ವಾಣಿಜ್ಯ ವಿದ್ಯಾರ್ಥಿಗಳು ಜಾಗತಿಕ ನಾಗರಿಕರು

ವಾಣಿಜ್ಯ ವಿದ್ಯಾರ್ಥಿಗಳು ಜಾಗತಿಕ ನಾಗರಿಕರು

ಜಿ.ಎಂ. ವಿವಿ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕುಲಪತಿ ಎಸ್.ಆರ್. ಶಂಖಪಾಲ್‌

ದಾವಣಗೆರೆ, ಮೇ 14 – ವಾಣಿಜ್ಯ ವಲಯದ ಹುದ್ದೆಗಳು ಈಗ ಪ್ರಾಂತ್ಯ ಇಲ್ಲವೇ ದೇಶಕ್ಕೆ ಸೀಮಿತವಲ್ಲ. ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ಈಗ ಜಾಗತಿಕ ನಾಗರಿಕರಂತಾಗಿದ್ದಾರೆ. ವಿಶ್ವದ ಯಾವುದೇ ಭಾಗದಲ್ಲಿ ಉದ್ಯೋಗಕ್ಕೆ ಸಿದ್ಧವಾಗಬೇಕಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಎಸ್.ಆರ್. ಶಂಖಪಾಲ್ ತಿಳಿಸಿದರು.

ನಗರದ ಜಿ.ಎಂ. ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಆಯೋ ಜಿಸಲಾಗಿರುವ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. `ವಾಣಿಜ್ಯ ಶಿಕ್ಷಣ – ಗಡಿ ದಾಟಿ ಸಂಪರ್ಕ – ಭವಿಷ್ಯ ರೂಪಿಸುವುದು’ ಎಂಬ ವಿಷಯದ ಕುರಿತು ಸಂಕಿರಣ ಆಯೋಜಿಸಲಾಗಿತ್ತು.

ಜಾಗತಿಕ ಅಗತ್ಯಗಳು ಹಾಗೂ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಎಂ.ಬಿ.ಎ. ಹಾಗೂ ಎಂ.ಕಾಂ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗ ಬೇಕಿದೆ. ವಿದ್ಯಾರ್ಥಿಗಳು ಜಾಗತಿಕವಾಗಿ ಹೆಚ್ಚು ತೆರೆದುಕೊಳ್ಳಬೇಕು ಹಾಗೂ ಹೆಚ್ಚು ವಿಶ್ವಾಸ ಹೊಂದ ಬೇಕು. ಜಾಗತಿಕ ಸ್ಪರ್ಧೆಗೆ ಸಿದ್ಧವಾಗಬೇಕು ಎಂದರು.

ದೊಡ್ಡ ನಗರಗಳ ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ಹೆಚ್ಚು ಅನುಕೂಲ ಇರುತ್ತದೆ. ಸಣ್ಣ ನಗರಗಳ ವಿದ್ಯಾರ್ಥಿಗಳಿಗೆ ಜಾಗತಿಕ ಅನುಭವ ಇಲ್ಲದೇ ವಿಶ್ವಾಸ ಕುಂಠಿತವಾಗುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಮಟ್ಟದ ಅನುಭವಕ್ಕೆ ಒಗ್ಗಿಕೊಳ್ಳಲು ಇಂತಹ ಸಂಕಿರಣಗಳು ಅನುಕೂಲಕರ ಎಂದವರು ಹೇಳಿದರು.

ವಿದೇಶಗಳಲ್ಲಿ ಶಿಕ್ಷಣ ಪಡೆದಾಗ ಉದ್ಯೋಗಾವಕಾಶ ಹೆಚ್ಚು ಎಂಬ ಭಾವನೆ ಇದೆ. ಆದರೆ, ಯುರೋಪ್, ಅಮೆರಿಕ ಮುಂತಾದ ದೇಶಗಳ ಪರಿಣಿತರನ್ನು ಭಾರತಕ್ಕೆ ಕರೆಸಿದಾಗಲೂ ಉತ್ತಮ ಅನುಭವ ಪಡೆಯಲು ಸಾಧ್ಯ ಎಂದು ಶಂಖಪಾಲ್ ಅಭಿಪ್ರಾಯ ಪಟ್ಟರು.

