ಏನಾದರೂ ಆಗು ಮೊದಲು ಮಾನವನಾಗು…

ನಮ್ಮ ನೆರೆಯ ತಮಿಳುನಾಡು ರಾಜ್ಯದ ಒಂದು ಊರಿನಲ್ಲಿ ಇಡೀ ಮನುಕುಲವೇ ತಲೆತಗ್ಗಿಸುವಂತಹ ಮನಕಲಕುವ ಒಂದು ಘಟನೆ ನಡೆದಿದೆ. ಹೆಸರಾಂತ ವೈದ್ಯರೊಬ್ಬರು “ಕೊರೊನಾ” ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ದುರದೃಷ್ಟವಶಾತ್ ಸೋಂಕು ಉಂಟಾಗಿ, ನಂತರ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದು ವಿಷಾದನೀಯ. ಈ `ಕೊರೊನಾ ಯೋಧ’ ಹೆಸರಾಂತ ವೈದ್ಯರ ಮೃತದೇಹಕ್ಕೆ ಯಾವ ಗೌರವವೂ ದೊರೆಯದೆ ಅಂತ್ಯ ಸಂಸ್ಕಾರ ಮಾಡಲು ಅತ್ಯಂತ ಹರಸಾಹಸ ಪಟ್ಟ ನೈಜ ಕಹಿ ಘಟನೆಯೊಂದನ್ನು ತಿಳಿಸಬಯಸುತ್ತೇನೆ.

