ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನಾಮಪತ್ರ ದಾಖಲು
ದಾವಣಗೆರೆ, ಏ. 19 – ನಗರದ ಮೂರು ದಿಕ್ಕುಗಳಿಂದ ಆರಂಭಿಸಲಾದ ಬೃಹತ್ ಮೆರವಣಿಗೆಯ ಮೂಲಕ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮೆರವಣಿಗೆಯಲ್ಲಿ ಕೇಸರಿ ಪಕ್ಷಕ್ಕೆ ಜೆಡಿಎಸ್ ಸಹ ಸಾಥ್ ನೀಡಿತ್ತು.
ನಗರದಲ್ಲಿ ಏಕಕಾಲಕ್ಕೆ ಮೂರು ಕಡೆಯಿಂದ ಆರಂಭಗೊಂಡ ಮೆರವಣಿಗೆ ಗಾಂಧಿ ವೃತ್ತದಲ್ಲಿ ಜೊತೆಯಾಗಿ ಹಳೇ ವಾಣಿ ಹೋಂಡಾ ಶೋ ರೂಮ್ವರೆಗೂ ತೆರಳಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರು ನಗರ ದೇವತೆ ದುಗ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪತಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿಟುವಳ್ಳಿ ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಹರಿಹರ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ನೇತೃತ್ವದ ತಂಡ ರಾಂ ಅಂಡ್ ಕೋ ವೃತ್ತದಲ್ಲಿ ಗಣೇಶ ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ದಾವಣಗೆರೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ: ಯಡಿಯೂರಪ್ಪ
ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಇಲ್ಲಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ್ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸವಾಲಿದೆ. ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ. ಗಾಯತ್ರಿ ಸಿದ್ದೇಶ್ವರ ಅವರು ದೊಡ್ಡ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ತಿಳಿಸಿದರು.ರಾಜ್ಯದಲ್ಲಿ ವಾತಾವರಣ ಮೊದಲಿಗಿಂತ ಚೆನ್ನಾಗಿದೆ. ದಿನೇ ದಿನೇ ಬಿಜೆಪಿ ಪರವಾದ ವಾತಾವರಣ ಹೆಚ್ಚಾಗುತ್ತಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸ ಇದೆ ಎಂದವರು ಹೇಳಿದರು.
‘ಗರೀಬಿ ಹಟಾವೋ’ಮಾಡಿದ್ದು ಮೋದಿ
ದಾವಣಗೆರೆ, ಏ. 19 – ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷ §ಗರೀಬಿ ಹಟಾವೋ¬ ಘೋಷಣೆ ಮಾಡಿತ್ತು. ಆದರೆ, ಅವರ ಮೊಮ್ಮಗ ರಾಹುಲ್ ಗಾಂಧಿ ಬಂದರೂ ಬಡತನ ನೀಗಿರಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ನಟಿ ಹಾಗೂ ಬಿಜೆಪಿ ಧುರೀಣೆ ಶ್ರುತಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಮತ ಕೇಳುತ್ತಿದೆ. ಯಾವುದೇ ಯೋಜನೆಯನ್ನು ಕೇವಲ ಆಕರ್ಷಣೆಗೆ ಸೀಮಿತವಾಗಿ ಮಾಡಬಾರದು. ಕಾಂಗ್ರೆಸ್ ಆಕರ್ಷಣೆಗಾಗಿ ಮಾತ್ರ ಗರೀಬಿ ಹಟಾವೋ ಘೋಷಣೆ ಮಾಡಿತ್ತು, ಆ ದಿಸೆಯಲ್ಲಿ ಕೆಲಸ ಮಾಡಿದ್ದು ಮೋದಿ ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ. ಆದರೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ಜಾಮೀನಿನ ಮೇಲಿರುವವರು ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಿಜೆಪಿ ಎಲ್ಲ ಧರ್ಮದವರನ್ನು ಒಂದಾಗಿ ಕರೆದುಕೊಂಡು ಹೋಗುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವೋಟಿನ ರಾಜಕೀಯಕ್ಕಾಗಿ ಧರ್ಮವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಅವರು ಸಲಿಗೆ ಕೊಟ್ಟ ಕಾರಣಕ್ಕೆ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯಘೋಷ ಕೇಳಿ ಬಂದಿದೆ. ರಾಮ ನವಮಿಯಂದು ಜೈ ಶ್ರೀರಾಮ್ ಎನ್ನಬಾರದು ಎನ್ನುತ್ತಾರೆ. ಇದಕ್ಕೆ ಕಾಂಗ್ರೆಸ್ ಅನುಕೂಲ ಮಾಡಿಕೊಟ್ಟಿದೆ. ಕೇವಲ ಮತಕ್ಕಾಗಿ ಒಂದು ಧರ್ಮವನ್ನು ಓಲೈಸಿ, ನಮ್ಮ ನಡುವೆ ಒಡಕು ತರುತ್ತಿದೆ ಎಂದು ಆರೋಪಿಸಿದರು.
