಳಲ್ಲಿ ಪಟ್ಟಣ ಪ್ರದೇಶದಲ್ಲಿಯೂ ಸಹ ಉತ್ತಮ ಶಿಕ್ಷಣ, ಶಿಕ್ಷಣದ ಪ್ರೇರಣೆಗೆ ಖಾಸಗಿ ಶಾಲೆಗಳು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಹಾಗಾಗಿಯೇ ಸರ್ಕಾರಕ್ಕೆ ಸರ್ಕಾರಿ ಶಾಲೆಗಳು ಎಂದರೆ ಗಂಡು ಮಕ್ಕಳಿದ್ದ ಹಾಗೆ  ಖಾಸಗಿ ಶಾಲೆಗಳು  ಹೆಣ್ಣು ಮಕ್ಕಳು ಇದ್ದಹಾಗೆ ಎಂಬುದರಲ್ಲಿ ಎರಡು ಮಾತಿಲ್ಲ.

ಅನುದಾನರಹಿತ ಖಾಸಗಿ ಶಾಲೆಗಳು, ಆಡಳಿತ ವರ್ಗ ಮತ್ತು ಶಿಕ್ಷಕರಿಗೆ ಮೇ, ಜೂನ್ ಮುಗಿದು ಜುಲೈ ಬಂದರೂ ಯಾವುದೇ ಭರವಸೆಯ ಬೆಳಕಿನ ಕಿರಣ ಗೋಚರಿಸದೇ ಇರುವುದು ವಿಷಾದಕರ ಸ್ಥಿತಿ. ಮುಂದಿನ ಜೀವನದ ನಿರ್ವಹಣೆಗೆ ಯಾವ ಮಾರ್ಗ ಸೂಚಿ ತೋರದೇ ಇರುವುದು ವಿಷಾದಕರ. 

ಸರ್ಕಾರದ ಹೇಳಿಕೆಗಳಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಯವರ ಜೊತೆಗೆ ಶಿಕ್ಷಕರ ಸ್ಥಿತಿ ಮಳೆಯಲ್ಲಿಯ ಗಾಳಿಪಟದಂತಾಗಿರುವುದಂತೂ ಸತ್ಯ. ಖಾಸಗಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಮತ್ತು ಉದ್ಯೋಗಕ್ಕೂ ಸೈ ಎನ್ನುವ ಸರ್ಕಾರವು, ಖಾಸಗಿ ಸಂಸ್ಥೆಗಳಿಗೆ ಮತ್ತು ಶಿಕ್ಷಕರಿಗೆ ಈ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಕೊಡುವ ಜವಾಬ್ದಾರಿ ಕೆಲಸಕ್ಕೆ ಕೈ ಹಾಕಲೇಬೇಕು. 

ಖಾಸಗಿ ಶಿಕ್ಷಕರು ಮೊದಲೇ ಕಡಿಮೆ ವೇತನದಲ್ಲಿ  ಸೇವೆ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಎಲ್ಲೋ ಒಂದೆರಡು ಪ್ರಬುದ್ದ ಶಿಕ್ಷಣ ಸಂಸ್ಥೆಗಳು ಪರವಾಗಿಲ್ಲ ಎಂಬಂತಹ ವೇತನ ನೀಡಬಹುದು.  ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಕರ ಪರಿಸ್ಥಿತಿ ಊಹಿಸಲಸಾಧ್ಯ.  

ಸರ್ಕಾರದ ಶಿಕ್ಷಣ ಇಲಾಖೆಯ ಅನುಮತಿ ಪಡೆದು ಬಾಡಿಗೆ ರೂಪದಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ ಗ್ರಾಮೀಣ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ, ಸಿಬ್ಬಂದಿಗೆ ವೇತನ,  ಶಾಲಾ ವಾಹನದ ಬಂಡವಾಳ, ಇನ್ಸೂರೆನ್ಸ್ ,ಟ್ಯಾಕ್ಸ್ , ಡ್ರೈವರ್ ಗಳ ವೇತನ, ನಿರ್ವಹಣೆ, ಶಾಲಾ ವಾಹನದ ಲೋನ್ ಕಂತು ಅದಲ್ಲದೇ ವಿದ್ಯಾರ್ಥಿಗಳ ಹಿಂದಿನ ಸಾಲಿನ (ವರ್ಷದ) ಶಾಲೆಯ ಫೀಜ್ ಕಟ್ಟದೇ ದಿನ ನೂಕುತ್ತಾ ಬಂದಿರುವ ಸಮಸ್ಯೆ (ಆರ್ಥಿಕ ಸಂಕಷ್ಟದಲ್ಲಿರುವ ಎಷ್ಟು ಪೋಷಕರು ಕಳೆದ ಸಾಲಿನಲ್ಲಿ ಸಹ ಇನ್ನೂ ಕಟ್ಟದ ಸ್ಥಿತಿ) ಇನ್ನೂ ಹಲವಾರು ಅಗೋಚರ ಕಷ್ಟಗಳ ಸರಮಾಲೆಯಲ್ಲಿದ್ದಾರೆ.

ಇಂತಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರಿಗೆ  ಸರ್ಕಾರ ಹಗ್ಗವಾಗದಿದ್ದರೂ ಪರವಾಗಿಲ್ಲ ಸ್ವಲ್ಪ ನೂಲಿನ ದಾರವಾದರೂ ಸಾಕು.  ಎರಡು ಮೂರು ತಿಂಗಳು ಉಯ್ಯಾಲೆ ಆಡಬಹುದು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ.

ತಾಲ್ಲೂಕು ಜಿಲ್ಲಾ ಮತ್ತು ರಾಜ್ಯ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ತಜ್ಞರು ಖಾಸಗಿ ಶಿಕ್ಷಣ ಸಂಸ್ಥೆ ಅವರೊಂದಿಗೆ, ಶಿಕ್ಷಕರೊಂ ದಿಗೆ ಚರ್ಚಿಸಿ ಸಮಾಲೋಚಿಸಿ ಸರ್ಕಾರಕ್ಕೆ ವರದಿ ನೀಡಬೇಕಿದೆ.


ಕೆ.ಸಿರಾಜ್ ಅಹಮ್ಮದ್ 
ಜಿಲ್ಲಾ ಕ.ಸಾ.ಪ.ಸಂಚಾಲಕರು, ಸಂತೇಬೆನ್ನೂರು.
[email protected]

error: Content is protected !!