ನಮ್ಮ ಭಾರತ ದೇಶ ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ ಜನಿಸಿದ ಪುಣ್ಯ ಭೂಮಿ ಎಂಬುದು ಹೆಮ್ಮೆಯ ಸಂಗತಿ. ದಿನಾಂಕ 19-4-2020 ರಂದು ಭಾನುವಾರ ರಾತ್ರಿ ಸುಮಾರು ಒಂಭತ್ತು ಗಂಟೆಯ ಸಮಯ. ಇನ್ನೇನು ಕೆಲವೇ ನಿಮಿಷಗಳಲ್ಲಿ ಆ ಶವ ಸ್ಮಶಾನವನ್ನು ತಲುಪಬೇಕು. ಅದನ್ನು ಹೊತ್ತ ಆಂಬ್ಯುಲೆನ್ಸ್ ಆಸ್ಪತ್ರೆಯಿಂದ ಹೊರಟೇ ಬಿಟ್ಟಿತ್ತು. ಆದರೆ ಅದೇ ಹೊತ್ತಿಗೆ ಒಂದು ಆಘಾತಕಾರಿ ಮಾಹಿತಿ ಅವರಿಗೆ ಲಭಿಸಿತ್ತು. ಆ ಸ್ಮಶಾನದ ಸುತ್ತ ಜನ ಸೇರಿದ್ದಾರೆ. ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದಿದ್ದಾರೆ. ಏನೇ ಆದರೂ ಶವ ಸ್ಮಶಾನಕ್ಕೆ ಬರಲು ಬಿಡುವುದಿಲ್ಲವಂತೆ ! ಆ ಊರಿನ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ  ಎಂಬ ಸುದ್ದಿ ತಿಳಿದು ಆಂಬ್ಯುಲೆನ್ಸ್‌ನಲ್ಲಿ ಹೊರಟವರ ಜಂಘಾಬಲವೇ ಉಡುಗಿ ಹೋಯಿತು. `ಕೊರೊನಾ ವೈರಸ್’ ನಿಂದ ಮೃತ ವೈದ್ಯರ ಶವ ಅಂತಿಮ ಸಂಸ್ಕಾರಕ್ಕಾಗಿ ಈ ಸ್ಮಶಾನಕ್ಕೆ ಬರಲಿದೆ ಎನ್ನುವ ಸುದ್ದಿ ಆ ಊರಿನವರಿಗೆ ಆಗಲೇ ತಲುಪಿತ್ತು. ಶವ ಇಲ್ಲಿ ಹೂತು ಹಾಕಿದರೆ ಇಡೀ ಊರಿಗೆಲ್ಲಾ `ಕೊರೊನಾ’ ಹಬ್ಬಲಿದೆ ಎಂಬ ಆವ್ಯಕ್ತ ಭಯ ಅವರನ್ನು ಆವರಿಸಿಕೊಂಡಿತ್ತು. ಅದು ಕ್ಷಣಾರ್ಧದಲ್ಲಿ ಇಡೀ ಊರಿಗೆಲ್ಲಾ ವ್ಯಾಪಿಸಿತು. ರಾತ್ರಿ ಆ ಹೊತ್ತಿನಲ್ಲೂ ನೂರಾರು ಜನ ಜಮಾಯಿಸಿಬಿಟ್ಟರು. ದಾಳಿ ಮಾಡಲು ಸಿದ್ಧತೆ ಮಾಡಿ ಕೊಂಡಿದ್ದರು. ಊರಿಗೆ ಬರುವ ಮಾರಿಯನ್ನು ತಡೆದೇ ತಡೆಯುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡಿದ್ದರು‌. ಇಂತಹ ಅಪಾಯವನ್ನು ಅರಿತ ಆಂಬ್ಯುಲೆನ್ಸ್  ತಕ್ಷಣ ಮಾರ್ಗ ಬದಲಿಸಿತು. ತಮಿಳು ನಾಡಿನ ಕಿಲಪೌಕ್‌ನ ಟಿ.