ನಾರಿಯರು ಈ ದೇಶ ಮುನ್ನಡೆಸಬೇಕು ಎಂಬುದು ಮೋದಿ ಆಸೆ. ಇದಕ್ಕಾಗಿಯೇ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಕಲ್ಪಿಸುವ ಶಾಸನ ಜಾರಿಗೆ ತಂದಿದ್ದಾರೆ ಎಂದು ಶ್ರುತಿ ಹೇಳಿದರು.
ಅಭಿವೃದ್ಧಿ, ಮೋದಿ ಹವಾ : ಗಾಯತ್ರಿ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹವಾ ಎರಡೂ ಇದೆ. ಜನ ಬಿಜೆಪಿ ಪರ ಮತ ಚಲಾಯಿಸಲು ಉತ್ಸಾಹ ಹೊಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದ್ದಾರೆ. ಶುಕ್ರವಾರ ಎರಡು ಸೆಟ್ ನಾಮಪತ್ರ ಸಲ್ಲಿಕೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಎಲ್ಲೂ ನಕಾರಾತ್ಮಕತೆ ಕಂಡು ಬಂದಿಲ್ಲ. ಎಲ್ಲೆಡೆ ಬಿಜೆಪಿ ಪರ ಉತ್ಸಾಹ ಇದೆ ಎಂದು ಹೇಳಿದರು.
ಕಣದಲ್ಲಿ ಎರಡನೇ ಗಾಯತ್ರಿ !
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಜೆ.ಎಂ. ಗಾಯತ್ರಿ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಜಗಳೂರು ತಾಲ್ಲೂಕಿನ ಗೊಡೆ ಗ್ರಾಮದವರು. ವಿಶೇಷವೆಂದರೆ, ಅವರ ಪತಿಯ ಹೆಸರು ಜಿ.ಎಂ. ಸಿದ್ದೇಶಿ ಆಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಮನಮೋಹನ್ ಸಿಂಗ್ ಆಡಳಿತದಲ್ಲಿ ಆರ್ಥಿಕತೆಯಲ್ಲಿ 14ನೇ ಸ್ಥಾನದಲ್ಲಿದ್ದ ಭಾರತ, ಈಗ ಐದನೇ ಸ್ಥಾನಕ್ಕೆ ಬಂದಿದೆ. ಹಿಂದಿನ ಕಾಂಗ್ರೆಸ್ ಆಡಳಿತ ಹಾಗೂ ಈಗಿನ ನರೇಂದ್ರ ಮೋದಿ ಆಡಳಿತದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ.
– ಮಾಜಿ ಸಚಿವ ಮುರುಗೇಶ್ ನಿರಾನಿ
ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಬರಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರಿ ಹೊಂದಿದ್ದಾರೆ. ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಜೊತೆಗೆ, ದಾವಣಗೆರೆಯಲ್ಲೂ ಬಿಜೆಪಿ ಗೆದ್ದು ಪ್ರಗತಿಯಲ್ಲಿ ಸಹಭಾಗಿ ಆಗಬೇಕು.
