ಸುಳ್ ಸುಳ್ಳೇ ಪಾಸಿಟಿವ್

ಗರ್ಭಿಣಿಯರಿಗೆ ಕಾಡಿದ ಹುಸಿ ವರದಿ

ದಾವಣಗೆರೆ, ಜೂ. 23 – ಆವರಗೊಳ್ಳ ಹಾಗೂ ದೊಡ್ಡಬಾತಿಯ ನಾಲ್ವರು ಗರ್ಭಿಣಿಯರು ಸೇರಿದಂತೆ ಆರು ಜನರಿಗೆ ಯಾವುದೇ ಕೊರೊನಾ ಸೋಂಕಿಲ್ಲದಿದ್ದರೂ, ಪರೀಕ್ಷೆಯಲ್ಲಿ ಆದ ಲೋಪದಿಂದಾಗಿ ಹುಸಿ ಪಾಸಿಟಿವ್ ಬಂದಿದೆ.

ಆವರಗೊಳ್ಳ ಹಾಗೂ ದೊಡ್ಡಬಾತಿಯ ತಲಾ ಇಬ್ಬರು ಗರ್ಭಿಣಿಯರೂ ಸೇರಿದಂತೆ ಒಟ್ಟು ಆರು ಜನರ ಗಂಟಲು ದ್ರವದ ಮಾದರಿಯನ್ನು ಖಾಸಗಿ ಆಸ್ಪತ್ರೆಗೆ ಕಳಿಸಿದ ಸಂದರ್ಭದಲ್ಲಿ ತಪ್ಪಾಗಿ ಪಾಸಿಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಸವನಾಳು ಹಾಗೂ ಶ್ಯಾಗಲೆಯ ಇಬ್ಬರು ವ್ಯಕ್ತಿಗಳು ಹುಸಿ ಪಾಸಿಟಿವ್‌ಗೆ ಗುರಿಯಾದ ಇನ್ನಿಬ್ಬರಾಗಿದ್ದಾರೆ.

ಪಾಸಿಟಿವ್ ಬಂದ ಈ ಆರು ಜನ ಕಂಟೈನ್‌ಮೆಂಟ್ ವಲಯಕ್ಕೆ ಭೇಟಿ ನೀಡಿರಲಿಲ್ಲ. ಇವರ ಹಳ್ಳಿಗಳಲ್ಲಿ ಈ ಹಿಂದೆ ಸೋಂಕು ಕಂಡು ಬಂದಿರಲಿಲ್ಲ. ಇವರ ಪ್ರಾಥಮಿಕ ಸಂಪರ್ಕದವರಲ್ಲೂ ಪಾಸಿಟಿವ್ ಇರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಇವರ ಮಾದರಿಗಳನ್ನು ಮತ್ತೆ ಖಾಸಗಿ ಆಸ್ಪತ್ರೆಗೆ ಕಳಿಸಿದಾಗ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಆನಂತರ ಬೆಂಗಳೂರಿನ ಎನ್.ಐ.ವಿ.ಗೆ ಜೂನ್ 20ರಂದು ಪರೀಕ್ಷೆಗೆ ಕಳಿಸಲಾಗಿತ್ತು. ಆ ವರದಿ ಸಹ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆವರಗೊಳ್ಳ, ದೊಡ್ಡಬಾತಿ, ಬಸವನಾಳು ಹಾಗೂ ಶ್ಯಾಗಲೆ ಗಳ ಕಂಟೈನ್‌ಮೆಂಟ್‌ ವಲಯ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಬೀಳಗಿ ಹೇಳಿದ್ದಾರೆ.

ಹುಸಿ ಪಾಸಿಟಿವ್ ವರದಿಗೆ ಗುರಿಯಾಗಿದ್ದ ಆವರಗೊಳ್ಳದ ಇಬ್ಬರು ಹಾಗೂ ದೊಡ್ಡಬಾತಿಯ ಓರ್ವ ಗರ್ಭಿಣಿಗೆ ಹೆರಿಗೆಯಾ ಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ನೆಗೆಟಿವ್ ಬಂದ ಆರು ಜನರ ಮಾದರಿಯನ್ನು ಇನ್ನೊಮ್ಮೆ ಪರೀಕ್ಷೆಗೆ ಕಳಿಸಲಾ ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ವಾರಗಳ ಕಾಲ ಮನೆಯಲ್ಲೇ ಇರಲು ತಿಳಿಸಲಾಗಿದೆ ಎಂದು ಬೀಳಗಿ ಹೇಳಿದ್ದಾರೆ. ಯಾವ ಕಾರಣದಿಂದ ವರದಿ ತಪ್ಪಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸ ಲಾಗುತ್ತಿದೆ. ಈ ಬಗ್ಗೆ ಲ್ಯಾಬ್‌ ನಿಂದ ವಿವರಣೆ ಕೇಳಿದ್ದೇವೆ ಎಂದವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಡಿಹೆಚ್‍ಓ ಡಾ.ರಾಘವೇಂದ್ರ, ಡಿಎಸ್‍ಓ ಡಾ.ರಾಘವನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!