ಬಿ. ಛತ್ರಂ ಕಡೆ ಹೊರಟಿದ್ದ ಅದು ವೆಲಂಗಾಡು ಸ್ಮಶಾನದತ್ತ ತಿರುಗಿತು. ಅಲ್ಲಿಗೆ ಜೆಸಿಬಿಯನ್ನು ಕರೆಸಿ ಶವ ಹೂಳಲು ಸುಮಾರು ಆರು ಅಡಿ ಗುಂಡಿಯನ್ನು ತೋಡಲಾಗಿತ್ತು. ಶವವನ್ನು ಕೆಳಕ್ಕಿಳಿಸಿ ಅಂತಿಮ ಸಂಸ್ಕಾರ ಮಾಡಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡರು. ಅಲ್ಲಿ ವೈದ್ಯರು, ನರ್ಸ್‌ಗಳು ಸ್ಯಾನಿಟೈಸ್ ಮಾಡುವ ಸಿಬ್ಬಂದಿಗಳು ಕೆಲವು ಕುಟುಂಬದ ಸದಸ್ಯರು ಎಲ್ಲರೂ ಇದ್ದರು. ಆದರೆ ಅಲ್ಲಿಯೂ ಇದ್ದಕ್ಕಿದ್ದಂತೆ 50-60 ಜನರ ಗುಂಪು ಸ್ಮಶಾನದತ್ತ ಬರುತ್ತಿರುವುದು ಕಾಣಿಸಿಕೊಂಡಿತು. ಅವರ ಕೈಯ್ಯಲ್ಲಿ ದೊಣ್ಣೆ, ಕಲ್ಲು, ಇಟ್ಟಿಗೆ, ಬಾಟಲಿಗಳು ಇದ್ದವು. ಬಂದವರೇ ಒಮ್ಮೆಲೇ ಮನಸ್ಸಿಗೆ ತೋಚಿದಂತೆ ದೊಣ್ಣೆ, ಕಲ್ಲು, ಬಾಟಲಿಗಳಿಂದ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸಿದರು. ಸಿಕ್ಕ ಸಿಕ್ಕಂತೆ ಕಲ್ಲುಗಳನ್ನು ತೂರಾಡ ತೊಡಗಿದರು. ಆಂಬ್ಯುಲೆನ್ಸ್ ಗಾಜು ಪುಡಿ ಪುಡಿಯಾದವು. ಡ್ರೈವರ್‌ನನ್ನು ತುಂಬಾ ಥಳಿಸಿದರು. ದೊಣ್ಣೆಗಳಿಂದ ತಲೆಗೆ ಹೊಡೆದರು. ಡಾಕ್ಟರ್, ನರ್ಸ್, ನಗರ ಪಾಲಿಕೆ ಸಿಬ್ಬಂದಿಗಳು ಯಾರನ್ನೂ ಅವರು ಬಿಡಲಿಲ್ಲ. ಕೈಗೆ ಸಿಕ್ಕವರನ್ನು ಮುಗಿಸಿಯೇ ಬಿಡುವಷ್ಟು ಜನ‌ ಕೋಪೋದ್ರಿಕರಾಗಿದ್ದರು. ಶವದ ಪೆಟ್ಟಿಗೆಯನ್ನೂ ಹಿಡಿದು ಎಳೆದಾಡಿದರು. ದಯವಿಟ್ಟು ಹೊಡೆಯಬೇಡಿ ಎಂಬ ವೈದ್ಯರ ಆರ್ತನಾದವನ್ನು ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಆ ಜನರಿಂದ ತಪ್ಪಿಸಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಶವವನ್ನು ಅಲ್ಲಿಯೇ ಬಿಟ್ಟು ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಜೀವ ಉಳಿಯಲು ಅಲ್ಲಿಂದ ಕಾಲ್ಕಿತ್ತಿದ್ದರೆ ಸಾಕಿತ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಅಲ್ಲಿದ್ದ ಕಿರಿಯ ವೈದ್ಯ ಡಾ.ಪ್ರದೀಪ್ ಕುಮಾರ್ ಧೈರ್ಯಗುಂದಲಿಲ್ಲ. ತಲೆಯ ತುಂಬಾ ರಕ್ತ ಧಾರಾಕಾರವಾಗಿ ಸುರಿಯುತ್ತಿದ್ದರೂ ಇಬ್ಬರು ಆಂಬ್ಯುಲೆನ್ಸ್ ಡ್ರೈವರ್ ಜೊತೆ ಸೇರಿ ಹಾಗೂ ಹೀಗೂ ಶವವನ್ನು ಮತ್ತೆ ಆಂಬ್ಯುಲೆನ್ಸ್‌ನೊಳಗೆ ಹಾಕುವಲ್ಲಿ ಸಫಲರಾದರು. ಕೊನೆಗೆ ಅಷ್ಟೂ ಜನರ ದಾಳಿಯನ್ನು ತಪ್ಪಿಸಿಕೊಂಡು ಅಲ್ಲಿಂದ ಪಾರಾಗಿ ಹೊರ ಬಂದರು.