ಎಂ.ಬಿ.ಎ. ವಿದ್ಯಾರ್ಥಿಗಳು ಕೇವಲ ಸೇಲ್ಸ್‌ ಮ್ಯಾನ್ ಆಗುವ ಗುರಿ ಹೊಂದಿದರೆ, ಈ ಶಿಕ್ಷಣ ಪಡೆಯುವುದಕ್ಕೆ ಅರ್ಥವಿರುವುದಿಲ್ಲ. ಉನ್ನತ ಹಂತದ ಉದ್ಯೋಗಗಳ ಗುರಿ ಹೊಂದುವುದು ಅನಿ ವಾರ್ಯ. ಇದಕ್ಕಾಗಿ ಕಠಿಣ ಸವಾಲುಗಳಿಗೆ ಹಿಂಜರಿ ಯಬಾರದು ಎಂದವರು ಕಿವಿಮಾತು ಹೇಳಿದರು.

ಬ್ರಿಟನ್‌ನ ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಲೆಬರ್ನ್ ರೋಸ್ ಮಾತನಾಡಿ, ಎಂ.ಬಿ.ಎ. ವಲಯದವರ ಸಣ್ಣ ಬದಲಾವಣೆಗಳೂ ತಮ್ಮದೇ ಆದ ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತವೆ. ಲಂಡನ್‌ ವಿಶ್ವವಿದ್ಯಾ ಲಯದಲ್ಲಿ ನಾನು ಆರಂಭಿಸಿದ ಹೊಸ ಕೋರ್ಸ್ ಹಲವರ ಜೀವನ ಬದಲಿಸಿತ್ತು ಎಂದು ಹೇಳಿದರು.

ಬ್ರಿಟನ್‌ನ ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯದ ಉಪನ್ಯಾಸಕ ಲಾರೆನ್ಸ್ ಫಿಶರ್ ಮಾತನಾಡಿ, ನಾನು ಕಲಿಕೆಯ ಆರಂಭಿಕ ದಿನಗಳಲ್ಲಿ ನಿರ್ಲಕ್ಷ್ಯ ತೋರಿದ್ದು, ನಂತರದಲ್ಲಿ ಉದ್ಯೋಗದ ಮೇಲೆ ಪರಿಣಾಮ ಬೀರಿತ್ತು. ವಿದ್ಯಾರ್ಥಿಗಳು ಅಂತಹ ತಪ್ಪು ಮಾಡಬಾರದು ಎಂದು ಕಿವಿಮಾತು ಹೇಳಿದರು.

ಜಿ.ಎಂ.ಐ.ಟಿ. ಪ್ರಾಂಶುಪಾಲ ಸಂಜಯ್ ಪಾಂಡೆ ಮಾತನಾಡಿ, ಇಂಜಿನಿಯರಿಂಗ್ ಪದವೀಧರರೂ ಸಹ ನಿರ್ವಹಣಾ ಶಾಸ್ತ್ರದ ಪರಿಣಿತರಾದಾಗ ಹೆಚ್ಚಿನ ಸಾಧನೆ ಸಾಧ್ಯ ಎಂದು ಹೇಳಿದರು.

ವೇದಿಕೆಯ ಮೇಲೆ ಎಂ.ಬಿ.ಎ. ವಿಭಾಗದ ನಿರ್ದೇಶಕ ಬಕ್ಕಪ್ಪ, ಜಿ.ಎಂ. ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಪ್ರೊ ಹೆಚ್.ಡಿ. ಮಹೇಶಪ್ಪ, ರಿಜಿಸ್ಟ್ರಾರ್ ಬಿ.ಎಸ್. ಸುನೀಲ್ ಕುಮಾರ್, ಎಂಬಿಎ ವಿಭಾಗದ ಮುಖ್ಯಸ್ಥ ಪಿ.ಎಸ್.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪಲ್ಲವಿ ಮತ್ತು ರಕ್ಷಿತ ಪ್ರಾರ್ಥಿಸಿದರು. ಬಸವರಾಜ ಸ್ವಾಮಿ ಸ್ವಾಗತಿಸಿದರೆ, ಅಮಿತ್ ಕುಮಾರ್ ನಿರೂಪಿಸಿದರು. ಎಸ್. ಶಿವಕುಮಾರ ವಂದಿಸಿದರು. 

error: Content is protected !!