ರಾಣೇಬೆನ್ನೂರು ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ಭಾವೀ ಶಿಕ್ಷಕರಿಗೆ ಡಾ.ಆರ್.ಎಂ.ಕುಬೇರಪ್ಪ ಕರೆ
ರಾಣೇಬೆನ್ನೂರು, ಏ. 3 – `ನನಗಾಗಿ ಸ್ವಲ್ಪ, ಸಮಾಜಕ್ಕೆ ಸರ್ವಸ್ವ’ವೆಂಬ ಸಕಾರಾತ್ಮಕ ಚಿಂತನೆಯನ್ನು ಭಾವೀ ಶಿಕ್ಷಕರು ಹೊಂದಬೇಕೆಂದು ಬಿ.ಎ.ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರಪ್ಪ ಕರೆ ನೀಡಿದರು.
ಇಲ್ಲಿನ ಬಿ.ಎ.ಜೆ.ಎಸ್.ಎಸ್ ಬಿ.ಇಡಿ ಕಾಲೇಜ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಬಿ.ಇಡಿ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ನ ಒಂದು ದಿನದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಬದುಕು ಹಾಗೂ ಬದುಕಲು ಕಲಿ’ ಎನ್ನುವ ಧ್ಯೇಯದೊಂದಿಗೆ ಸ್ವಾವಲಂಬಿ ಜೀವನದ ಅಡಿಪಾಯವೆಂದರೆ ಅದುವೇ ಸ್ಕೌಟ್ಸ್ ಮತ್ತು ಗೈಡ್ಸ್ ಎಂದರು.
ಮುಖ್ಯ ಅತಿಥಿ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ನಿಸ್ವಾರ್ಥ ಸೇವೆ ನಮ್ಮೆಲ್ಲರ ಗುರಿಯಾಗಬೇಕು. ಭಾರತದ ನೂರಾರು ಕೋಟಿ ಜನಸಂಖ್ಯೆಯಲ್ಲಿ ಒಂದು ಕೋಟಿ ಜನ ಸಮಾಜಸೇವೆ ಕೈಗೊಂಡರೆ ಸಾಕು
ಭಾರತ ಸ್ವರ್ಗವಾಗುತ್ತದೆ. ನವ
ಸಮಾಜದ ನಿರ್ಮಾಣಕ್ಕೆ ಸಿದ್ಧರಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಲ್ಲೇಶಪ್ಪ ಕೆ.ಟಿ, ಎಂ.ಆರ್. ಪಾಟೀಲ, ಶ್ರೀಮತಿ ಎಸ್. ಎಂ. ಕಟಗಿ, ಶ್ರೀಮತಿ ರೂಪಾಂಜಲಿ ಆರ್. ಓಣಿಮನಿ, ಪರಶುರಾಮ ಗಿಡ್ಡಪ್ಪಳವರ ಇವರುಗಳು ಸ್ಕೌಟ್ಸ್ ಮತ್ತು ಗೈಡ್ಸ್ ಮಾಹಿತಿಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಂ ಮೃತ್ಯುಂಜಯ ಮಾತನಾಡಿ, ಸದೃಢ ದೇಹದಲ್ಲಿ , ಸದೃಢ ಮನಸ್ಸಿನ ನಿರ್ಮಾಣದ ಜೊತೆಗೆ ಸಚ್ಛಾರಿತ್ರ್ಯವನ್ನು ಸಹ ಹೊಂದಿರಬೇಕೆಂದರು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಪ್ರೊ. ಶಿವಕುಮಾರ ಬಿಸಲಳ್ಳಿ, ಪ್ರೊ. ಪರಶುರಾಮ ಪವಾರ, ಡಾ. ಹೆಚ್.ಐ ಬ್ಯಾಡಗಿ, ಪ್ರೊ. ಶ್ರೀಕಾಂತ ಗೌಡಶಿವಣ್ಣನವರ, ಪ್ರೊ. ಎ.ಶಂಕರನಾಯ್ಕ, ಪ್ರೊ. ವಂದನಾ ಪಿ ಎನ್, ವೀಣಾ ಭಂಗಿ, ಮುತ್ತುರಾಜ ಸಿದ್ದಣ್ಣನವರ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಉಮಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು.ಪೂಜಾ ದೊಡ್ಡಮನಿ ಸ್ವಾಗತಿಸಿದರು. ಕು. ಭೂಮಿಕಾ ಸೊಂಟೇರ ಕಾರ್ಯಕ್ರಮವನ್ನು ನಿರೂಪಿಸಿ ದರೆ, ಕು. ಅಶ್ವಿನಿ ಹಲಗೇರಿ ವಂದಿಸಿದರು.