ಆದರೆ ಆಂಬ್ಯುಲೆನ್ಸ್ ಚಾಲಕರು ತೀವ್ರವಾಗಿ ಗಾಯಗೊಂಡಿದ್ದರು. ತಲೆಯಲ್ಲಿ ರಕ್ತ ನಿರಂತರವಾಗಿ ಸುರಿಯುತ್ತಲೇ ಇತ್ತು. ಅವರು ಯಾವುದೇ ಸಮಯದಲ್ಲಿ ಕುಸಿದು ಬೀಳುವುದು ನಿಶ್ಚಿತವಾಗಿತ್ತು. ಹಾಗಾಗಿ ಆಂಬ್ಯುಲೆನ್ಸನ್ನು ಡಾ. ಪ್ರದೀಪ್ ಕುಮಾರ್ ಅವರೇ ಡ್ರೈವ್ ಮಾಡಿಕೊಂಡು ಹೋದರು. ಮಾರ್ಗ ಮಧ್ಯೆ ಚಾಲಕರನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಸೇರಿಸಲಾಯಿತು. 

ಕೊನೆಗೆ ಉಳಿದಿದ್ದು ಡಾ.ಪ್ರದೀಪ್ ಕುಮಾರ್ ಮಾತ್ರ. ಆ ರಾತ್ರಿಯೇ ಹೇಗಾದರೂ ಮಾಡಿ ಮೃತ ವೈದ್ಯರ ಅಂತಿಮ ಸಂಸ್ಕಾರವನ್ನು ಮುಗಿಸಲೇಬೇಕಿತ್ತು .ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ರಾಜ್ಯದ ಆರೋಗ್ಯ ಸಚಿವಾಲಯದ ಸಂಪರ್ಕವನ್ನು ಬಳಸಿಕೊಂಡು ಪೊಲೀಸ್ ಭದ್ರತೆಯೊಂದಿಗೆ ಮತ್ತೊಂದು ಸ್ಮಶಾನಕ್ಕೆ ಮರಳಿದರು. ಆ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ದಾಟಿತ್ತು. ಕೊರೊನಾ ವೈರಸ್ ನಿಂದ  ಸತ್ತವರ ಶವವನ್ನು ಹನ್ನೆರಡು ಅಡಿ ಗುಂಡಿಯಲ್ಲಿ (“ಡೀಪ್ ಬರಿಯಲ್”) ಮಾಡಬೇಕು ಎಂಬ ನಿಯಮವಿದೆ. ಆ ತಡರಾತ್ರಿಯಲ್ಲಿ ಇದ್ದ ಜನರ ಸಹಾಯದಲ್ಲಿಯೇ ಗುಂಡಿಯನ್ನು ತೋಡುವ ಸಾಹಸ ಮಾಡಲಾಯಿತು. ಡಾಕ್ಟರ್, ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಎಲ್ಲರೂ ಸೇರಿ, ಇದ್ದ ಒಂದೇ ಒಂದು ಹಾರೆ ಸಲಿಕೆ ಹಿಡಿದು ಕಷ್ಟಪಟ್ಟು ಗುಂಡಿ ತೋಡಿದರು. ಆ ಸಂದರ್ಭದಲ್ಲಿ ನಿಜಕ್ಕೂ ಭಯದ ವಾತಾವರಣ. ಕಾವಲು ನಿಂತಿದ್ದ ಪೊಲೀಸರಿಗೂ ಜನ ಮತ್ತೆ ದಾಳಿ ಮಾಡಬಹುದು ಎಂಬ ಭಯ – ಆತಂಕ ಕಾಡುತ್ತಿತ್ತು. ಕಷ್ಟಪಟ್ಟು ತೆಗೆದ ಹತ್ತು ಅಡಿ ಗುಂಡಿಯೊಳಗೆ ಶವವನ್ನಿಟ್ಟು ಬರಿಗೈಗಳಿಂದಲೇ ಎಲ್ಲರೂ ಸೇರಿ ಮಣ್ಣನ್ನು ಗುಂಡಿಯೊಳಕ್ಕೆ ಹಾಕಿ ಮುಚ್ಚಿದರು. ಅಲ್ಲಿ ಕುಟುಂಬಸ್ಥರು, ಬಂಧು ಬಳಗ, ಗೆಳೆಯರು ಯಾರೂ ಇಲ್ಲ. ಒಂದು ಗಂಟೆಗೂ ಹೆಚ್ಚು ಕಾಲ ಈ ಕೆಲಸ ಮಾಡಿದರು. ಎಲ್ಲ ಕೆಲಸ ಮುಗಿದಾಗ ರಾತ್ರಿ ಗಂಟೆ 1.30 ದಾಟಿ ಹೋಗಿತ್ತು. ಆದರೆ ಸಹೋದ್ಯೋಗಿ ಡಾ.ಪ್ರದೀಪ್ ಕುಮಾರ್ ಹೃದಯ ಚೂರು ಚೂರಾಗಿ ಹೋಗಿತ್ತು. ಗುಂಡಿಯಲ್ಲಿ ಅವರ ಶವವನ್ನಿಟ್ಟು ಇದೇ ಕೈಗಳಿಂದ ಮಣ್ಣು ಮಾಡಿಬಿಟ್ಟೆ, ಎಂದು ಅವರು ನನ್ನ ಪಾಲಿನ ಆತ್ಮೀಯ ಗೆಳೆಯರಾಗಿದ್ದರು. ಅವರು ಸಾಮಾನ್ಯ ಮನುಷ್ಯರಲ್ಲ. ತಮಿಳುನಾಡಿನ ನ್ಯೂ ಹೋಪ್ ಆಸ್ಪತ್ರೆಯ  ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಖ್ಯಾತ ನ್ಯೂರೋ ಸರ್ಜನ್ ಆಗಿದ್ದರು. ಸದಾ ಜನರ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಬಡ ರೋಗಿಗಳೆಂದರೆ ಯಾವತ್ತೂ ಅವರ ಅಂತಃಕರಣ ಮಿಡಿಯುತ್ತಿತ್ತು. ಎಷ್ಟೋ ಜನರಿಗೆ ಅವರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನೂ ಕೊಟ್ಟಿದ್ದರು. ಅವರೆಂದರೆ ಜನರಿಗೆ ಎಲ್ಲಿಲ್ಲದ ಪ್ರೀತಿ, ಗೌರವ, ಅಭಿಮಾನ ಇತ್ತು. ಆದರೆ ಎಂತಹ ವಿಚಿತ್ರ ಸಾವು ನೋಡಿ! ನಮಗೆ ಇಂತಹ ಬದುಕು ಕೊಟ್ಟ ಅವರನ್ನು ನಾವು ಗೌರವದಿಂದ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಅವರಿಗೆ ನಿಜಕ್ಕೂ ಇಂತಹ ಅಂತ್ಯ ಬರಬಾರದಿತ್ತು! ನಮ್ಮ ಶತ್ರುವಿಗೂ ಇಂತಹ ಸಾವು ಬೇಡ. ನಿಜಕ್ಕೂ ಎಲ್ಲರೂ ತಲೆತಗ್ಗಿಸಲೇಬೇಕು ಎನ್ನುವ ಡಾ.ಪ್ರದೀಪ್ ಕುಮಾರ್ ಅವರು ಅಸಾಧ್ಯವಾದ ಸಂಕಟ ತಾಳಲಾರದೆ ಕಣ್ಣೀರಿಟ್ಟರು. ತನಗೆ ಜೀವನದಲ್ಲಿ  ಹೀರೋ ಆಗಿದ್ದ, ಬಾಸ್ ಆಗಿದ್ದ ವ್ಯಕ್ತಿಯನ್ನು  ಹೀಗೆ ಹೀನ ಸ್ಥಿತಿಯಲ್ಲಿ ಕಳುಹಿಸಿ ಕೊಟ್ಟೆವಲ್ಲಾ ಎಂಬ ಮಾನಸಿಕ ಕೊರಗು ಅವರಲ್ಲಿ ಕಾಡುತ್ತಿತ್ತು. ಅಂತಹ ಸಾವು ಅವರಿಗೆ ಬರಬಾರದಿತ್ತು! ಈ ರೀತಿಯ “ಸಾವು ನ್ಯಾಯವೇ” ಎಂಬುದನ್ನು `ಕೊರೊನಾ’ ಎಂಬ ಪುಟ್ಟ ವೈರಸ್ ಒಂದು ಸಾಬೀತು ಮಾಡಿಬಿಟ್ಟಿದೆ.