– ಮಾಜಿ ಸಚಿವ ಕೆ. ಕರುಣಾಕರ ರೆಡ್ಡಿ
ಹೆಚ್ಚುವರಿ ಅಭ್ಯರ್ಥಿಯಾಗಿ ಜಿ.ಎಂ. ಸಿದ್ದೇಶ್ವರ
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಬಿಜೆಪಿಯ ಹೆಚ್ಚುವರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಶಾಸಕ ಜಿ. ಜನಾರ್ದನ ರೆಡ್ಡಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಬಸವರಾಜನಾಯ್ಕ ಹಾಗೂ ಎಸ್.ವಿ. ರಾಮಚಂದ್ರ ಅವರಿದ್ದರು. ಗಾಯತ್ರಿ ಸಿದ್ದೇಶ್ವರ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಹೆಚ್ಚುವರಿ ಅಭ್ಯರ್ಥಿಯಾಗಿ ಸಿದ್ದೇಶ್ವರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಡುಗೆಗೂ ಸೈ… ಆಡಳಿತಕ್ಕೂ ಸೈ…
ಬಿಜೆಪಿಯ ಬೃಹತ್ ಮೆರವಣಿಗೆಯಲ್ಲಿ ನಾರಿ ಶಕ್ತಿ ಪ್ರಮುಖವಾಗಿ ಬಿಂಬಿಸಲಾಗಿತ್ತು. §ಅಡುಗೆಗೂ ಸೈ… ಆಡಳಿತಕ್ಕೂ ಸೈ…¬ ಎಂಬ ಘೋಷಣೆ ಹೊಂದಿದ್ದ ವಾಹನ ರೂಪಿಸಲಾಗಿತ್ತು. ಇದರ ಮೇಲೆ ವಿವಿಧ ಸಾಧಕಿಯರ ವೇಷ ಧರಿಸಿದ್ದ ಮಹಿಳೆಯರಿದ್ದರು. ಮಹಿಳಾ ಮೋರ್ಚಾದ ಸದಸ್ಯರು ಸೈನಾ ನೈಹ್ವಾಲ್, ಸುನೀತಾ ವಿಲಿಯಮ್ಸ್, ಸಾಲು ಮರದ ತಿಮ್ಮಕ್ಕ, ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ, ಕಿರಣ್ ಬೇಡಿ, ಅಕ್ಕಮಹಾದೇವಿ ಮುಂತಾದ ಮುಂತಾದ ಸಾಧಕಿಯರ ವೇಷಧಾರಿಗಳಾಗಿದ್ದು ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವೇಷಧಾರಿ ಜನರ ಕಡೆ ಕೈ ಬೀಸುತ್ತಾ ಗಮನ ಸೆಳೆದರು. ಜೂನಿಯರ್ ಮೋದಿ ಮತದಾರರನ್ನು ಭೇಟಿ ಮಾಡಿ ಮತ ಯಾಚನೆಯನ್ನೂ ಮಾಡಿದರು.
ಗಾಯಕ ಚಂದನ್ ಶೆಟ್ಟಿ ಅವರು ಬಿಜೆಪಿ ಪರ ಹಾಡುಗಳನ್ನು ಹಾಡಿ ಉತ್ಸಾಹ ಮೂಡಿಸುತ್ತಿದ್ದರು. ರೋಡ್ ಶೋನಲ್ಲಿ ಬಿಜೆಪಿ ಹಾಗೂ ಜೆಡಿಎಸ್ಗಳ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ಉತ್ಸಾಹದಿಂದ ಘೋಷಣೆ ಕೂಗುತ್ತಿದ್ದರು. ಕೆಲವರು ಎರಡೂ ಪಕ್ಷಗಳ ಬಾವುಟ ಹಿಡಿದು ಸಮ್ಮಿಳನದ ಸೂಚನೆ ನೀಡುತ್ತಿದ್ದರು.
ನಂತರ ಗಾಯತ್ರಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಮಾಧುಸ್ವಾಮಿ, ಭೈರತಿ ಬಸವರಾಜ್, ಪರಿಷತ್ ಸದಸ್ಯ ರವಿಕುಮಾರ್ ಅವರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಹರಿಹರ ಶಾಸಕ ಬಿ.ಪಿ.ಹರೀಶ್, ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವರಾದ ಭೈರತಿ ಬಸವರಾಜ್, ಮುರುಗೇಶ್ ನಿರಾಣಿ, ಎಸ್.ಎ.ರವೀಂದ್ರನಾಥ್, ಜೆ.ಮಾಧುಸ್ವಾಮಿ, ಜಿ.ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಹೆಚ್.ಪಿ.ರಾಜೇಶ್, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಬಸವರಾಜನಾಯ್ಕ್, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ಚಿತ್ರ ನಟಿ ಶೃತಿ, ಗಾಯಕ ಚಂದನ್ ಶೆಟ್ಟಿ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ರಾಜನಹಳ್ಳಿ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ್ ಕಡ್ಲೇಬಾಳು, ಅನಿಲ್ ಕುಮಾರ್ ನಾಯ್ಕ್, ಐರಣಿ ಅಣ್ಣೇಶ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ತುಮ್ಕೋಸ್ ಮಾಜಿ ಅಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಚಂದ್ರಶೇಖರ್ ಪೂಜಾರ್, ಮಾಜಿ ಮುಖ್ಯ ಸಚೇತಕರಾದ ಎ.ಹೆಚ್.ಶಿವಯೋಗಿಸ್ವಾಮಿ, ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಚಿ.ಚಿದಾನಂದಪ್ಪ, ಚುನಾವಣಾ ಸಂಚಾಲಕ ವೀರೇಶ್ ಹನಗವಾಡಿ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.