ತಮಿಳುನಾಡಿನ ಕಿಲ್ಪಾಕ್ ಬಳಿ ತಾವೇ ಕಟ್ಟಿಸಿದ್ಧ “ನ್ಯೂ ಹೋಪ್ ಮೆಡಿಕಲ್ ಸೆಂಟರ್” ನಲ್ಲಿ  ಡಾ. ಸೈಮನ್ ಹರ್ಕ್ಯುಲಸ್ (55) ಇವರು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಇವರು ತಮ್ಮ ಜೀವಮಾನದ ಉದ್ದಕ್ಕೂ ಹಲವಾರು ಜನರನ್ನು ಸಾವಿನ ಮನೆಯಿಂದ ಈಚೆಗೆ ತಂದು ನಿಲ್ಲಿಸಿದ್ದಾರೆ. ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದರು. ಕೊರೊನಾ ರೋಗಿಗಳು ಬಂದು ಆಸ್ಪತ್ರೆಗೆ ಸೇರುತ್ತಿದ್ದಾಗ ಅದರ ಚಿಕಿತ್ಸಾ ಜವಬ್ದಾರಿಯನ್ನು ಕಿರಿಯ ವೈದ್ಯರಿಗೆ ಒಪ್ಪಿಸಿ ಅವರು ಹವಾನಿಯಂತ್ರಿತ ಕೋಣೆಯಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದಾಗಿತ್ತು. ಆದರೆ ಡಾ. ಸಿಮೋನ್ ಹರ್ಕ್ಯುಲಸ್ ಸ್ವತಃ ತಾವೇ ಜನರ ಸೇವೆಗೆ ಇಳಿದರು. ಹಾಗೆ ಮಾಡುತ್ತಲೇ ವೈರಸ್‌ಗಳನ್ನು ತಾವೇ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಸ್ವತಃ  ಅಂಟಿಸಿಕೊಂಡರು. ಏಪ್ರಿಲ್ ತಿಂಗಳ ಮೊದಲ ವಾರದ ಹೊತ್ತಿಗೆ ಅವರಿಗೆ ವೈರಸ್ ಅಂಟಿಕೊಂಡಿತ್ತು. ತಕ್ಷಣ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಬೇಕಾದ ಎಲ್ಲಾ ಅತ್ಯಾಧುನಿಕ ಚಿಕಿತ್ಸೆ, ಕ್ಷಣ-ಕ್ಷಣಕ್ಕೂ ನೋಡಿಕೊಳ್ಳುವ ವೈದ್ಯರು, ನರ್ಸ್‌ಗಳ ತಂಡ. ಎಲ್ಲರೂ ಅವರ ಸುತ್ತಮುತ್ತಲೇ ಇದ್ದರು. ಅಷ್ಟಕ್ಕೂ ಡಾ.ಸಿಮೋನ್ ಗಟ್ಟಿ ಗುಂಡಿಗೆಯ ಮನುಷ್ಯ. ಸಾವಿಗೆ ಕಿಂಚಿತ್ತೂ ಭಯಭೀತರಾಗಿರಲಿಲ್ಲ. ಎಲ್ಲರಲ್ಲೂ ಸದಾ ಛಲವನ್ನು ತುಂಬುತ್ತಲೇ ಬಂದಿದ್ದರು. ಅವರು ಧೈರ್ಯಗೆಡುವ, ಆತ್ಮವಿಶ್ವಾಸ ಕಳೆದುಕೊಳ್ಳುವ ಪ್ರಮೇಯವೇ ಇರಲಿಲ್ಲ. ಆದರೆ ಸಾವು ಬಂದಾಗ ಅದ್ಯಾವುದೂ ಕೆಲಸಕ್ಕೆ ಬರಲೇ ಇಲ್ಲ. ಅವರನ್ನು ಯಾರೂ ಸಹ ಉಳಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆ ನೋವು, ಸಂಕಟ ಎದೆಯೊಳಗೆ ಕುದಿಯುತ್ತಲೇ ಇತ್ತು. ಆದರೆ ಅವರನ್ನು ಗೌರವಪೂರ್ಣವಾಗಿ ಕಳಿಸಿಕೊಡಲೂ ಸಾಧ್ಯವಾಗಲಿಲ್ಲ ಎನ್ನುವ ನೋವಿನಿಂದ ಡಾ.ಪ್ರದೀಪ್ ಇನ್ನೂ ಹೊರಬಂದಿಲ್ಲ.

ಡಾ. ಸಿಮೋನ್ ಜೊತೆಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ, ಅವರ ಮಾನವೀಯ ಕಳಕಳಿಯನ್ನು ಕಣ್ಣಾರೆ ಕಂಡ ಸೂಕ್ಷ್ಮಜೀವಶಾಸ್ತ್ರಜ್ಞ ಡಾ. ಭಾಗ್ಯರಾಜ್ ಅವರ ಮಾತು ಎಂತಹ ಕಲ್ಲು ಮನಸ್ಸಿನವರನ್ನು ಕರಗಿಸುವಂತೆ ಮಾಡುತ್ತದೆ. ಜನ ಕ್ಯಾಂಡಲ್ ಹಚ್ತಾರೆ, ತಟ್ಟೆಯನ್ನು ಬಡಿಯುತ್ತಾರೆ. ಆದರೆ ನಾವಿದನ್ನು ಯಾಕೆ ಮಾಡುತ್ತಿದ್ದೇವೆ ಎಂಬುದೇ ಅವರಿಗೆ ಗೊತ್ತಿಲ್ಲ. ಒಂಭತ್ತು ಗಂಟೆಗೆ ಒಂಭತ್ತು ಕ್ಯಾಂಡಲ್ ಹಚ್ಚಿದರೆ ಕೊರೊನಾ ವೈರಸ್ ಸಾಯುತ್ತದೆ! ಎನ್ನುವ ಜನರಿಗೆ ಕೊರೊನೊ ವೈರಸ್ ನಿಂದ ಸತ್ತ ವ್ಯಕ್ತಿಯನ್ನು ಗುಂಡಿ ತೋಡಿ ಸಂಸ್ಕಾರ ಮಾಡಿದರೆ ವೈರಸ್ ಹರಡುವುದಿಲ್ಲ ಎಂಬ ಸಣ್ಣ ಅರಿವು ಕೂಡಾ ಇಲ್ಲ. ನನ್ನ ಅಮ್ಮನೇ ಒಂಭತ್ತು ಕ್ಯಾಂಡಲ್ ಹಚ್ಚಿ ಪ್ರಾರ್ಥನೆ ಮಾಡಿದಳು. ಒಬ್ಬ ಡಾಕ್ಟರ್ ಆಗಿ ಅವಳಿಗೆ ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ!  ಇನ್ನು ಊರಿನ ಜನಕ್ಕೆ ಹೇಗೆ ಹೇಳೋಣ? ಇಡೀ ನಮ್ಮ ಮಾನವ ಸಮಾಜ ತಲೆ ತಗ್ಗಿಸಬೇಕು ಎಂದರೆ ಅತಿಶಯೋಕ್ತಿಯಲ್ಲ!

ಡಾ. ಪ್ರದೀಪ್ ಕುಮಾರ್ ಅವರ ದನಿಯಲ್ಲಿದ್ದ ವೇದನೆಗೆ ಯಾವ ಚೌಕಟ್ಟೂ ಹಾಕಲು ಸಾಧ್ಯವಿರಲಿಲ್ಲ. 

ಜಗತ್ತು ಕಂಡ ಬಹುದೊಡ್ಡ ಜೈವಿಕ ಯುದ್ಧವಿದು. “ಕೊರೊನಾ ವೈರಸ್’ ವಿರುದ್ಧ ಸಮರ ಸಾರಿದ ವೈದ್ಯರು ಹಗಲಿರುಳು ರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ  ಸಮುದಾಯಕ್ಕೆ ಇಡಿ ಮನುಕುಲವೇ ಚಿರಋಣಿಯಾಗಿರಬೇಕು. ಆದರೆ ಚೆನ್ನೈನಲ್ಲಿ ನಡೆದ ಈ  ಘಟನೆ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿತು. ಅಷ್ಟು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದ, ಬಡ ರೋಗಿಗಳ ಸೇವೆಗಾಗಿ ದುಡಿದ, ಅವರ ವೇದನೆಗೆ ದನಿಯಾದ ಯಜಮಾನನ್ನು ಕೊನೆಯ ಬಾರಿಗೆ ನೋಡಲೂ ಅವರ ಪತ್ನಿ ಮತ್ತು ಮಗನಿಗೆ ಸಾಧ್ಯವಾಗಲಿಲ್ಲ! ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಡಿ ಮಣ್ಣು ಹಾಕಲೂ ಈ ಸಮಾಜ ಅವಕಾಶ ಕೊಡಲಿಲ್ಲ! ಅಪ್ಪನಿಗೆ ಕೊನೆಗೊಂದು ಗುಡ್-ಬೈ  ಹೇಳಲೂ ಮಗನಿಗೆ ಸಾಧ್ಯವಾಗಲಿಲ್ಲ. ಇನ್ನೂ ಅವರ ಮಗಳು ಕೋವಿಡ್- 19 ಪಾಸಿಟಿವ್ ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೊರ ಬರಲಾಗಲಿಲ್ಲ. ಆಕೆ ಕೊನೆಗೂ ಅಪ್ಪನ ಮುಖ ನೋಡಲಾಗಲಿಲ್ಲ. ಒಂದು ಸಾವು ಎಲ್ಲರನ್ನೂ ಸ್ತಬ್ಧವಾಗಿಸಿದೆ. ಎಂತಹ ವಿಚಿತ್ರ ಈ ಬದುಕು ಅನ್ನಿಸುತ್ತದೆ.

ವೈದ್ಯನಾಗಿರುವ ನನಗೆ ಅನೇಕ ಬಾರಿ ಸಾವಿನ ದರ್ಶನವಾಗಿದೆ. ಇದು ನಿಜಕ್ಕೂ ಘೋರ ಅನಿಸುತ್ತದೆ. ನಮಗೆ ಯಾವ ಗೌರವ, ವಂದನೆ, ಅಭಿನಂದನೆ, ಸನ್ಮಾನ, ಪ್ರಶಸ್ತಿ, ಪುರಸ್ಕಾರ ಖಂಡಿತಾ ಬೇಡ. ಕೈ ಮುಗಿಯುತ್ತೇನೆ ನಮ್ಮ ವೃತ್ತಿಗೆ ಗೌರವ ಕೊಡಿ ಸಾಕು! ವೈದ್ಯರು, ನರ್ಸ್ ಗಳಿಗೆ ಸೆಕ್ಯೂರಿಟಿ ಕೊಡಿ” ಎನ್ನುವ ಡಾ. ಪ್ರದೀಪ್ ಅವರ ಕೊರಳು ಉಬ್ಬಿ ಬರುವ ಮಾತುಗಳು, ಎಂತಹ ಕಲ್ಲು ಹೃದಯದವರನ್ನೂ ಕರಗಿಸುತ್ತದೆ.

ಕೊರೊನಾ ಮಹಾಮಾರಿಯಿಂದ ಜರ್ಜರಿತವಾದ ಈ ಪ್ರಪಂಚದಲ್ಲಿ  ಮನಸ್ಸು ಭಾರವಾಗಿಸುವ ಅದೆಷ್ಟು ಅಮಾನವೀಯ ಘಟನೆಗಳು ನಡೆಯುತ್ತಿವೆಯೋ ಭಗವಂತನೇ ಬಲ್ಲ! ದಯವಿಟ್ಟು ಕ್ಷಮಿಸಿ ಅಂತ ಮಾತ್ರ ನಾವು ಹೇಳಬಹುದು! ಅಷ್ಟೇ, ಮನಕಲಕುವ ಇಂತಹ ಘಟನೆ ಮತ್ತೆಂದೂ ಮರುಕಳಿಸಬಾರದು!

ಪ್ರತಿಯೊಂದು ಮೃತ ದೇಹಗಳಿಗೂ ಒಂದು ಗೌರವ ಇದೆ. ಅಂತ್ಯಕ್ರಿಯೆ ಅತ್ಯಂತ ಗೌರವಯುತವಾಗಿ ನಡೆಯಲೇಬೇಕು. ಆದರೆ ಈ ಜಗತ್ತಿನ ಅತ್ಯಂತ ನಿಷ್ಠಾವಂತ, ಪರೋಪಕಾರಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಒಬ್ಬ ವೈದ್ಯರಿಗೆ ಸಾವಿನ ನಂತರ ಯಾವುದೇ ಗೌರವಯುತವಾದ ಅಂತ್ಯಕ್ರಿಯೆಯನ್ನು ಈ ಸಮಾಜ ನೀಡಲಿಲ್ಲ ಎನ್ನುವುದು ಅತ್ಯಂತ ನೋವಿನ ಸಂಗತಿಯಾಗಿದೆ!

ಕೊರೊನಾದಿಂದ ಜಗತ್ತು ಸಾಕಷ್ಟು ಬದಲಾಗುತ್ತದೆ ಎಂದು ಭಾವಿಸಿದ್ದೆ. ಇಲ್ಲ ಕಿಂಚಿತ್ತೂ ಬದಲಾಗುವ ಲಕ್ಷಣ ಕಾಣುತ್ತಿಲ್ಲ. ಅದೇ ಮೂಡನಂಬಿಕೆ, ಜಾತಿ, ಧರ್ಮ, ಸ್ವಾರ್ಥ, ರಾಜಕೀಯ ಅಧಿಕಾರದ ದುರಾಸೆ, ಹಣದ ಹಪಾಹಪಿತನ ಮುಂದೆಯೂ ಮುಂದುವರೆಯುತ್ತದೆ ಎಂದು ಭಾಸವಾಗುತ್ತಿದೆ.!

ಮನುಷ್ಯ ಹಕ್ಕಿಯಂತೆ ಆಕಾಶದಲ್ಲಿ ಹಾರುವುದನ್ನು ಕಲಿತ, ಮೀನಿನಂತೆ ನೀರಿನಲ್ಲಿ ಈಜುವುದನ್ನು ಕಲಿತ ಆದರೆ ಮನುಷ್ಯ ನಿಜವಾದ ಮನುಷ್ಯನಾಗುವುದನ್ನೇ ಕಲಿಯಲಿಲ್ಲ.‌‌‌.. 

ಪ್ರಸ್ತುತ  ಕೊರೊನಾ ಮಹಾಮಾರಿಯ ದುರಂತಗಳ ಈ ಕಾಲಘಟ್ಟದಲ್ಲಿ  ಒಬ್ಬ ನಿಷ್ಠಾವಂತ ವೈದ್ಯರು ತನ್ನ ಸೇವಾ ಅವಧಿಯಲ್ಲಿ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಹೊರ ತಂದ ಪುಣ್ಯಾತ್ಮರಾಗಿ, ತನ್ನನ್ನು ತಾನೇ ಸಮರ್ಪಿಸಿಕೊಂಡ ಡಾ. ಸೈಮನ್ ಒಬ್ಬ ನಿಷ್ಠಾವಂತ ವೈದ್ಯರಾಗಿದ್ದರು. `ಮನುಕುಲದ ಸೇವೆಯೇ ಮಾನವನ ಅತ್ಯುತ್ತಮ ಸೇವೆ’ ಎಂದು ನಂಬಿದ್ದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ಕೊರೊನಾ ಸೋಂಕಿತರಾಗಿ ನಂತರ ಗುಣಮುಖರಾಗದೆ ಸಾವನ್ನಪ್ಪಿದ್ದು ಅತ್ಯಂತ ದುಃಖದ ಸಂಗತಿಯಾದರೆ,  ಮೃತ ವೈದ್ಯರ ಅಂತಿಮ ಸಂಸ್ಕಾರ ಗೌರವಯುತವಾಗಿ ನಡೆಯಲಿಲ್ಲ. ಕುಟುಂಬದ ಸದಸ್ಯರು, ಅಪಾರ ಬಂಧು- ಬಳಗ, ಸ್ನೇಹಿತರು ಯಾರೂ ಭಾಗವಹಿಸಲಾಗಲಿಲ್ಲ. ಜೊತೆಗೆ ಅಂತ್ಯಕ್ರಿಯೆ ಸಮಯದಲ್ಲಿ ಯಾವುದೇ ಧಾರ್ಮಿಕ ಸಂಪ್ರದಾಯದ ವಿಧಿವಿಧಾನಗಳನ್ನೂ ಸಹ ಮಾಡಲಾಗದೆ, ಪ್ರತಿಭಟನೆಯ ಪರಿಣಾಮ ಅವಸರವಾಗಿ ಆತಂಕ, ಭಯದಿಂದಲೇ ಅಂತ್ಯಸಂಸ್ಕಾರ ಮಾಡಿ ಮುಗಿಸಲಾಯಿತು.

ಶ್ರೇಷ್ಠ ಸಾಹಿತಿ ಡಾ. ಸಿದ್ದಯ್ಯ ಪುರಾಣಿಕರವರ ಒಂದು ನುಡಿಮುತ್ತನ್ನು ಖಂಡಿತಾ ಸ್ಮರಿಸಿಕೊಳ್ಳಲೇಬೇಕು. “ಏನಾದರೂ ಆಗು ಮೊದಲು ಮಾನವನಾಗು” ಈ ಮಾತು ಇಂದಿಗೂ ಹಾಗೂ ಎಂದೆಂದಿಗೂ ಸರ್ವಕಾಲಕ್ಕೂ ಸತ್ಯವಾಗಿದೆ ಎಂಬುದನ್ನು ಅಕ್ಷರಶಃ ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಇಂದು ನಾವುಗಳು “ಕೊರೊನಾ ವೈರಸ್” ವಿರುದ್ಧ ಹೋರಾಡಬೇಕೇ ಹೊರತು, ಕೊರೊನಾ ಸೋಂಕಿತ ಜನರ ವಿರುದ್ಧವಲ್ಲ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು‌.


ಏನಾದರೂ ಆಗು ಮೊದಲು ಮಾನವನಾಗು... - Janathavaniಜಿ. ಎ.ಜಗದೀಶ್
ಪೊಲೀಸ್ ಅಧೀಕ್ಷಕರು(ನಿ)
[email protected]

 

error: Content is protected !!